ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ನವಿಲೆ ಆವರಣದಲ್ಲಿ ದಿನಾಂಕ: 17 ರಿಂದ 20 ರವರೆಗೆ ಕೃಷಿ ಮತ್ತು ತೋಟಗಾರಿಕೆ ಮೇಳದ ಸಮಾರೋಪ ಸಮಾರಂಭವು ದಿನಾಂಕ: 20.03.2023 ರಂದು ಆಯೋಜಿಸಲಾಯಿತು. ಈ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗೌರವಾನ್ವಿತ ಕುಲಪತಿಗಳಾದ ಡಾ. ಆರ್.ಸಿ. ಜಗದೀಶ್ ರವರು ವಹಿಸಿದ್ದರು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಅರುಣ್‍ಕುಮಾರ್, ವೀರಭದ್ರಪ್ಪ ಪೂಜಾರಿ ಮತ್ತು ನಾಗರಾಜಪ್ಪನವರು ಭಾಗವಹಿಸಿದ್ದರು.
ಈ ಮೇಳದಲ್ಲಿ ಭಾಗವಹಿಸಿದ ವಿಶ್ವವಿದ್ಯಾಲಯದ ಮಳಿಗೆಗಳಿಗೆ, ಕೃಷಿ ಮತ್ತು ಕೃಷಿ ಸಂಬಂಧಿಸಿದ ಇಲಾಖೆಗಳಿಗೆ, ಖಾಸಗಿ ಸಂಸ್ಥೆಯ ಮಳಿಗೆಗಳಿಗೆ, ಸ್ವ-ಸಹಾಯ ಸಂಘಗಳ ಮಳಿಗೆಗಳಿಗೆ ಹಾಗೂ ಕೃಷಿ ಯಂತ್ರೋಪಕರಣಗಳ ಮಳಿಗೆಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಉತ್ತಮ ಮಳಿಗೆ ಪ್ರಶಸ್ತಿಗಳನ್ನು ಸಮಾರಂಭದಲ್ಲಿ ಪ್ರಧಾನ ಮಾಡಲಾಯಿತು.
ಈ ಬಾರಿಯ ಕೃಷಿ ಮೇಳವು ಸುಸ್ಥಿರ ಆದಾಯಕ್ಕಾಗಿ ಸೆಂಕಡರಿ ಕೃಷಿ ತಾಂತ್ರಿಕತೆಗಳು ಮತ್ತು ಮೌಲ್ಯವರ್ಧನೆ ಎಂಬ ಧ್ಯೇಯದೊಂದಿಗೆ ನಡೆಸಲಾಯಿತು. ಮುಖ್ಯವಾಗಿ ಸಿರಿಧಾನ್ಯಗಳ ಬಗ್ಗೆ ರೈತರಲ್ಲಿ ಜಾಗೃತಿ ಮತ್ತು ಮಾಹಿತಿಯನ್ನು ಈ ಮೇಳದಲ್ಲಿ ನೀಡಲಾಯಿತು. ಈ ಮೇಳದಲ್ಲಿ 350 ಕ್ಕೂ ಹೆಚ್ಚು ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಸಂಬಂಧಿಸಿದ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ಮಳಿಗೆಳಿಗೆ ವ್ಯವಸ್ಥೆ ಮಾಡಲಾಗಿತ್ತು.
ಪ್ರತಿ ದಿನ ಮೇಳದಲ್ಲಿ ತಾಂತ್ರಿಕ ಸಮಾವೇಶವನ್ನು ಹಮ್ಮಿಕೊಂಡು ಪ್ರಗತಿಪರ ರೈತರು ಹಾಗೂ ವಿಜ್ಞಾನಿಗಳಿಂದ ಚರ್ಚಾಗೋಷ್ಠಿ ನಡೆಸಲಾಯಿತು. ಈ ತಾಂತ್ರಿಕ ಸಮಾವೇಶದಲ್ಲಿ ಅಡಿಕೆ ಕೃಷಿಯ ಸವಾಲುಗಳು ಮತ್ತು ರೈತರ ತಳಿಗಳ ಸಂರಕ್ಷಣೆ, ಸೆಕಂಡರಿ ಕೃಷಿ ಮತ್ತು ಮೌಲ್ಯವರ್ಧನೆ ಹಾಗೂ ಸಿರಿಧಾನ್ಯಗಳ ಮಹತ್ವ ಮತ್ತು ಸಮಗ್ರ ಕೃಷಿ ಪದ್ಧತಿಗಳ ಬಗ್ಗೆ ತಾಂತ್ರಿಕ ಸಮಾವೇಶ ಮತ್ತು ಚರ್ಚಾಗೋಷ್ಠಿಯನ್ನು ಏರ್ಪಡಿಸಲಾಯಿತು.
ಆಡಳಿತ ಮಂಡಳಿ ಸದಸ್ಯರಾದ ಶ್ರೀ ವೀರಭದ್ರಪ್ಪ ಪೂಜಾರಿ ಇವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ, ನಮ್ಮ ವಿಶ್ವವಿದ್ಯಾಲಯವು ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣೆಯಲ್ಲಿ ಉತ್ತಮ ಕಾರ್ಯವನ್ನು ಮಾಡುತ್ತಿದೆ ಎಂದು ಹೇಳಿದರು ಹಾಗೂ ರೈತರು ಈ ಮೇಳದ ಸದುಪಯೋಗವನ್ನು ಹೆಚ್ಚಾಗಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಗೌರವಾನ್ವಿತ ಕುಲಪತಿಗಳು ತಮ್ಮ ಅಧ್ಯಕ್ಷಿಯ ನುಡಿಯಲ್ಲಿ ನಮ್ಮ ವಿಶ್ವವಿದ್ಯಾಲಯವು ಕೃಷಿ ಕ್ಷೇತ್ರದಲ್ಲಿ ಉತ್ತುಮ ಸಂಶೋಧನೆಯಲ್ಲಿ ತೊಡಗಿದ್ದು, ಹಾಗೆಯೇ ನೂತನ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸಲು ಸುಮಾರು 4 ಲಕ್ಷ ರೈತರೊಂದಿಗೆ ಸಂಪರ್ಕವನ್ನು ಹೊಂದಿದ್ದು ಉತ್ತಮವಾದ ಕೃಷಿ ವಿಸ್ತರಣೆಯ ಜಾಲವನ್ನು ಹೊಂದಿದೆ ಎಂದು ತಿಳಿಸಿದರು.
ಈ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರಿಗೂ ಸ್ವಾಗತವನ್ನು ಡಾ ದುಶ್ಯಂತ್ ಕುಮಾರ್, ಡೀನ್ (ಕೃಷಿ), ಇವರು ಕೋರಿದರು. ಡಾ. ಹೇಮ್ಲಾನಾಯ್ಕ್, ವಿಸ್ತರಣಾ ನಿರ್ದೇಶಕರು ಹಾಗೂ ಅಧ್ಯಕ್ಷರು, ಕೃಷಿ ಮತ್ತು ತೋಟಗಾರಿಕ ಮೇಳ ಇವರು ಮೇಳದಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಸಿಬ್ಬಂದಿ ವರ್ಗದವರನ್ನು ಸ್ಮರಿಸಿಕೊಂಡು ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರಿಗೂ ವಂದನೆಗಳನ್ನು ಕೋರಿದರು.