ಶಿವಮೊಗ್ಗ, ಜನವರಿ 18 : ಫೆಬ್ರವರಿ ಮಾಹೆಯಲ್ಲಿ ನಡೆಯಬೇಕಾಗಿದ್ದ ಶಿವಮೊಗ್ಗ ನಗರದ ಸುಪ್ರಸಿದ್ದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೋತ್ಸವವು ಕೊರೋನ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ಅವಧಿಗೆ ಮುಂದೂಡಲಾಗಿದ್ದು, ಮಾರ್ಚ್ 22 ಮತ್ತು 23ರಂದು ನಡೆಸಲು ಜಾತ್ರಾ ಸಮಿತಿಯು ನಿರ್ಧರಿಸಿದೆ.
ಸೋಂಕಿನ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಅಂದಿನ ಸ್ಥಿತಿಗಳನ್ನಾಧರಿಸಿ ಜಾತ್ರೆ ನಡೆಸಲು ಕ್ರಮ ವಹಿಸಲಾಗುವುದು. ಸೋಂಕು ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೆ ಹೊರಗಿನ ಊರುಗಳಿಂದ ಭಕ್ತಾಧಿಗಳ ಆಗಮಿಸದಂತೆ ನಿಯಂತ್ರಿಸಿ, ಸಮಿತಿಯವರು ಮಾತ್ರ ಸಾಂಕೇತಿಕವಾಗಿ ಆಚರಿಸಲು, ನಿಯಂತ್ರಣದಲ್ಲಿದ್ದರೆ ಅಂಗಡಿ, ಮುಂಗಟ್ಟು, ಸ್ಟಾಲ್ ಮತ್ತು ಎಕ್ಸಿಬಿಷನ್‍ಗಳಿಗೆ ಅವಕಾಶವಿಲ್ಲದಂತೆ ಹಾಗೂ ಕಡಿಮೆಯಾಗಿದ್ದರೆ ಸಹಜವಾಗಿ ಜಾತ್ರೆ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೈಗೊಳ್ಳುವ ಈ ನಿರ್ಣಯಕ್ಕೆ ಸಮಿತಿಯು ಒಪ್ಪಿಗೆ ಸೂಚಿಸಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೊರೋನ ನಿಯಂತ್ರಣ, ಮಾರಿಕಾಂಬ ಜಾತ್ರೆ ಮುಂತಾದ ವಿಷಯಗಳ ಕುರಿತು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಸೋಂಕಿನ ದರ 11%ರಷ್ಟಿರುವುದನ್ನು ಗುರುತಿಸಲಾಗಿದೆ. ನಗರದಲ್ಲಿ ಈ ಸೋಂಕು ಹೆಚ್ಚಾಗಿದೆ. 45ಶಾಲಾ ಕಾಲೇಜುಗಳ 208ಜನ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಈ ಸಂಬಂಧ ಅಗತ್ಯ ಕ್ರಮವಹಿಸಲು ಜಿಲ್ಲೆಯ ಸಚಿವರು, ಸಂಸದರು ಹಾಗೂ ಶಾಸಕರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಅಂತೆಯೇ ಶಿವಮೊಗ್ಗ ನಗರದ 1ರಿಂದ 9ರವರೆಗಿನ ಎಲ್ಲಾ ಶಾಲೆಗಳನ್ನು ಬುಧವಾರ, ಗುರುವಾರ ಹಾಗೂ ಶುಕ್ರವಾರ*ಗಳಂದು ರಜಾ ಘೋಷಿಸಲಾಗಿದೆ. ಈ ಕ್ರಮವು ಶುಕ್ರವಾರದಂದು ಬೆಂಗಳೂರಿನಲ್ಲಿ ನಡೆಯುವ ಮಾನ್ಯ ಮುಖ್ಯಮಂತ್ರಿಗಳ ಸಭೆಯನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಶಿವಮೊಗ್ಗ ನಗರದ 1ರಿಂದ 9ರವರೆಗಿನ ಎಲ್ಲಾ ಶಾಲೆಗಳನ್ನು ಬುಧವಾರ, ಗುರುವಾರ ಹಾಗೂ ಶುಕ್ರವಾರಗಳಂದು ರಜಾ ಘೋಷಿಸಲಾಗಿದೆ. ಇದರೊಂದಗೆ ಸರ್ಕಾರವು ಈಗಾಗಲೇ ವಾರಾಂತ್ಯದ ಶನಿವಾರ ಮತ್ತು ಭಾನುವಾರ ಎಂದಿನಂತೆ ರಜೆಗಳು ಇರಲಿವೆ ಎಂದರು.
