By: Lokesh Jagannath

ಮಹಿಳೆ ಆರ್ಥಿಕವಾಗಿ ಸಬಲೀಕರಣವನ್ನು ಕಾಣಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿವೆ. ಅಂತೆಯೇ ಬರುವ ದಿನಗಳಲ್ಲಿ ಹಳ್ಳಿಯ ಮಹಿಳೆಯರೇ ವಾಹನ ಚಲಾಯಿಸುತ್ತಾರೆ. ಮನೆಯ ಕಸ ಸಂಗ್ರಹಣೆ, ವಿಂಗಡಣೆ ಎಲ್ಲದಕ್ಕೂ ಅವರೇ ಸಿದ್ಧರಾಗುತ್ತಿದ್ದಾರೆ. ಈ ಕಾಯಕಕ್ಕೆ ಸ್ತ್ರೀಯರಿಗೆ ಆದ್ಯತೆ ನೀಡಲಾಗುತ್ತಿದೆ.
ರಾಜ್ಯದಲ್ಲಿ ಆರು ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿದ್ದು, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಆಯ್ದ ಜಿಲ್ಲೆಗಳಲ್ಲಿ ಕಸ ಸಂಗ್ರಹಣಾ ವಾಹನ ಚಾಲನೆ, ಕಸ ವಿಂಗಡಣೆ, ತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆ ಎಲ್ಲವನ್ನು ಮಹಿಳಾ ಗುಂಪುಗಳಿಗೆ ನೀಡಲಾಗುತ್ತಿದೆ. ಆರಂಭದಲ್ಲಿ ಶಿವಮೊಗ್ಗ, ಹಾವೇರಿ, ಚಿತ್ರದುರ್ಗ,ರಾಯಚೂರು ಜಿಲ್ಲೆಗಳ 30 ಜನ ಮಹಿಳೆಯರಿಗೆ ವಾಹನ ಚಾಲನೆಯ ತರಬೇತಿಯನ್ನು ಕೌಶಲ್ಯ ಕರ್ನಾಟಕ ವತಿಯಿಂದ ಆಯ್ಕೆ ಮಾಡಿ ತರಬೇತಿ ನೀಡಲಾಗಿದ್ದು, 15ನೇ ಹಣಕಾಸು ನಿಧಿ, ಜಿಲ್ಲಾ ಪಂಚಾಯಿತಿ ಅನುದಾನ ಬಳಸಿಕೊಂಡು ವಾಹನ ವ್ಯವಸ್ಥೆ, ಡಂಪಿಂಗ್ ಯಾರ್ಡ್, ಮನೆ ಮನೆಗೆ ಕಿಟ್ ವಿತರಿಸಲಾಗಿದೆ. ಕಸ ಸಂಗ್ರಹಿಸಿ ಮಹಿಳೆಯರು ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ವಿಂಗಡಣೆಗೂ ಗುಂಪು ರಚಿಸಿದ್ದಾರೆ.
ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡು ಅವರೇ ಇದನ್ನು ನಿರ್ವಹಣೆ ಮಾಡುತ್ತಿದ್ದು, ಶಿವಮೊಗ್ಗ ಜಿಲ್ಲೆಯ ಕೋಹಳ್ಳಿ ಮತ್ತು ಹೊಳಲೂರಿನಲ್ಲಿ ಪ್ರಾಯೋಗಿಕ ಪ್ರಯತ್ನ ಜಿಲ್ಲಾ ಪಂಚಾಯಿತಿ ಶಿವಮೊಗ್ಗ ವತಿಯಿಂದ ಯಶಸ್ವಿಯಾಗಿ ಮುನ್ನಡೆದು ಮಾದರಿಯಾಗುತ್ತಿದೆ.

ಎಂ.ಎಲ್.ವೈಶಾಲಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯಿತಿ, ಶಿವಮೊಗ್ಗ ನ್ಯೂಸ್‌ ನೆಕ್ಷ್ಟ್‌ನೊಂದಿಗೆ ಮಾತನಾಡಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ವತಿಯಿಂದ ಆಯ್ದ ಗ್ರಾಮ ಪಂಚಾಯಿತಿ ಮಹಿಳೆಯರಿಗೆ ವಾಹನ ತರಬೇತಿ ನೀಡಿ, ಕಸ ಸಂಗ್ರಹಣೆ, ಕಸ ವಿಲೇವಾರಿ, ತ್ಯಾಜ್ಯ ಘಟಕದ ನಿರ್ವಹಣೆಗೂ ಕೂಡ ಅವಕಾಶ ನೀಡಲಾಗಿದೆ. ಇದು ಅವರಿಗೆ ಒಳ್ಳೆಯ ಆದಾಯವನ್ನು ತಂದುಕೊಡುತ್ತಿದೆ.
ಕುಸುಮಬಾಯಿ, ಚಾಲಕರು, ತ್ಯಾಜ್ಯ ವಿಲೇವಾರಿ ಘಟಕ, ಕೋಹಳ್ಳಿ ಮಾತನಾಡಿ ಜಿಲ್ಲಾ ಪಂಚಾಯಿತಿ ವತಿಯಿಂದ ನಾನು ವಾಹನ ಚಾಲನೆ ಕಲಿತಿದ್ದೇನೆ. ಕಸ ಸಂಗ್ರಹಣೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನಮ್ಮ ಗುಂಪು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ.


ಮಂಜುನಾಥ್, ಗ್ರಾಮಸ್ಥರು : ನಮ್ಮ ಕೋಹಳ್ಳಿಯಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಮಹಿಳೆಯರು ಆಸಕ್ತಿಯಿಂದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.


ನೇತ್ರಾವತಿ, ವಾಹನ ಚಾಲಕರು, ಹೊಳಲೂರು : ವಾಹನ ಚಾಲನೆ ಆರಂಭದಲ್ಲಿ ಕಷ್ಟ ಎನಿಸಿತು. ಈಗ ಅದು ಕರಗತವಾಗಿದೆ. ನಮ್ಮೂರಿನಲ್ಲೇ ಕೆಲಸ ಮಾಡಿ ಆದಾಯವನ್ನು ಪಡೆಯುತ್ತಿದ್ದೇನೆ. ಊರಿನಲ್ಲಿ ಓಡಾಡುವಾಗ ನನಗೆ ಹೆಮ್ಮೆ ಎನಿಸುತ್ತಿದೆ.


ಲೋಕೇಶ್, ಪಿಡಿಒ, ಹೊಳಲೂರು: ನಮ್ಮ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ಘಟಕ ಮಾದರಿಯಾಗಿದೆ. ಕಸ ಸಂಗ್ರಹ ಮತ್ತು ಕಸ ವಿಂಗಡಣೆ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಘಟಕಕ್ಕೆ ಬಂದವರಿಗೆ ಹೊಸ ವಾತಾವರಣವನ್ನೇ ನೀಡುತ್ತದೆ. ಮಹಿಳೆಯರ ಸಂಘಟಿತ ಕಾರ್ಯವೇ ಇದಕ್ಕೆ ಸಾಕ್ಷಿ


ಪದ್ಮಾವತಿ, ಕೋಹಳ್ಳಿ : ನಾನು ಈ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷಳಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸ ಸಂಗ್ರಹಣೆ ಮತ್ತು ವಿಲೇವಾರಿ ತೀವ್ರ ಸಮಸ್ಯೆ ಉಂಟುಮಾಡಿತ್ತು. ಆದರೆ ಈಗ ಅದರ ನಿರ್ವಹಣೆಯನ್ನು ನೋಡಿದರೆ ಮಹಿಳೆಯರ ಶ್ರದ್ಧೆ ಮತ್ತು ಶ್ರಮ ಅರಿವಾಗುತ್ತದೆ.

ರುದ್ರಪ್ಪ, ಅಧ್ಯಕ್ಷರು , ಹೊಳಲೂರು ಗ್ರಾಮ ಪಂಚಾಯಿತಿ: ನಮ್ಮ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಘಟಕ ಮಾದರಿಯಾಗಿ ನಿರ್ಮಾಣವಾಗಲು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ನೀಡಿರುವ ಸಹಕಾರ ದೊಡ್ಡದು. ರಾಜ್ಯದಲ್ಲಿಯೇ ಮಾದರಿಯಾಗಿ ರೂಪುಗೊಂಡಿದೆ.


ಶಶಿಕಲಾ, ಪಿಡಿಒ, ಕೋಹಳ್ಳಿ: ನಾವು ಅಂಗಡಿ, ಮನೆಗಳಿಗೆ ತೆರಳಿ ಕರಪತ್ರಗಳನ್ನು ನೀಡಿ ಜನಜಾಜಗೃತಿ ಮೂಡಿಸಿದ್ದೇವೆ. ಕಸ ಸಂಗ್ರಹಣೆಯಲ್ಲಿ ಗ್ರಾಮದ ನಾಗರೀಕರೇ ಜಾಗೃತರಾಗಿ ಸಹಕರಿಸುತ್ತಿದ್ದಾರೆ. ಊರಿನ ಮಹಿಳೆಯರು ಸ್ವ ಸಹಾಯ ಗುಂಪು ರಚಿಸಿಕೊಂಡು ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.ಎಂದು ತಿಳಿಸಿದರು.

error: Content is protected !!