ಶಿವಮೊಗ್ಗ : ಅಕ್ಟೋಬರ್ ೧೯ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನವೆಂಬರ್ ೦೧ರಂದು ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವೈಶಿಷ್ಟö್ಯಪೂರ್ಣವಾಗಿ ಆಚರಿಸಲು ಉದ್ದೇಶಿಸಿದ್ದು, ಕನ್ನಡ ನಾಡು-ನುಡಿ, ನೆಲ-ಜಲ, ಸಂಸ್ಕೃತಿ ಪರಂಪರೆಯನ್ನು ಉಳಿಸುವಲ್ಲಿ ಸಂಕಲ್ಪತೊಡುವ ಅತ್ಯಪರೂಪದ ಕೋಟಿಕಂಠ ಗಾಯನ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ|| ನಾಗೇಂದ್ರ ಎಫ್.ಹೊನ್ನಳ್ಳಿ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕಳೆದ ಸಾಲಿನಲ್ಲಿ ಮಾತಾಡ್ ಮಾತಾಡು ಕನ್ನಡ ಎಂಬ ಘೋಷವಾಕ್ಯದೊಂದಿಗೆ ನಡೆಸಲಾಗಿದ್ದ ಕಾರ್ಯಕ್ರಮದಲ್ಲಿ ಲಕ್ಷ ಕಂಠ ಗಾಯನ ಒಂದು ಇತಿಹಾಸವನ್ನೇ ಸೃಷ್ಠಿಸಿದ್ದು ಹೆಮ್ಮೆಯ ಸಂಗತಿಯಾಗಿದೆ. ಪ್ರಸಕ್ತ ಸಾಲಿನ ೬೭ನೇ ಕನ್ನಡ ರಾಜ್ಯೋತ್ಸವವನ್ನು ಇನ್ನೂ ಹೆಚ್ಚಿನ ಸಂಭ್ರಮ, ಉತ್ಸಾಹಗಳಿಂದ ನಾಡಿನಾದ್ಯಂತ ಆಚರಿಸುವ ಹಿನ್ನಲೆಯಲ್ಲಿ ಕೋಟಿಕಂಠ ಗಾಯನ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಾಡಿನ ಹಿರಿಯ ಹೆಸರಾಂತ ಸಾಹಿತಿಗಳು ರಚಿಸಿ, ಸುಪ್ರಸಿದ್ಧ ಹಾಗೂ ಆಯ್ದ ೦೬ಕನ್ನಡ ಹಾಡುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ರಾಜ್ಯದಾದ್ಯಂತ ಒಂದು ಕೋಟಿಗೂ ಹೆಚ್ಚಿನ ಜನ ಏಕಕಂಠದಲ್ಲಿ ಹಾಡುವುದರ ಮೂಲಕ ಐತಿಹಾಸಿಕ ದಾಖಲೆ ಬರೆಯುತ್ತಿದ್ದಾರೆ. ಕುವೆಂಪು ರಚನೆಯ ನಾಡಗೀತೆ-ಜೈ ಭಾರತ ಜನನಿಯ ತನುಜಾತೆ, ಹುಯಿಲಗೋಳ ನಾರಾಯಣರಾಯರು ರಚಿಸಿದ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು, ಕುವೆಂಪು ರಚನೆಯ ಬಾರಿಸು ಕನ್ನಡ ಡಿಂಡಿಮವ…, ಡಾ|| ಡಿ.ಎಸ್.ಕರ್ಕಿ ಅವರ ಹಚ್ಚೇವು ಕನ್ನಡದ ದೀಪ…, ಚನ್ನವೀರಕಣವಿ ವಿರಚಿತ ವಿಶ್ವವಿನೂತನ ವಿದ್ಯಾಚೇತನ, ಹಂಸಲೇಖರ ಲೇಖನಿಯಿಂದ ಮೂಡಿಬಂದ ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಗೀತೆಗಳು ಈ ಗಾಯನ ಕಾರ್ಯಕ್ರಮಕ್ಕೆ ಆಯ್ಕೆಗೊಂಡಿವೆ ಎಂದರು.
