ಶಿವಮೊಗ್ಗ, ಆಗಸ್ಟ್ 12 : ಪ್ರಸ್ತುತ ಹೆಚ್ಚು ಮಳೆ, ಮೋಡಕವಿದ ಮಾತಾವರಣ, ತೋಟದಲ್ಲಿ ನೀರು ನಿಲ್ಲುವಿಕೆ, ಹೆಚ್ಚಾದ ಮಣ್ಣಿನ ತೇವಾಂಶ, ಪೋಷಕಾಂಶಗಳ ಕೊಚ್ಚಣೆ ಮತ್ತು ಸೂರ್ಯನ ಬೆಳಕಿನ ಕೊರತೆಯಿಂದ ಕೊಳೆ ರೋಗವು ಉಲ್ಬಣವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಶಿವಮೊಗ್ಗ-ನವಿಲೆ ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ನಾಗರಾಜಪ್ಪ ಅಡಿವಪ್ಪರ್ ಅವರು ತಿಳಿಸಿದ್ದಾರೆ.
ಕೆಳಗೆ ಬಿದ್ದಿರುವ ರೋಗಪೀಡಿತ ಕಾಯಿ ಹಾಗೂ ಒಣಗಿದ ಹಿಂಗಾರಗಳನ್ನು ಆರಿಸಿ ತೆಗೆದು ಸುಡುವುದು. ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಬಸಿಗಾಲುವೆ ಚೊಕ್ಕ ಮಾಡಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವುದು. ಗಾಳಿ ಆಡುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯುವುದು. ಮುಂಜಾಗ್ರತವಾಗಿ ಶೇ.1 ರ ಬೋರ್ಡೋದ್ರಾವಣ ಅಥವಾ ಶೇ.0.2 ರ ಮೆಟಲಾಕ್ಸಿಲ್ ಎಂ.ಜಡ್ (2 ಗ್ರಾಂ 1 ಲೀ ನೀರಿನಲ್ಲಿ ಕರಗಿಸಿ) ಅಥವಾ ಶೇ. 0.3 ರ ತಾಮ್ರದ ಆಕ್ಸಿಕ್ಲೋರೈಡ್ (3 ಗ್ರಾಂ 1.0 ಲೀ ನೀರಿನಲ್ಲಿ ಕರಗಿಸಿ) ದಿಂದ ಗೊನೆಗಳಿಗೆ ಹಾಗೂ ಎಲೆ ತೊಟ್ಟು, ಹೊಡೆ ಭಾಗ ಮತ್ತು ಸುಳಿಭಾಗಗಳು ಚೆನ್ನಾಗಿ ನೆನೆಯುವಂತೆ ಸೂಕ್ತ ಅಂಟಿನೊಂದಿಗೆ (ರಾಳ) ಸಿಂಪರಣೆ ಮಾಡುವಂತೆ ಅವರು ತೋಟಗಾರಿಕೆ ಬೆಳೆಗಾರರಿಗೆ ಸಲಹೆ ನೀಡಿರುವ ಅವರು ಈ ಕ್ರಮಗಳನ್ನು ಸಾಮೂಹಿಕವಾಗಿ ಏಕಕಾಲದಲ್ಲಿ ಅನುಸರಿಸಿದಲ್ಲಿ ಮರಗಳನ್ನು ಸುಳಿಕೊಳೆ ಅಥವಾ ಶಿರಕೊಳೆಯಿಂದ ಸಾಯುವುದನ್ನು ತಪ್ಪಿಸಬಹುದಾಗಿದೆ ಎಂದವರು ತಿಳಿಸಿದ್ದಾರೆ.