ಶಿವಮೊಗ್ಗ, ಫೆಬ್ರವರಿ 25 : 2022 ರಲ್ಲಿ 1.5 ಲಕ್ಷ ಪೋಸ್ಟಾಫೀಸುಗಳು ಸಂಪೂರ್ಣವಾಗಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯ ಅಡಿಯಲ್ಲಿ ಬರಲಿವೆ. ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಸ್.ಎಂ.ಎಸ್ ಬ್ಯಾಂಕಿಂಗ್ ಮುಖಾಂತರ ಖಾತೆಗಳ ಆನ್ಲೈನ್ ನಿರ್ವಹಣೆಯ ಅವಕಾಶದ ಜೊತೆಗೆ ಪೋಸ್ಟಾಫಿಸಿನ ಖಾತೆಗಳು ಮತ್ತು ಬ್ಯಾಂಕ್ ಖಾತೆಗಳ ನಡುವೆ ಆನ್ಲೈನ್ ವರ್ಗಾವಣೆಯ ಅನುಕೂಲವೂ ಸಾಧ್ಯವಾಗಲಿದೆ.
ಈ ಪರಸ್ಪರ ಕಾರ್ಯ ಸಾಧ್ಯತೆಯು ವಿಶೇಷವಾಗಿ ಗ್ರಾಮೀಣ ಪ್ರದೇಶದ ರೈತರು ಮತ್ತು ಹಿರಿಯ ನಾಗರೀಕರಿಗೆ ಸಹಾಯಕವಾಗಲಿದೆ ಮತ್ತು ಆರ್ಥಿಕ ಒಳಗೊಳ್ಳುವಿಕೆಯನ್ನು ಸಾಧ್ಯವಾಗಿಸುತ್ತದೆ.
ಕೇಂದ್ರದ ಗ್ರಾಮೀಣ ಅಭಿವೃದ್ದಿ ಮಂತ್ರಾಲಯ ಫೆ.23 ರಂದು ಈ ಬಜೆಟ್ ಘೋಷಣೆಯ ಅನುಷ್ಟಾನದ ಕುರಿತು ಅಂಚೆ ಇಲಾಖೆಯೂ ಸೇರಿದಂತೆ ವಿವಿಧ ಇಲಾಖೆಗಳನ್ನು ಒಗ್ಗೂಡಿಸಿ ವೆಬಿನಾರ್ ಒಂದನ್ನು ಆಯೋಜಿಸಿತ್ತು. ಕರ್ನಾಟಕ ಅಂಚೆ ವಲಯದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಸಹ ಈ ವೆಬಿನಾರ್ನಲ್ಲಿ ಭಾಗವಹಿಸಿದ್ದು ಸಭೆಯಲ್ಲಿ ಪ್ರಸ್ತಾಪಗೊಂಡ ಮುಖ್ಯಾಂಶಗಳು ಕೆಳಕಂಡಂತೆ ಇವೆ.
ಸಭೆಯನ್ನು ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳು ಉದ್ಘಾಟಿಸಿದರು. ಸರ್ಕಾರದ ಎಲ್ಲ ಸಂಸ್ಥೆಗಳೂ ಹಾಗೂ ಮಧ್ಯಸ್ಥಿಕೆದಾರರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಉದ್ದೇಶಕ್ಕಾಗಿ ಸಮನ್ವಯಗೊಳ್ಳಬೇಕಾದ ಅಗತ್ಯದ ಕುರಿತು ಹೆಚ್ಚಿನ ಒತ್ತು ನೀಡಲಾಯಿತು.
ಗ್ರಾಮೀಣ ಭಾಗದ ಡಿಜಿಟಲ್ ಆರ್ಥಿಕ ಒಳಗೊಳ್ಳುವಿಕೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಕುರಿತು ಗಮನ ಹರಿಸಬೇಕು. ಈ ಕುರಿತು ಜಾಗೃತಿ ಮೂಡಿಸುವ ಮುಂದಾಳತ್ವವನ್ನು ಅಂಚೆ ಇಲಾಖೆಯು ನಿರ್ವಹಿಸಬೇಕಿದೆ.
