ಶಿವಮೊಗ್ಗ, ಏಪ್ರಿಲ್ 23 : ಜಗತ್ತಿನಾದ್ಯಂತ ಕೊರೋನ ಸೋಂಕು ಪಸರಿಸುತ್ತಿರುವ ರೀತಿ ಆತಂಕವನ್ನು ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸುವಲ್ಲಿ ಜಿಲ್ಲಾಡಳಿತದ ವತಿಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ದಿ, ಪಂಚಾಯತ್ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಮಹಾನಗರಪಾಲಿಕೆ ಆಯುಕ್ತರು ಹಾಗೂ ಮೇಯರ್ ಸೇರಿದಂತೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ಗಣ್ಯರೊಂದಿಗೆ ಕೊರೋನ ನಿಯಂತ್ರಿಸುವ ಕುರಿತು ಜನರಲ್ಲಿ ಅರಿವು ಮೂಡಿಸಲು ನಗರದ ಶಿವಪ್ಪನಾಯಕ ವೃತ್ತದಿಂದ ರಾಮಣ್ಣಶ್ರೇಷ್ಟಿ ಪಾರ್ಕ್ವರೆಗೆ ಪಾದಯಾತ್ರೆ ಮೂಲಕ ಸಂಚರಿಸಿ, ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಿದ ನಂತರ ಮಾತನಾಡುತ್ತಿದ್ದರು.
ಈಗಾಗಲೇ ಬಹುತೇಕ ಜನರಲ್ಲಿ ಜಾಗೃತಿ ಇದೆ ಆದರೂ ಅಲ್ಲಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿರುವವರನ್ನು ಗುರುತಿಸಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದ ಅವರು, ಮಾಸ್ಕ್ ಧರಿಸದ, ಅಂತರ ಕಾಯ್ದುಕೊಳ್ಳದ ವ್ಯಕ್ತಿ ಸಾವಿಗೆ ಸಮೀಪಿಸುತ್ತಿರುವುದನ್ನು ಅರಿತಿದ್ದಾನೆ ಎಂದರ್ಥ. ಅಂತಹ ವ್ಯಕ್ತಿ ನಾಗರಿಕ ಸಮಾಜ, ಕುಟುಂಬದ ಸದಸ್ಯರು, ಪೋಷಕರನ್ನು ಒಮ್ಮೆ ನೆನೆದು ಸೋಂಕು ಹರಡದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಮಾತ್ರವಲ್ಲ ಸ್ಥಳೀಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಜನರಲ್ಲಿ ಅರಿವು ಮೂಡಿಸಲು ಮುಂದಾಗಬೇಕೆಂದವರು ನುಡಿದರು.
ಜಿಲ್ಲೆಯಲ್ಲಿ ಸೋಂಕಿತರ ಜೀವರಕ್ಷಣೆಗೆ ಆರೋಗ್ಯ ಇಲಾಖೆಯು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಸ್ವಯಂ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದರಿಂದ ಕುಟುಂಬ ಮತ್ತು ಸಮಾಜದ ರಕ್ಷಣೆಗೆ ಸಹಕಾರಿಯಾಗಲಿದೆ. ಸಾರ್ವಜನಿಕರು ವಾರಾಂತ್ಯದ ದಿನಗಳಲ್ಲಿ ಅನಗತ್ಯವಾಗಿ ಎಲ್ಲೆಂದರಲ್ಲಿ ಸಂಚರಿಸದೆ ಕುಟುಂಬದ ಸದಸ್ಯರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವಂತೆ ಅವರು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾತನಾಡಿ, ನಗರದ ವೈದ್ಯಕೀಯ ಸಂಸ್ಥೆಗಳಲ್ಲಿ ಚಿಕಿತ್ಸೆ ನೀಡಲು ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಜನರಲ್ಲಿ ನಿರ್ಲಕ್ಷ್ಯ ಭಾವನೆಯಿಂದಾಗಿ ಸೋಂಕು ಹರಡುವಂತಾಗಬಾರದು. ಜಿಲ್ಲೆಯಾದ್ಯಂತ ಪ್ರತಿ ವ್ಯಕ್ತಿಯೂ ಮಾಸ್ಕ್ ಧರಿಸಬೇಕು ಎಂದರು.
ಈಗಾಗಲೇ ಸೋಂಕಿತರ ಚಿಕಿತ್ಸೆಗಾಗಿ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಿನ್ನೆಯಿಂದ ನಗರದ ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ಆಕ್ಸಿಜನ್ ಸಹಿತ 80ಹಾಸಿಗೆಗಳನ್ನು ಹಾಗೂ 100ಆಕ್ಸಿಜನ್ರಹಿತ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ ಎಂದ ಅವರು, ಅಲ್ಲದೇ ಜಿಲ್ಲೆಯಾದ್ಯಂತ ಸುಮಾರು 800 ಆಕ್ಸಿಜನ್ ಸಹಿತ ಹಾಸಿಗೆಗಳಿವೆ ಎಂದ ಅವರು, ಅಗತ್ಯಕ್ಕೆ ತಕ್ಕಂತೆ ಆಕ್ಸಿಜನ್ರಹಿತ ಹಾಸಿಗೆಗಳನ್ನು ಕೊರೋನ ಸೋಂಕಿತರ ಚಿಕಿತ್ಸೆಗಾಗಿ ಬಳಸಿಕೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಅವರು ಮಾತನಾಡಿ, ಕೊರೋನ ನಿಯಂತ್ರಿಸುವಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಮಾಸ್ಕ್ ಧರಿಸಬೇಕು. ಇದು ಪೊಲೀಸ್ ವ್ಯವಸ್ಥೆಯನ್ನು ಬಳಸಿ ಬಲವಂತವಾಗಿ ಹೇರುವ ಪದ್ಧತಿಯಾಗಬಾರದು ಎಂದ ಅವರು, ವ್ಯಕ್ತಿ ತಮ್ಮ ಕುಟುಂಬದ ಸುರಕ್ಷತೆಗಾಗಿ ಯೋಚಿಸಬೇಕು. ಕಾನೂನು ಉಲ್ಲಂಘಿಸಿದವರಿಗೆ ಕ್ರಮ ಅನಿವಾರ್ಯವಾಗಲಿದೆ. ನಗರದಲ್ಲಿ ಮಾಸ್ಕ್ ಧರಿಸದ ವ್ಯಕ್ತಿಗಳನ್ನು ತಡೆದು ದಂಡ ವಿಧಿಸಲಾಗುತ್ತಿದೆ ಎಂದರು.
ಈ ಪಾದಯಾತ್ರೆಯಲ್ಲಿ ಮಹಾನಗರಪಾಲಿಕೆ ಮೇಯರ್ ಶ್ರೀಮತಿ ಸುನಿತಾ ಅಣ್ಣಪ್ಪ, ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.