ಜಿಲ್ಲೆಯಲ್ಲಿ 60+ ವಯೋಮಾನದ ಸುಮಾರು 2ಲಕ್ಷ ನಾಗರೀಕರಿದ್ದು, ಅವರೆಲ್ಲರೂ ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆಯಬೇಕು. ಲಸಿಕೆ ಪಡೆಯುವಲ್ಲಿ ಉದಾಸೀನ ಮಾಡದಂತೆ ಮನವಿ ಮಾಡಿರುವ ಸಚಿವರು ಜನಜಾಗೃತಿಗಾಗಿ ಲಸಿಕಾ ಅಭಿಯಾನ ನಡೆಸಲು ಕ್ರಮವಹಿಸಲಾಗುವುದು ಎಂದರು.
ಮಹಿಳೆ ಮತ್ತು ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಬೀದಿದೀಪ ವ್ಯವಸ್ಥೆಯಲ್ಲಿ ದೋಷವಿದ್ದು, ಮುಂದಿನ ಒಂದು ವಾರದೊಳಗಾಗಿ ಸರಿಪಡಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದ ಸಚಿವರು, ಬೆಳಕಿಗೆ ಅಡಚಣೆ ಮಾಡುವ ಮರದ ರೆಂಬೆಗಳನ್ನು ತೆರವುಗೊಳಿಸುವಂತೆ ಸೂಚಿಸಿದ ಅವರು, ನಗರದಲ್ಲಿ ಅವ್ಯಾಹತವಾಗಿರುವ ಮಾದಕ ದ್ರವ್ಯ ಗಾಂಜಾ ನಿಯಂತ್ರಣಗೊಳಿಸುವಲ್ಲಿ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು.
ಭಾನುವಾರದಂದು ಜಿಲ್ಲಾ ಉಸ್ತುವಾರಿ ಸಚಿವರ ಸಭೆಗೆ ಜಿಲ್ಲೆಯ ಇತರೆ ತಾಲೂಕುಗಳಲ್ಲಿನ ಎಲ್ಲಾ ಶಾಲೆಗಳಿಗೆ ಆಯಾ ತಾಲೂಕಿನ ಕ್ಷೇತ್ರ ಸಂಪನ್ಮೂಲ ಶಿಕ್ಷಕರು ಪ್ರತಿ ಶಾಲೆಗೆ ಭೇಟಿ ನೀಡಿ ದೈನಂದಿಗೆ ಪ್ರಗತಿ ವರದಿ ನೀಡುವಂತೆ ಸೂಚಿಸಲಾಗಿದೆ. ಅಂತೆಯೇ ಪದವಿ ಪೂರ್ವ ಹಾಗೂ ಸ್ಮಾತಕ-ಸ್ನಾತಲೋತ್ತರ ಪದವಿ ಕಾಲೇಜುಗಳ ವರದಿಯನ್ನು ಪಡೆದು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಎಲ್ಲಾ ಗ್ರಾಮಪಂಚಾಯಿತಿಗಳಲ್ಲೂ ಟಾಸ್ಕ್‍ಫೋರ್ಸ್ ಸಮಿತಿಗಳಿದ್ದು, ಅವುಗಳಿಂದಲೂ ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ||ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಮಹಾನಗರಪಾಲಿಕೆ ಮೇಯರ್ ಶ್ರೀಮತಿ ಸುನಿತಾ ಅಣ್ಣಪ್ಪ, ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಚನ್ನಬಸಪ್ಪ, ಜ್ಞಾನೇಶ್ವರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್‍ಸುರಗೀಹಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಂ.ರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
error: Content is protected !!