ಅಕ್ಟೋಬರ್ ೨೮ರಂದು ಬೆಳಿಗ್ಗೆ ೧೧ ರಿಂದ ೧೧.೩೦ರ ಅವಧಿಯಲ್ಲಿ ಜಿಲ್ಲೆಯ ಆಯ್ದ ೨೦-೨೫ಸ್ಥಳಗಳಲ್ಲಿ ಸಾಮೂಹಿಕವಾಗಿ ಹಾಡಿ ದಾಖಲೆ ಬರೆಯಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಚುನಾಯಿತ ಪ್ರತಿನಿಧಿಗಳು, ಸರ್ಕಾರದ ಹಿರಿಯ ಅಧಿಕಾರಿ-ಸಿಬ್ಬಂಧಿಗಳು, ತಾರೆಯರು, ಗಾಯಕರು, ಸಾಂಸ್ಕೃತಿಕ ಲೋಕದ ದಿಗ್ಗಜರು, ಸಂಘಟನೆಗಳ ಪ್ರತಿನಿಧಿಗಳು, ಸಹಸ್ರಾರು ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸುತ್ತಿರುವುದು ವಿಶೇಷವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವ ಪ್ರತಿಯೊಬ್ಬರೂ ಆನ್‌ಲೈನ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಭಾಗವಹಿಸಿದ ಪ್ರತಿಯೊಬ್ಬರಿಗೂ ಕಾರ್ಯಕ್ರಮದ ನಂತರ ಆನ್‌ಲೈನ್‌ನಲ್ಲಿಯೇ ಇಲಾಖೆಯಿಂದ ಕೊಡಮಾಡಲಾಗುವ ಪ್ರಮಾಣಪತ್ರವೂ ದೊರೆಯಲಿದೆ ಎಂದ ಅವರು, ಈ ವಿಶೇಷವಾದ ಕಾರ್ಯಕ್ರಮದಲ್ಲಿ ನಾಡಿನ ಎಲ್ಲಾ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕೋಟಿ ಕಂಠ ಗಾಯನದ ಇತಿಹಾಸದ ನಿರ್ಮಾಣಕ್ಕೆ ಸಾಕ್ಷಿಯಾಗುವಂತೆ ಮನವಿ ಮಾಡಿದರು.
ಜಿಲ್ಲೆಯ ಪ್ರತಿ ಗ್ರಾಮದಲ್ಲಿ, ಕಚೇರಿಗಳಲ್ಲಿ, ಕಾರ್ಖಾನೆಗಳಲಿ ವಸತಿ ಸಮುಚ್ಚಯಗಳಲ್ಲಿ, ವಿದ್ಯಾನಿಲಯಗಳಲ್ಲಿ ತಾವೇ ಸ್ವತಃ ಸಮೂಹ ಗಾಯನವನ್ನು ಆಯೋಜಿಸುವಂತೆ ಹಾಗೂ ಈ ವಿನೂತನ ಕಾರ್ಯಕ್ರಮದ ಯಶಸ್ಸಿಗೆ ನಿಮ್ಮ ಸಲಹೆ-ಸೂಚನೆಗಳನ್ನು ನೀಡುವಂತೆ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವವರು ತಮ್ಮ ಹೆಸರನ್ನು ನೋಂದಾಯಿಸಲು hಣಣಠಿ://ಞಚಿಟಿಟಿಚಿಜಚಿsiಡಿi.ಞಚಿಡಿಟಿಚಿಣಚಿಞಚಿ.gov.iಟಿ/ಞಞg/ಠಿubಟiಛಿ/ ಜಾಲತಾಣ ಪ್ರವೇಶಿಸುವಂತೆ ಮನವಿ ಮಾಡಿರುವ ಅವರು, ಈ ಕಾರ್ಯಕ್ರಮಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿಕೊಳ್ಳುವAತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಂಗಾಯಣ ಶಿವಮೊಗ್ಗ ಘಟಕದ ನಿರ್ದೇಶಕ ಸಂದೇಶ ಜವಳಿ ಅವರು ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಜಿಲ್ಲೆಯ ಐತಿಹಾಸಿಕ ಸ್ಥಳಗಳಲ್ಲಿ ರೂಪಿಸಿ, ಅನುಸರಿಸುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ದೊಡ್ಡಗೌಡ್ರ, ಸೂಡಾ ಆಯುಕ್ತ ಕೊಟ್ರೇಶಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಸೇರಿದಂತೆ ಜಿಲ್ಲೆಯ ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳು, ಗಾಯಕರು, ಸಾಂಸ್ಕೃತಿಕ ಪ್ರತಿನಿಧಿಗಳು ಉಪಸ್ಥಿತರಿದ್ದರು.

error: Content is protected !!