ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ, ಶಿವಮೊಗ್ಗ ವಿಸ್ತರಣಾ ನಿರ್ದೇಶನಾಲಯ, ಹಾಗೂ ಶ್ರೀ ಕ್ಷೇತ್ರ ಹಿರೇಕಲ್ಮಠ ಹೊನ್ನಾಳಿ ಇವರ ಸಹಯೋಗದೊಂದಿಗೆ ಹಿರೇಕಲ್ಮಠ ಹೊನ್ನಾಳಿಯಲ್ಲಿ ನವೋದ್ಯಮ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಾಗಾರವನ್ನು ಶಿವಮೊಗ್ಗ ಜಿಲ್ಲಾ ಕೈಗಾರಿಕಾ ವಾಣಿಜ್ಯ ಛೇಂಬರ್ ಮಾಜಿ ಅಧ್ಯಕ್ಷರಾದ ಶ್ರೀ. ಡಿ.ಎಸ್. ಅರುಣ ಉದ್ಘಾಟಿಸಿ ಮಾತನಾಡುತ್ತಾ ದೇಶವನ್ನು ಸದೃಢ, ಸ್ವಾವಲಂಬಿಯಾಗಿ ಮಾಡಬೇಕಾದರೆ ನವೋದ್ಯಮ ಚಿಂತನೆಯನ್ನು ಶಿಕ್ಷಣದಲ್ಲಿ ಅಳವಡಿಸಿ ಯುವಪೀಳಿಗೆಯನ್ನು ಉದ್ಯಮಶೀಲತೆ ಕಡೆಗೆ ಪ್ರೇರೇಪಿಸಬೇಕೆಂದರು ಹಾಗೂ ಕೇಂದ್ರ ಸರ್ಕಾರ ಜಾರಿಗೆ ತಂದ ನವೋದ್ಯಮ ನೀತಿಯನ್ನು ಶ್ಲಾಘಿಸುತ್ತಾ ಯುವಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದರು.
ದಾವಣಗೆರೆ ಜಿಲ್ಲೆಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ ಜಯಪ್ರಕಾಶ ಅವರು ಜಿಲ್ಲೆಯಲ್ಲಿ ಮೆಕ್ಕೆಜೋಳವನ್ನು 15000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದು, ಅಡಿಕೆ, ತೆಂಗು, ಬಾಳೆ ಹಾಗೂ ತೋಟಗಾರಿಕಾ ಬೆಳೆಗಳನ್ನು ಹೆಚ್ಚಾಗಿ ಉತ್ಪಾದಿಸಲಾಗುತ್ತಿದೆ, ಈ ಬೆಳೆಗಳಿಗೆ ಪೂರಕವಾದ ಕೈಗಾರಿಕೆಗಳನ್ನು ಸ್ಥಾಪಿಸಬೇಕೆಂದು ತಿಳಿಸುತ್ತಾ, ಕೈಗಾರಿಕಾ ಪ್ರಾರಂಭಿಸುವವರಿಗೆ ಸರ್ಕಾರದ ಸೌಲಭ್ಯಗಳನ್ನು ಒಂದೇ ಇಲಾಖೆ ಅಡಿಯಲ್ಲಿ ಒದಗಿಸಲಾಗುವುದು ಎಂದು ತಿಳಿಸಿದರು. ಕೇಂದ್ರ ಸರ್ಕಾರದ ನೂತನ ಯೋಜನೆಯಾದ ಒಂದು ಜಿಲ್ಲೆ ಒಂದು ಉತ್ಪನ್ನ ಅಡಿಯಲ್ಲಿ ದಾವಣಗೆರೆ ಜಿಲ್ಲೆಗೆ ಸಿರಿಧಾನ್ಯವನ್ನು ಗುರುತಿಸಿದ್ದಾರೆ. ಈ ನಿಟ್ಟಿನಲ್ಲಿ ಇದಕ್ಕೆ ಪೂರಕವಾದ ನವೋದ್ಯಮಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಅಭಿಪ್ರಾಯಪಟ್ಟರು.
