ಕೊರೋನ ವೈರಸ್ ಸೋಂಕಿನಿಂದಾಗಿ ರಾಜ್ಯದಾದ್ಯಂತ ಲಾಕ್‍ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಜನಜೀವನ ಅಸ್ತವ್ಯಸ್ತವಾಗಿದೆ. ಈ ಸೋಂಕಿನ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಮಹತ್ವದ ತುರ್ತು ಕ್ರಮಗಳನ್ನು ಕೈಗೊಂಡಿರುವುದು ಸಮಾಧಾನಕರ ಸಂಗತಿ ಎಂದು ಪಂಚಾಯತ್‍ರಾಜ್, ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಿಮುಲ್‍ನಿಂದ ಮುಖ್ಯಮಂತ್ರಿಗಳ ಕೊರೋನ ಪರಿಹಾರ ನಿಧಿಗೆ ನೀಡಲಾದ 1.00ಕೋಟಿ ರೂ.ಗಳ ಚೆಕ್‍ನ್ನು ದೇಣಿಗೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಮರ್ಪಿಸಿದರು. ರಾಜ್ಯದ ಸ್ವತಂತ್ರ ಸಂಸ್ಥೆಯೊಂದು ಈ ಪ್ರಮಾಣದ ಮೊತ್ತ ನೀಡಿ ಸರ್ಕಾರದ ನೆರವಿಗೆ ಧಾವಿಸಿರುವುದು, ಸರ್ಕಾರ ಕೈಗೊಳ್ಳುವ ಜನಪರ ಕಾರ್ಯಗಳ ಜೊತೆಯಾಗಿರುವುದು ಸಂತಸ ತಂದಿದೆ ಎಂದರು.
ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸ್ಥಳೀಯ ದಾನಿಗಳು, ಉದ್ಯೋಗದಾತರು, ಕೈಗಾರಿಕೋದ್ಯಮಿಗಳು ಹಣಕಾಸನ್ನು ಮಾನ್ಯ ಸಚಿವರು, ಸಂಸದರು ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ನೀಡುತ್ತಿದ್ದಾರೆ. ಈ ಕಾರ್ಯ ಇನ್ನಷ್ಟು ಚುರುಕಾಗಬೇಕು. ಇದರಿಂದಾಗಿ ಜನಸಾಮಾನ್ಯರ ಮುಖದಲ್ಲಿ ಮಂದಹಾಸ ಕಾಣಬಹುದಾಗಿದೆ. ಅಲ್ಲದೇ ಸಂಕಷ್ಟದಲ್ಲಿರುವವರ ನೆರವಿಗೆ ಸರ್ಕಾರ ಇನ್ನಷ್ಟು ರಚನಾತ್ಮಕ ಕಾರ್ಯ ಮಾಡುವಲ್ಲಿ ಸಹಕಾರಿಯಾಗಲಿದೆ. ಈ ರೀತಿಯಲ್ಲಿ ದೇಣಿಗೆಯಾಗಿ ನೀಡುವ ಹಣ ಆದಾಯ ತೆರಿಗೆ ಪಾವತಿಯಲ್ಲಿ (80ಜಿ ಪ್ರಕಾರ) ರಿಯಾಯಿತಿ ದೊರೆಯಲಿದೆ ಎಂದವರು ನುಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಸರ್ಕಾರ ಕೈಗೊಳ್ಳುವ ಉತ್ತಮ ಕೆಲಸವನ್ನು ಗಮನಿಸಿ, ಇನ್ನಷ್ಟು ಸಹಕಾರ ನೀಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ದೊಡ್ಡ ಪ್ರಮಾಣದ ಮೊತ್ತ ನೀಡುತ್ತಿರುವಲ್ಲಿ ಶಿಮುಲ್ ಸಂಸ್ಥೆಯ ಪದಾಧಿಕಾರಿಗಳು ಒಮ್ಮತ ನಿರ್ಣಯ ಕೈಗೊಂಡು ಹಣ ನೀಡುತ್ತಿರುವುದು ಅತ್ಯಂತ ಪವಿತ್ರ ಕಾರ್ಯವಾಗಿದೆ ಎಂದರು.
ಶಿಮುಲ್ ಸಂಸ್ಥೆಯು ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯಲ್ಲಿದ್ದು, ಪ್ರತಿ ಜಿಲ್ಲೆಯಲ್ಲಿ ಸ್ವತಂತ್ರ ಘಟಕಗಳನ್ನು ಆರಂಭಿಸಲು ಅಗತ್ಯ ತಯಾರಿ ಕೈಗೊಂಡಿರುವುದು ಸಂಸ್ಥೆಯ ಬೆಳವಣಿಗೆಯ ದೃಷ್ಠಿಯಿಂದ ಉತ್ತಮ ಕಾರ್ಯವಾಗಿದೆ. ಈ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು.
ಶಿಮುಲ್ ಅಧ್ಯಕ್ಷ ಡಿ.ಆನಂದ ಅವರು ಮಾತನಾಡಿ, ಕೋರೋನ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್‍ಡೌನ್ óಘೋಷಣೆಗೊಂಡ ದಿನದಿಂದ ಹಾಲಿನ ಮಾರಾಟ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದರಿಂದಾಗಿ ಸಂಸ್ಥೆಯ ಉತ್ಪನ್ನಗಳ ಮಾರಾಟ ತೀವ್ರಗತಿಯಲ್ಲಿ ಕುಸಿತಗೊಂಡ ಕಾರಣ ಹೈನೋದ್ಯಮಿಗಳಿಂದ ಹಾಲಿನ ಖರೀದಿಯನ್ನು ತಾತ್ಕಾಲಿಕ ಅವಧಿಗೆ ಸ್ಥಗಿತಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮತ್ತು ರಾಜ್ಯ ಹಾಲು ಮಹಾಮಂಡಳದ ಅಧ್ಯಕ್ಷ ಜಾರಕಿಹೊಳಿ ಅವರು ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದರಿಂದಾಗಿ ಏಪ್ರಿಲ್ 30ರವರೆಗೆ ಹಾಲನ್ನು ರೈತರಿಂದ ಖರೀದಿಸಲು ಅನುಮತಿ ನೀಡಿದರು. ಖರೀದಿಸಿದ ಹಾಲನ್ನು ಜನಸಾಮಾನ್ಯರಿಗೆ ಉಚಿತವಾಗಿ ವಿತರಿಸಲು ಮುಖ್ಯಮಂತ್ರಿಗಳು ಆದೇಶ ಹೊರಡಿಸಿದರು. ಇದರಿಂದಾಗಿ ಹೈನೋದ್ಯಮಿಗಳು ಹಾಗೂ ಶಿಮುಲ್ ನಷ್ಟದಿಂದ ಉಳಿಯಲು ಸಾದ್ಯವಾಯಿತು. ಈ ಕ್ರಮಕ್ಕೆ ಮುಂದಾದ ಮಾನ್ಯ ಮುಖ್ಯಮಂತ್ರಿಗಳು ಅಭಿನಂದನಾರ್ಹರು ಎಂದವರು ನುಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಶಿಮುಲ್‍ನ ವ್ಯವಸ್ಥಾಪಕ ನಿರ್ದೇಶಕ ಡಾ||ಬಸವರಾಜ್, ಹೆಚ್.ಕೆ.ಬಸಪ್ಪ, ಎಂ.ಸಿದ್ಧಲಿಂಗಪ್ಪ ನಿಂಬೇಗೊಂದಿ, ಸಿ.ವೀರಭದ್ರಬಾಬು ಸೇರಿದಂತೆ ಶಿಮುಲ್‍ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
