ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಪೋಷಣ್ ಅಭಿಯಾನ ದೇಶಾದ್ಯಂತ ಆರಂಭಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಹಸಿವು, ಅಪೌಷ್ಠಿಕತೆ ನಿವಾರಣೆಗೆ ವಿಶ್ವಸಂಸ್ಥೆ ಮತ್ತು ಸ್ಥಳೀಯ ಸರ್ಕಾರದ ಜತೆಯಲ್ಲಿ ಸಂಘ ಸಂಸ್ಥೆಗಳ ನೆರವಿನೊಂದಿಗೆ ಯೋಜನೆ ಅನುಷ್ಠಾನಕ್ಕೆ ಅವಿರತವಾಗಿ ಶ್ರಮಿಸುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಪೋಷಣ್ ಅಭಿಯಾನ ಯೋಜನೆಯು ಶೇ. 80ರಷ್ಟು ಪ್ರಗತಿ ಸಾಧಿಸಿದೆ.
ಅಪೌಷ್ಠಿಕತೆ ಸಮಸ್ಯೆ ನಿವಾರಣೆ ಬಗ್ಗೆ ಪ್ರತಿ ವರ್ಷ ಪೋಷಣ್ ಅಭಿಯಾನವನ್ನು ಸರ್ಕಾರ ನಡೆಸುತ್ತಿದೆ. ಅದರಲ್ಲಿಯೂ ಗರ್ಭಿಣಿ, ಬಾಣಂತಿ, ಶಿಶು ಹಂತದಲ್ಲಿ ಯಾವುದೇ ಅಪೌಷ್ಠಿಕತೆ ನಿರ್ಮಾಣವಾಗದಂತೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಗರ್ಭಿಣಿ, ಬಾಣಂತಿಯರಿಗೆ ಸರ್ಕಾರ ನೀಡುವ ಪೌಷ್ಠಿಕ ಆಹಾರಗಳನ್ನು ವಿತರಿಸಿ ಆರೋಗ್ಯದ ಬಗ್ಗೆ ವಿಚಾರಣೆ ನಡೆಸುತ್ತಾರೆ.
ಚಂದ್ರಪ್ಪ, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿವಮೊಗ್ಗ ಮಾತನಾಡಿ ಪೋಷಣ್ ಅಭಿಯಾನದಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಠಿಕ ಆಹಾರದ ಜತೆಯಲ್ಲಿ ಕಾಲ ಕಾಲಕ್ಕೆ ಹೇಗೆ ಕಾರ್ಯ ನಿರ್ವಹಿಸಬೇಕು, ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡುವ ಜತೆಯಲ್ಲಿ ತಾಯಿ ಎದೆ ಹಾಲಿನ ಪ್ರಾಮುಖ್ಯತೆಯನ್ನು ಸಹ ತಿಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಅಭಿಯಾನವನ್ನು ಹೆಚ್ಚಿನ ಪ್ರಗತಿ ಸಾಧಿಸಿದೆ.
ಅನ್ನಪೂರ್ಣ, ಫಲಾನುಭವಿ ಮಾತನಾಡಿ ನನ್ನ ಮಗುವನ್ನು ಇಲ್ಲಿನ ಅಂಗನವಾಡಿಗೆ ಕಳುಹಿಸುತ್ತೇನೆ. ಗರ್ಭಿಣಿ ಆಗಿದ್ದ ಸಂದರ್ಭದಿಂದ ಮಗುವಿನ ಜನನ ಆಗುವರೆಗೂ ಸರ್ಕಾರದ ಎಲ್ಲ ಅನುಕೂಲತೆಗಳನ್ನು ನೀಡಿದೆ. ಪೋಷಣ್ ಅಭಿಯಾನದಿಂದ ಹೆಚ್ಚಿನ ಅರಿವು ಮೂಡಿದೆ. ಪೌಷ್ಠಿಕಾಂಶಯುತ ಆಹಾರ ಸೇವನೆ ಮತ್ತು ಶಿಶುವಿನ ಪಾಲನೆ ಬಗ್ಗೆ ಮನವರಿಕೆ ಮಾಡಿದೆ.
ಆಶಾ, ಅಂಗನವಾಡಿ ಮೇಲ್ವಿಚಾರಕಿ ಮಾತನಾಡಿ ಭಾರತ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪೋಷಣ್ ಅಭಿಯಾನದಲ್ಲಿ ತಾಯಿ ಮಗುವಿನ ಆರೈಕೆ ಮತ್ತು ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿದೆ. ಮನೆ ಮನೆಗೆ ತೆರಳಿ ಎಲ್ಲ ವಾರ್ಡ್ಗಳಲ್ಲಿ ತಾಯಿ ಮಗುವಿನ ಪಟ್ಟಿ ತಯಾರಿಸಿ ಕಾಲ ಕಾಲಕ್ಕೆ ಅವರ ಆರೈಕೆ ಮತ್ತು ಪೌಷ್ಠಿಕಾಂಶದ ಪೂರೈಕೆ ಮಾಡಲಾಗುತ್ತಿದೆ.
ಭಾವನಾ, ಪೋಷಣ್ ಅಭಿಯಾನ ಅನುಷ್ಠಾನಾಧಿಕಾರಿ ಮಾತನಾಡಿ ಪೋಷಣ್ ಅಭಿಯಾನದಲ್ಲಿ ಫಲಾನುಭವಿಗಳು ವ್ಯವಸ್ಥಿತವಾಗಿ ಸ್ಪಂದಿಸುತ್ತಿದ್ದಾರೆ. ಪ್ರತಿ ಅಂಗನವಾಡಿಯ ಸಮೀಪದ ಮನೆಗಳಲ್ಲಿ ಭಿತ್ತಿ ಚಿತ್ರ ಅಂಟಿಸಿ ಯೋಜನೆಯ ಪ್ರಾಮುಖ್ಯತೆಯನ್ನು ಕುಟುಂಬಗಳಿಗೆ ಪರಿಚಯಿಸಲಾಗುತ್ತಿದೆ. ಫಲಾನುಭವಿಗಳು ತಾವೇ ಅಂಗನವಾಡಿಗೆ ಬಂದು ಹೆಸರು ನೋಂದಾಯಿಸುತ್ತಿದ್ದಾರೆ.
ಕೇಂದ್ರ ಸರ್ಕಾರದ ಬಹುಮುಖ್ಯವಾದ ತಾಯಿ-ಮಗುವಿಗೆ ಸಂಬಂಧಿಸಿದ ಪೋಷಣ್ ಅಭಿಯಾನ ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ.