ಶಿವಮೊಗ್ಗ, ಆಗಸ್ಟ್ 04 : ಕೋವಿಡ್ 19 ಸೋಂಕಿನ 3 ನೇ ಅಲೆ ನಿಯಂತ್ರಿಸುವ ಸಂಬಂಧ ಹಾಗೂ ಸಾರ್ವಜನಿಕರ ಸುರಕ್ಷತೆ ಮತ್ತು ಮತ್ತು ಆರೋಗ್ಯದ ಹಿತ ದೃಷ್ಟಿಯಿಂದ ಕೊರೊನಾ ವೈರಸ್ ಜಿಲ್ಲೆಯಲ್ಲಿ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿಪತ್ತು ನಿರ್ವಹಣಾ ಕಾಯ್ದೆ 2005 ರಡಿ ಪ್ರದತ್ತವಾದ ಅಧಿಕಾರದಂತೆ ಜಿಲ್ಲಾಧಿಕಾರಿಗಳಾದ ಕೆ.ಬಿ.ಶಿವಕುಮಾರ್ ಇವರು ಆಗಸ್ಟ್ 5 ರಿಂದ 15 ರವರೆಗೆ ಜಿಲ್ಲೆಯಾದ್ಯಂತ ಕೆಳಕಂಡ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಿದ್ದಾರೆ.
• ಕೋವಿಡ್ 19 ನಿಯಂತ್ರಿಸುವ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಎಲ್ಲಾ ಮಾರ್ಗಸೂಚಿಗಳು ಮತ್ತು ಮುಂಜಾಗ್ರತಾ ಕ್ರಮಗಳಾದ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ.
• ಅಂತರ್ ರಾಜ್ಯಗಳಿಂದ ಶಿವಮೊಗ್ಗ ಜಿಲ್ಲೆಗೆ ಬಸ್ ಅಥವಾ ವೈಯಕ್ತಿಕ ಸಾರಿಗೆ ಮೂಲಕ ಪ್ರವೇಶ ಪಡೆಯುವವರಿಗೆ ಕೋವಿಡ್ 2ನೇ ಡೋಸ್ ಲಸಿಕೆಯನ್ನು ಪಡೆದಿದ್ದರೂ ಸಹ 72 ಗಂಟೆಗಳ ಒಳಗೆ ಮಾಡಿಸಿದ ಆರ್ಟಿಪಿಸಿಆರ್ ಪರೀಕ್ಷಾ ನೆಗೆಟಿವ್ ಪ್ರಮಾಣಪತ್ರವನ್ನು ಹೊಂದಿರಬೇಕಾದ್ದನ್ನು ಕಡ್ಡಾಯಗೊಳಿಸಲಾಗಿದೆ.
• ಜಿಲ್ಲಾ ವ್ಯಾಪ್ತಿಯ ಎಲ್ಲಾ ಲಾಡ್ಜ್, ಹೋಟೆಲ್, ಹೋಂ ಸ್ಟೇ/ಅರಣ್ಯ ಇಲಾಖೆ ವಸತಿ ಗೃಹಗಳಲ್ಲಿ ತಂಗಲಿರುವವರು ಬುಕಿಂಗ್ ಸಮಯದಲ್ಲಿ ಸದರಿ ಪ್ರವಾಸಿಗರು ಚೆಕ್ಇನ್ ದಿನದಿಂದ ಹಿಂದಿನ 72 ಗಂಟೆಗಳ ಒಳಗಾಗಿ ಮಾಡಿಸಿದ ಆರ್ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು ಎಂದು ತಿಳಿಸಿ ಹೋಟೆಲ್ ಮತ್ತು ತಂಗುದಾಣಗಳಲ್ಲಿ ಪ್ರವೇಶಿಸುವ ಸಮಯದಲ್ಲಿ ಆರ್ಟಿಪಿಸಿಆರ್ ನೆಗೆಟಿವ್ ಪ್ರಮಾಣಪತ್ರವನ್ನು ಹೊಂದಿರಬೇಕಾದ್ದನ್ನು ಕಡ್ಡಾಯಗೊಳಿಸಲಾಗಿದೆ.
• ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು ಹಾಗೂ ಇನ್ನಿತರ ಪ್ರೇಕ್ಷಣೀಯ ಸ್ಥಳಗಳಾದ ಜೋಗ್ ಜಲಪಾತ, ಆಗುಂಬೆಯ ಸೂರ್ಯಾಸ್ಥ ವೀಕ್ಷಣೆಯ ಸ್ಥಳ, ಗಾಜನೂರು ಡ್ಯಾಂ, ಬಿ.ಆರ್.ಪಿ ಡ್ಯಾಂ, ಹುಲಿ ಮತ್ತು ಸಿಂಹಧಾಮ, ಸಕ್ರೆಬೈಲು ಆನೆ ಬಿಡಾರ ಮತ್ತು ಪ್ರವಾಸೋದ್ಯಮ, ಅರಣ್ಯ ಇಲಾಖೆ, ಪ್ರಾಚ್ಯ ವಸ್ತು ಮತ್ತು ಪುರಾತತ್ವ ಇಲಾಖೆಗಳ ಪ್ರವಾಸಿ ತಾಣಗಳು ಮತ್ತು ಇತ್ಯಾದಿ ಪ್ರೇಕ್ಷಣೀಯ ಸ್ಥಳಗಳಿಗೆ ಆಗಮಿಸುವ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಹಿಂದಿನ 72 ಗಂಟೆಗಳ ಒಳಗಾಗಿ ಮಾಡಿಸಿದ ಆರ್ಟಿಪಿಸಿಆರ್ ನೆಗೆಟಿವ್ ಪ್ರಮಾಣಪತ್ರವನ್ನು ಹೊಂದಿರಬೇಕಾದ್ದನ್ನು ಕಡ್ಡಾಯಗೊಳಿಸಲಾಗಿದೆ.
• ಮದುವೆ ಸಮಾರಂಭಗಳಲ್ಲಿ ಕೇವಲ 50 ಜನರಿಗೆ ಮಾತ್ರ ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ಭಾಗವಹಿಸಲು ಅನುಮತಿಸಲಾಗಿದೆ.
ಕೋವಿಡ್ 19 ನಿರ್ವಹಣೆ ಮುಂಜಾಗ್ರತಾ ಕ್ರಮಗಳನ್ನು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾಡಳಿತದಿಂದ ನೀಡುವ ನಿರ್ದೇಶನಗಳನ್ನು ಉಲ್ಲಂಘಿಸುವ ವ್ಯಕ್ತಿಯನ್ನು ವಿಪತ್ತು ನಿರ್ವಹಣಾ ಕಾಯ್ದೆ 2005 ಕಲಂ 51 ರಿಂದ 60 ರ ಉಪಬಂಧಗಳು ಮತ್ತು ಭಾರತೀಯ ದಂಡ ಸಂಹಿತೆ ಕಲಂ 188 ರ ಅಡಿಯಲ್ಲಿನ ಕಾನೂನು ಕ್ರಮಗಳು ಮತ್ತು ಕಾಲಕಾಲಕ್ಕೆ ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಅವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗವುದು.
ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಎದ್ದು ಕಾಣುವಂತೆ ಪ್ರದರ್ಶಿಸಲು ಮತ್ತು ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡಲು ಹಾಗೂ ಈ ನಿಷೆಧಾಜ್ಞೆಯನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ದ ಸೂಕ್ತ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮತ್ತು ಇತರೆ ಸಕ್ಷಮ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.