1965ರಲ್ಲಿ ಲಿಂಗನಮಕ್ಕಿಗೆ ಅಣೆಕಟ್ಟು ಕಟ್ಟುವ ಸಂದರ್ಭದಲ್ಲಿ ಶರಾವತಿ ಕಣಿವೆಯ ಒಂದು ಲಕ್ಷ ಎಕರೆ ಕೃಷಿ ಜಮೀನು ನೀರು ಪಾಲಾಯಿತು. ಮನೆ, ಶಾಲೆ, ತೋಟ, ಗದ್ದೆ, ದೇವಾಲಯ ಇಡೀ ಬದುಕೇ ಮುಳುಗಿಹೋಯಿತು. ಈ ಕಣಿವೆಯ ಜನ ಸಂಪರ್ಕಕ್ಕೊಂದು ಸೇತುವೆ ನೀಡಿ ಎಂದು ಹಕ್ಕೊತ್ತಾಯಿಸಿದ ಹೋರಾಟಕ್ಕೆ ನ್ಯಾಯ ದೊರೆತು ಕಳಸವಳ್ಳಿ-ಅಂಬಾರಗೋಡ್ಲು ಸೇತುವೆ ನಿರ್ಮಾಣದ ಕಾರ್ಯ ಆರಂಭಗೊಂಡಿದೆ.
ನಿತ್ಯ ಹರಿದ್ವರ್ಣದ ಕಾಡನ್ನು ಹೊಂದಿರುವ ಶರಾವತಿ ಕಣಿವೆಯಲ್ಲಿ ಭಾರತದ ಎರಡನೇ ಉದ್ದದ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸೇತುವೆಯೊಂದನ್ನು ಕೇಂದ್ರ ಸರ್ಕಾರ ನಿರ್ಮಿಸುತ್ತಿದೆ. ಇದಕ್ಕೆ ಮಧ್ಯಪ್ರದೇಶದ ಭೂಪಾಲ್ ನ ದಿಲೀಪ್ ಬಿಲ್ಡ್ ಕಾನ್‌ ಎನ್ನುವ ಕಂಪೆನಿಯವರು ಸೇತುವೆ ಕಟ್ಟುವ ಸಾರಥ್ಯ ಹೊತ್ತಿದ್ದಾರೆ. ಕೇಂದ್ರ ಸರ್ಕಾರ ಸೇತುವೆ ನಿರ್ಮಾಣಕ್ಕೆ 423 ಕೋಟಿ ವೆಚ್ಚ ಮಾಡುತ್ತಿದೆ. ಭಾರತದಲ್ಲಿ ಇಂತಹುದೇ ಸೇತುವೆಯನ್ನು ಇದೇ ಕಂಪೆನಿಯವರು ಗುಜರಾತ್, ಗೋವಾಗಳಲ್ಲಿ ಆರಂಭಿಸಿದ್ದಾರೆ. ಕಳಸವಳ್ಳಿ-ಅಂಬಾರಗೋಡ್ಲು ಸೇತುವೆ 2.1ಕಿಲೋಮೀಟರ್ ವ್ಯಾಪ್ತಿಯದ್ದಾಗಿದ್ದು ಇದಕ್ಕೆ ಒಟ್ಟು 6.5ಕಿಲೋಮೀಟರ್ ಚತುಷ್ಪಥ ರಸ್ತೆಯನ್ನೂ ಸಹ ಈ ಯೋಜನೆ ಒಳಗೊಂಡಿದೆ. ಸೇತುವೆಯು ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಾಣವಾಗುತ್ತಿದೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಯೋಜನೆಯಲ್ಲಿ ಈ ಸೇತುವೆ ನಿರ್ಮಾಣವಾಗುತ್ತಿದ್ದು ಕೇಂದ್ರದಿಂದ ಅನುದಾನ ಪಡೆಯುವಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು, ಸಂಸದ ಬಿ.ವೈ. ರಾಘವೇಂದ್ರ ಹಾಗೂ ಸಾಗರ ವಿಧಾನಸಭಾ ಶಾಸಕರಾದ ಹಾಲಪ್ಪನವರ ಪ್ರಯತ್ನ ಸಫಲವಾಗಿದೆ.

ಪ್ರಸನ್ನ ಕೆರೆಕೈ ಈ ವಿಚಾರವಾಗಿ ಮತನಾಡಿ ಅಂಬಾರಗೋಡು-ಕಳಸವಳ್ಳಿ ಸೇತುವೆ ನಿರ್ಮಾಣ ಹೋರಾಟ ಸಮಿತಿಯ ಸಂಚಾಲಕ : ನಮ್ಮ ಭಾಗದ ಜನ ರಾಜ್ಯದ ಜನತೆಗೆ ಶೇಕಡಾ 33ರಷ್ಟು ವಿದ್ಯುತ್ ನೀಡುವಲ್ಲಿ ತಮ್ಮ ಇಡೀ ಬದುಕನ್ನೇ ಕಳೆದುಕೊಂಡಿದ್ದಾರೆ. ನಮ್ಮ ಕಷ್ಟಗಳನ್ನು ಬಹಳ ಹತ್ತಿರದಿಂದ ನೋಡಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಹೋರಾಟದಲ್ಲಿ ಅಂದು ತಾವೂ ಪಾಲ್ಗೊಂಡು ಇದಕ್ಕೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಕೇಂದ್ರ ಸರ್ಕಾರಕ್ಕೆ ಈ ಯೋಜನೆ ಅವಶ್ಯಕತೆಯನ್ನು ಮನ ಮುಟ್ಟಿಸಲು ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನ, ಸಾಥ್ ನೀಡಿದ ಶಾಸಕ ಹಾಲಪ್ಪನವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಅಲ್ಲದೆ ಇಡೀ ಶರಾವತಿ ಕಣಿವೆಯ ಜನ ತಮ್ಮ ಬದುಕಿನ ಹೋರಾಟವನ್ನಾಗಿ ಕೈಗೆತ್ತಿಕೊಂಡು ಫಲವಂತಿಕೆ ಕಾಣುವಲ್ಲಿ ಶ್ರಮ ವಹಿಸಿದರು.

