ಶಿವಮೊಗ್ಗ ಡಿಸೆಂಬರ್ 28 :ಸಾರ್ವಜನಿಕರು ಕೋವಿಡ್ ಮುಂಜಾಗ್ರತೆ ಮತ್ತು ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಂಡು, ಸರ್ಕಾರದ ನಿಯಮಗಳು, ಆರೋಗ್ಯ ಇಲಾಖೆ ಮಾರ್ಗದರ್ಶನ ಪಾಲಿಸಬೇಕು. ಜೊತೆಗೆ ಬೂಸ್ಟರ್ ಡೋಸ್ ಪಡೆಯಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.
ನಮ್ಮ ನೆರೆಯ ದೇಶ ಚೀನಾ ಹಾಗೂ ಇತರೆ ದೇಶಗಳಲ್ಲಿ ಕೊರೋನಾ ವೈರಾಣುವಿನಿಂದ ಸೋಂಕಿತರಾಗಿ, ಹೆಚ್ಚು ಜನ ಆರೋಗ್ಯ ಸಮಸ್ಯೆಯಿಂದ ನರಳುತ್ತಿದ್ದಾರೆ. ಈ ಕಾಯಿಲೆ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತದೆ. ಆದರೆ ಇದರ ಗಂಭೀರತೆ ಕಡಿಮೆ ಆದರೂ, ವಯಸ್ಸಾದವರು, ಚಿಕ್ಕಮಕ್ಕಳು, ಗರ್ಭಿಣಿ, ಬಾಣಂತಿಯರು, ಬಿ.ಪಿ, ಶುಗರ್, ಉಸಿರಾಟದ ತೊಂದರೆ, ಹೃದಯ ಸಂಬಂಧಿ ಇತರೆ ಆರೋಗ್ಯ ಸಮಸ್ಯೆಗಳಿರುವವರಿಗೆ ಇದರ ಪರಿಣಾಮ ತುಸು ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಆದರೂ ಭಯ ಪಡುವ ಅಗತ್ಯವಿಲ್ಲ. ಎಚ್ಚರಿಕೆ ಇರಲಿ.
ಪ್ರತಿಯೊಬ್ಬರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡುವ ಕೋವಿಡ್ ಬೂಸ್ಟರ್‍ಡೋಸ್ ಲಸಿಕೆಯನ್ನು ತಪ್ಪದೇ ಪಡೆಯಿರಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ. ಪದೇ ಪದೇ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ, ಕಣ್ಣು, ಮೂಗು, ಬಾಯಿಯನ್ನು ಪದೇ ಪದೇ ಮುಟ್ಟಿಕೊಳ್ಳಬೇಡಿ ಹ್ಯಾಂಡ್ ವಾಶ್, ಸ್ಯಾನಿಟೈಸರ್ ಬಳಕೆ ಮಾಡಿ, ಶೀತ, ಕೆಮ್ಮು, ಜ್ವರ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ.
ತಪ್ಪು ವಂದತಿಗಳಿಗೆ, ಆಧಾರರಹಿತವಾಗಿ ಮಾಧ್ಯಮಗಳಲ್ಲಿ ಪ್ರಸಾರವಾಗುವ ವರದಿಗಳಿಗೆ ಭಯ ಪಡಬೇಡಿ. ಮುಂದಿನ ಸಂಭಾವ್ಯ ಸಮಸ್ಯೆಗಳನ್ನು ಎದುರಿಸಲು ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಎಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಅಗತ್ಯ ಲಸಿಕೆ, ಔಷಧಿ, ಚಿಕಿತ್ಸೆಗೆ ಬೇಕಾದ ವಸ್ತುಗಳೊಂದಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲು ಕ್ರಮವಹಿಸಲಾಗಿದೆ.
ನಮ್ಮ ಆರೋಗ್ಯದ ಸುರಕ್ಷತೆಗೆ ಜಾಗರೂಕರಾಗಿರಬೇಕು. ಇಲ್ಲಿಯವರೆಗಿನ ಕೋವಿಡ್ ವಿರುದ್ಧದ ಹೋರಾಟದಲ್ಲಿ ತಮ್ಮೆಲ್ಲರ ಸಹಕಾರದಿಂದ ವಿಜಯ ಸಾಧಿಸಿದ್ದೇವೆ. ಭವಿಷ್ಯದ ಅನಿರೀಕ್ಷಿತ ಸವಾಲುಗಳ ಮೇಲೂ ಜಯ ಸಾಧಿಸಲು ತಯಾರಾಗಿರಬೇಕಾದ ಅನಿವಾರ್ಯತೆಯನ್ನು ಮರೆಯುವಂತಿಲ್ಲ. ಸರ್ಕಾರದ ನಿಯಮಗಳನ್ನು ತಪ್ಪದೇ ಪಾಲನೆ ಮಾಡಬೇಕು. ಆರೋಗ್ಯ ಇಲಾಖೆಯ ಮಾರ್ಗದರ್ಶನ ಮತ್ತು ಸೇವೆಯನ್ನು ಒಮ್ಮತದಿಂದ ಸ್ವೀಕರಿಸಬೇಕು, ಸಾರ್ವಜನಿಕರು ಸಂಘ ಸಂಸ್ಥೆಗಳು ಸರ್ಕಾರ ಮತ್ತು ಇಲಾಖೆಯೊಂದಿಗೆ ಕೈಜೋಡಿಸಿ ಸಹಕಾರ ನೀಡಬೇಕು ಅನಿವಾರ್ಯ ಸಂದರ್ಭದ ಸಭೆ, ಸಮಾರಂಭ ಇತರೆ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಜನ ಸಂದಣಿಯಾಗದಂತೆ ಮುಂಜಾಗ್ರತೆ ವಹಿಸಬೇಕು ಅನಗತ್ಯವಾಗಿ, ಮನರಂಜನೆ, ಸ್ನೇಹಕೂಟ, ಔತಣಕೂಟದಂತಹ ಗುಂಪು ಕಾರ್ಯಕ್ರಮಗಳನ್ನು ಆಯೋಜಿಸಬಾರದು.
ನಾವೆಲ್ಲರೂ ಸ್ವಲ್ಪ ಮುಂಜಾಗ್ರತೆ ಮತ್ತು ಸಾಮಾಜಿಕ ಹೊಣೆಗಾರಿಕೆ, ನಾಗರೀಕ ಜವಾಬ್ದಾರಿಗಳನ್ನು ನಿಭಾಯಿಸಿದಲ್ಲಿ ದೊಡ್ಡ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು ಎಂದು ಅವರು ತಿಳಿಸಿದ್ದಾರೆ.