ಶಿವಮೊಗ್ಗ, ಜನವರಿ 01 : ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶಕ್ಕೆ ಹೆಚ್ಚಿನ ವಿದ್ಯುತ್ ಸೌಲಭ್ಯ ಒದಗಿಸಲು ಈ ಹಿಂದೆಯೆ ನಿರ್ಮಿಸಲಾಗಿದ್ದ ವಿದ್ಯುತ್ ಸ್ಥಾವರಕ್ಕೆ ಸಂಪರ್ಕ ಕಲ್ಪಿಸಿ ಚಾಲನೆಗೊಳಿಸಲಾಗಿದೆ. ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಕೈಗಾರಿಕೆಗಳ ಮುಖ್ಯಸ್ಥರಿಗೆ ಸೂಚಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲೆಯ ಕೈಗಾರಿಕಾ ಪ್ರದೇಶಗಳ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಅನುಪಾಲನಾ ವರದಿಯ ಮಾಹಿತಿ ಪಡೆದು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡುತ್ತಿದ್ದರು. ಈ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ವಿದ್ಯುತ್‍ನ ಅಗತ್ಯವಿದ್ದಲ್ಲಿ ವಿದ್ಯುತ್ ಸಂಗ್ರಹಣಾ ಸಾಮಥ್ರ್ಯ ಹೆಚ್ಚಿಸಲು ಪ್ರತ್ಯೇಕವಾದ ಹೊಸ ಸಬ್ ಸ್ಟೇಷನ್ ನಿರ್ಮಿಸಲು ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಕೈಗಾರಿಕಾ ಇಲಾಖೆಯ ಮುಖ್ಯಸ್ಥರಿಗೆ ಸೂಚಿಸಿದರು.
ಕೆ.ಎಸ್.ಎಸ್.ಐ.ಡಿ.ಸಿ. ಮತ್ತು ಕೆ.ಐ.ಎ.ಡಿ.ಬಿ. ಸಂಸ್ಥೆಗಳಿಂದ ಕೈಗಾರಿಕೆಗಳನ್ನು ನಡೆಸಲಾಗುತ್ತಿರುವ ಕಲ್ಲೂರು-ಮಂಡ್ಲಿ ಕೈಗಾರಿಕಾ ಪ್ರದೇಶವನ್ನು ಮಹಾನಗರಪಾಲಿಕೆಯು ತಮ್ಮ ಸುಪರ್ದಿಗೆ ತೆಗೆದುಕೊಂಡು ಅಲ್ಲಿಗೆ ಅಗತ್ಯವಿರುವ ಸ್ವಚ್ಚತೆ, ಶೌಚಾಲಯ, ಕುಡಿಯುವ ನೀರು ಮತ್ತು ಬೀದಿದೀಪ ಮುಂತಾದ ಸೌಲಭ್ಯಗಳನ್ನು ಒದಗಿಸಬೇಕು. ಅಲ್ಲದೇ ಈ ಕಾರ್ಯದ ವ್ಯವಸ್ಥಿತ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂಧಿಯನ್ನು ನಿಯೋಜಿಸುವಂತೆ ಜಿಲ್ಲಾಧಿಕಾರಿಗಳು ಮಹಾನಗರಪಾಲಿಕೆಯ ಆಯುಕ್ತ ಚಿದಾನಂದ ವಟಾರೆ ಅವರಿಗೆ ಸೂಚಿಸಿದರು.
ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕೈಗಾರಿಕೆಗಳಿಂದ ಹೊರಬರುತ್ತಿರುವ ಬಳಸಲಾಗಿರುವ ಮರಳನ್ನು ಸಮರ್ಪಕ ವಿಲೇವಾರಿ ಮಾಡಲು ಈಗಾಗಲೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿದೆ. ಇಲ್ಲಿನ ಮರಳಿನ ತ್ಯಾಜ್ಯ ಕಲುಷಿತವಾಗದಿರುವ ಬಗ್ಗೆ ಖಚಿತಪಡಿಸಿಕೊಂಡು ಪರಿಸರ ಮಾಲಿನ್ಯಗೊಳ್ಳದಂತೆ ಕ್ರಮ ವಹಿಸಲು ಸೂಚಿಸಿದ ಅವರು ಮುಂದಿನ ಒಂದೆರೆಡು ದಿನಗಳೊಳಗಾಗಿ ಮಂಡ್ಲಿ-ಕಲ್ಲೂರು ಮತ್ತು ಆಟೋ ಕಾಂಪ್ಲೆಕ್ಸ್ ಕೈಗಾರಿಕಾ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಪಾಲಿಕೆ ಸುಪರ್ಧಿಗೆ ವಹಿಸಿಕೊಳ್ಳಲು ಇರಬಹುದಾದ ಬಗ್ಗೆ ಕ್ರಮವಹಿಸುವುದಾಗಿ ಅವರು ನುಡಿದರು.
ಹರ್ಷ ಇನ್ಸೇನ್ಸ್ ಘಟಕವು ಸಾಗರ ಸಮೀಪದ ಆವಿನಹಳ್ಳಿಯಲ್ಲಿ 145ಕೋ.ರೂ.ಗಳ ವೆಚ್ಚದಲ್ಲಿ ಅಗರಬತ್ತಿ ಮತ್ತು ಧೂಪ ತಯಾರಿಕಾ ಘಟಕ ಸ್ಥಾಪಿಸಲು ಉದ್ದೇಶಿಸಿದೆ. ಈ ಯೋಜನೆಯ ಆರಂಭಕ್ಕೆ ಏಕಗವಾಕ್ಷಿ ಸಮಿತಿ ಜಿಲ್ಲಾ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಾಗರ ರಸ್ತೆಯ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಪ್ರಸ್ತುತ ಒಂದು ಲಕ್ಷ ನೀರಿನ ಸಂಗ್ರಹಣಾ ಸಾಮಥ್ರ್ಯದ ಟ್ಯಾಂಕ್ ಇದ್ದರೂ ಸರಿಯಾದ ನೀರು ಸರಬರಾಜಾಗದಿರುವ ಬಗ್ಗೆ ದೂರುಗಳಿದ್ದು, ಇನ್ನು ಹೆಚ್ಚಿನ ನೀರನ್ನು ಒದಗಿಸಲು ಹೆಚ್ಚುವರಿಯಾಗಿ 50,000ಲೀ. ಸಾಮಥ್ರ್ಯದ ಟ್ಯಾಂಕನ್ನು ನಿರ್ಮಿಸುವ ಅಗತ್ಯವಿರುವುದನ್ನು ಅಲ್ಲಿನ ಕೈಗಾರಿಕೆಗಳ ಮುಖ್ಯಸ್ಥರು ಗಮನಕ್ಕೆ ತಂದಿದ್ದಾರೆ. ಈ ವಿಷಯದ ಕುರಿತು ಕೈಗಾರಿಕಾ ಇಲಾಖೆಯ ಅಧಿಕಾರಿಗಳು, ಪಾಲಿಕೆ ಆಯುಕ್ತರು ಹಾಗೂ ಸಂಘದ ಪದಾಧಿಕಾರಿಗಳು ಸಭೆ ಸೇರಿ ಅಗತ್ಯ ನಿರ್ಣಯ ಕೈಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ಚಿದಾನಂದ ಎಸ್.ವಟಾರೆ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಆರ್.ಗಣೇಶ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಲ್ಲಿಕಾರ್ಜುನ್ ಸೇರಿದಂತೆ ಕೈಗಾರಿಕಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