ಗಣಪತಿ ಹೆಗಡೆ ಹಿನ್ಸೋಡಿ, ತುಮರಿ ವಾಸಿ ಮಾತನಾಡಿ: ನಮ್ಮ ಊರಿನಲ್ಲಿ ಇಂತಹ ಸೇತುವೆ ಆಗುತ್ತಿರುವುದು ನಮ್ಮ ಭಾಗ್ಯ. ಮುಂದೆ ನಮ್ಮ ಭಾಗದ ಮಕ್ಕಳೂ ಕೂಡ ದೊಡ್ಡ ದೊಡ್ಡ ಶಾಲೆಗೆ ಸೇರಿ ಹೆಚ್ಚು ವಿದ್ಯಾವಂತರಾಗುತ್ತಾರೆ. ಸಂಪರ್ಕ ಸೇತುವೆ ನಮ್ಮದಾಗುತ್ತಿದೆ.

ಪೀರ್ ಪಾಷಾ, ಸಹಾಯಕ ಕಾರ್ಯಪಾಲಕ ಅಭಿಯಂತರ ಮಾತನಾಡಿ ರಾಷ್ಟ್ರೀಯ ಹೆದ್ದಾರಿ, ಶಿವಮೊಗ್ಗ:
ಕಳಸವಳ್ಳಿ-ಅಂಬಾರಗೋಡ್ಲು ಸೇತುವೆ ಕೇಂದ್ರ ಸರ್ಕಾರದಿಂದ ಅನುಮೋದನೆಯಾಗಿ ಕೆಲಸಕ್ಕೆ ಚಾಲನೆ ದೊರೆತಿದ್ದು ಕೆಲಸ ಆರಂಭಗೊಂಡಿದೆ. ಭಾರತದಲ್ಲಿಯೇ ಎರಡನೆಯ ಅತೀ ಉದ್ದದ ಸೇತುವೆ ನೀರಿನ ಮಧ್ಯೆ ಹಾದುಹೋಗುತ್ತಿರುವುದು ಇದಾಗಿದೆ ಎಂಬುದೂ ಕೂಡ ನಮ್ಮ ಜಿಲ್ಲೆಯ ಹೆಗ್ಗಳಿಕೆ. ಕೇಂದ್ರ ಸರ್ಕಾರದ ಅನುದಾನದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ರಾಜೀವ್ ದಿಲೀಪ್ ಬಿಲ್ಡ್ ಕಾನ್‌ ಕಂಪೆನಿಯ ಅಧಿಕಾರಿ ಮಾತನಾಡಿ: ನಮ್ಮ ಸಂಸ್ಥೆ ದೇಶ-ವಿದೇಶಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸೇತುವೆಗಳನ್ನು ನಿರ್ಮಾಣ ಮಾಡುತ್ತಿದೆ. ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಜನತೆ ತುಂಬಾ ಸಹಕಾರ ನೀಡುತ್ತಿದ್ದಾರೆ. ಎಲ್ಲರ ಸಹಕಾರದಿಂದ ನಮಗೆ ನೀಡಿರುವ ಮೂರು ವರ್ಷದ ಅವಧಿಗಿಂತ ಮುಂಚೆಯೇ ಕೆಲಸ ಮುಗಿಸುತ್ತೇವೆಂಬ ವಿಶ್ವಾಸ ನಮಗಿದೆ.

ಶಿವಮೊಗ್ಗ ಜಿಲ್ಲೆಯ ನಿತ್ಯ ಹರಿದ್ವರ್ಣದ ಕಾಡನ್ನು ಹೊಂದಿರುವ ಶರಾವತಿ ಕಣಿವೆಯ ಕಳಸವಳ್ಳಿ-ಅಂಬಾರಗೋಡ್ಲು ಸೇತುವೆ 400 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಒಂದು ಕಡೆ ಸಿಗಂದೂರು, ಮತ್ತೊಂದು ಕಡೆ ಕೊಲ್ಲೂರು ಮೂಕಾಂಬಿಕಾ ದೇವಾಲಯ ಎರಡನ್ನೂ ತನ್ನ ಒಡಲಲ್ಲಿಟ್ಟುಕೊಂಡಿರುವ ಶರಾವತಿ ಕಣಿವೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸೇತುವೆ ನಿರ್ಮಾಣವಾಗುತ್ತಿದ್ದು ಇದನ್ನು ನೋಡಲು ಮುಂದಿನ ದಿನಗಳಲ್ಲಿ ಪ್ರವಾಸಿಗರ ದಂಡು ಮೇಳೈಸುತ್ತದೆ.
error: Content is protected !!