ಹಳ್ಳಿಗಳಲ್ಲಿರುವ ಅಂಚೆ ಕಚೇರಿಯ ಶಾಖೆಗಳನ್ನೂ ಸೇರಿಸಿ ಎಲ್ಲ ಅಂಚೆ ಕಚೇರಿಗಳೂ ಕೋರ್ ಬ್ಯಾಂಕಿಂಗ್ನ ಅಡಿಯಲ್ಲಿ ಬರಬೇಕು. ಆನ್ಲೈನ್ ಹಣ ವರ್ಗಾವಣೆ ಸೇರಿದಂತೆ ಉಳಿದೆಲ್ಲ ಸೌಲಭ್ಯಗಳು ದೇಶದ ಮೂಲೆ ಮೂಲೆಗಳನ್ನು ತಲುಪಬೇಕು.
ಸಣ್ಣ ಉಳಿತಾಯದ ಪ್ರತಿನಿಧಿಗಳು, ಮಹಿಳಾ ಪ್ರಧಾನ ಕೇಂದ್ರೀಯ ಬಚತ್ ಯೋಜನಾದ ಪ್ರತಿನಿಧಿಗಳು, ಅಂಚೆ ಉಳಿತಾಯ ಖಾತೆದಾರರು, ಸ್ವ-ಸಹಾಯ ಸಂಘಗಳು ಮತ್ತು ಬ್ಯಾಂಕಿಂಗ್ ತಜ್ಞರ ಅಭಿಪ್ರಾಯಗಳನ್ನು ಈ ವೆಬಿನಾರ್ನಲ್ಲಿ ತೆಗೆದುಕೊಳ್ಳಲಾಯಿತು.
ಕರ್ನಾಟಕ ರಾಜ್ಯದಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 28 ಲಕ್ಷ ಫಲಾನುಭವಿಗಳಿಗೆ ಅಂಚೆ ಖಾತೆಯ ಮೂಲಕ ಸಾಮಾಜಿಕ ಭದ್ರತಾ ಪಿಂಚಣಿ ತಲುಪಿಸಲಾಗಿದೆ. ರಾಜ್ಯ ಸರ್ಕಾರದೊಟ್ಟಿಗೆ ಕೈ ಜೋಡಿಸಿ ಭಾಗ್ಯಲಕ್ಷ್ಮಿ ಯೋಜನೆಯ ಅಡಿಯಲ್ಲಿ ಅರ್ಹ ಹೆಣ್ಣುಮಕ್ಳಳ ಹೆಸರಿನಲ್ಲಿ 1,56,056 ಸುಕನ್ಯಾ ಸಮೃದ್ದಿ ಖಾತೆ ತೆರೆಯಲಾಗಿದೆ. ಈ ರೀತಿಯ ಬೃಹತ್ ಯೋಜನೆಗಳ ಮೂಲಕ ಕರ್ನಾಟಕ ಅಂಚೆ ವಲಯವು ಸಕ್ರಿಯವಾಗಿ ಆರ್ಥಿಕ ಒಳಗೊಳ್ಳುವಿಕೆಯ ಮೂಲ ಉದ್ದೇಶವನ್ನು ತಳಮಟ್ಟದವರೆಗೆ ಕೊಂಡೊಯ್ಯುವಲ್ಲಿ ಸಫಲವಾಗಿದೆ.
ಮುಂಬರುವ ಕೋರ್ಬ್ಯಾಂಕಿಂಗ್ ವ್ಯವಸ್ಥೆಯ ಅನುಷ್ಟಾನವೂ ಸಹ ಇದೇ ವೇಗದಲ್ಲಿ ಕರ್ನಾಟಕದಲ್ಲಿ ಸಾಧ್ಯವಾಗಲಿದೆ. ಜನಸೇವೆಗೆ ಕರ್ನಾಟಕ ಅಂಚೆ ವಲಯ ಕಂಕಣಬದ್ದವಾಗಿದೆ ಎಂದು ವಲಯದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರಕುಮಾರ್ ತಿಳಿಸಿದ್ದಾರೆ.