ಈ ಕಾರ್ಯಗಾರದಲ್ಲಿ ನವೋದ್ಯಮಿಗಳಾದ ಸುರೇಶ. ಎಸ್. ಆರ್. ಭೂಮಿ ಅಗ್ರಿ ವೆಂಚರ್ ಸಂಸ್ಥಾಪಕರು, ಅಡಿಕೆಯಲ್ಲಿ ಕೃಷಿಕರ ಆದಾಯ ಹೆಚ್ಚಿಸಲು ಅಡಿಕೆ ಹಾಳೆಯನ್ನು ಚರ್ಮದ ರೀತಿ ಮಾಡಿ ಅದರಿಂದ ಬ್ಯಾಗ್, ಪುಸ್ತಕ, ಚಪ್ಪಲಿ ಇತ್ಯಾದಿಗಳನ್ನು ಸಿದ್ಧಪಡಿಸಿದ ಬಗ್ಗೆ ಕೃಷಿ ಕಚ್ಚಾವಸ್ತುಗಳಿಂದ ನವೋದ್ಯಮ ಸ್ಥಾಪಿಸಲು ಇರುವ ಅವಕಾಶಗಳ ಕುರಿತು ತಿಳಿಸಿದರು. ಮೇದಕ ತತ್ವಂ ಸಂಸ್ಥಾಪಕರಾದ ರಮೇಶ್ ರಾವ್ ಅವರು ಕೃಷಿ ಸಂಸ್ಕರಣೆ ಕ್ಷೇತ್ರದಲ್ಲಿ ತೊಡಗಿ ಸೋಯಾಬೀನ್ ನಿಂದ ಪನ್ನೀರ್ ಮಾಡುವುದು ಮತ್ತು ಮಲೆನಾಡು ಹಣ್ಣುಗಳಿಂದ ವೈನ್ ತಯಾರಿಕೆ ಬಗ್ಗೆ ತಿಳಿಸಿ, ಕೃಷಿ ಸಂಸ್ಕರಣ ಕ್ಷೇತ್ರದಲ್ಲಿರುವ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಿದರು.
ರೂಟ್ ಗೂಡ್ಸ್ ಸಂಸ್ಥಾಪಕರಾದ ಸಚಿನ್ ಹೆಗ್ಡೆ ಕೂಡಗಿ ಕೃಷಿಯಲ್ಲಿ ಐಟಿ ಬಳಕೆ ಹಾಗೂ ಇ-ಮಾರುಕಟ್ಟೆಯ ಅವಕಾಶಗಳ ಕುರಿತು ತಿಳಿಸಿದರು. ಏಕತ್ವ ಇನ್ನೋವೇಶನ್ ಸಂಸ್ಥಾಪಕರಾದ ಕೌಶಿಕ್ ಆರ್. ಉಡುಪ ಅವರು ಕೃಷಿಯಲ್ಲಿ ಐಟಿ ಬಳಕೆ ಮತ್ತು ಸೆನ್ಸಾರ್ ಆಧಾರಿತ ನೀರಾವರಿ ಕೊಡುವ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿದುದರ ಬಗ್ಗೆ ಹಾಗೂ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಅವಶ್ಯಕತೆಯನ್ನು ತಿಳಿಸಿದರು.
ಕೈಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಮನ್ಸೂರ್. ಎಂ. ಅವರು ನೂತನ ಕರ್ನಾಟಕ ಕೈಗಾರಿಕೆ ನೀತಿ 2020-25 ರ ಬಗ್ಗೆ ವಿವರಿಸುತ್ತಾ 20 ಲಕ್ಷ ಉದ್ಯೋಗ ಸೃಷ್ಟಿ ಹಾಗೂ 5 ಲಕ್ಷ ಕೋಟಿ ಹೂಡಿಕೆಯನ್ನು ಆಕರ್ಷಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ಅಂತಿಮವಾಗಿ ಶ್ರೀ ಒಡೆಯರ್ ಚೆನ್ನಮಲ್ಲಿಕಾರ್ಜುನ ಸ್ವಾಮಿ ಶಿವಾಚಾರ್ಯ ಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಯುವಶಕ್ತಿಯನ್ನು ಸ್ವಉದ್ಯೋಗದಾರರನ್ನಾಗಿ ಮಾಡಲು ಈ ನವೋದ್ಯಮ ಕಾರ್ಯಗಾರವನ್ನು ವಿಶ್ವವಿದ್ಯಾಲಯದ ಜೊತೆಗೂಡಿ ಆಯೋಜಿಸಲಾಗಿದೆ. ಯುವಕರೆಲ್ಲರೂ ಆತ್ಮ ನಿರ್ಭರ ಭಾರತವನ್ನು ಸೃಷ್ಟಿಸಲು, ದೇಶವನ್ನು ಸಬಲಗೊಳಿಸಲು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ವಿಸ್ತರಣಾ ನಿರ್ದೇಶಕರಾದ ಡಾ. ಕೆ. ಸಿ. ಶಶಿಧರ ಅವರು ಪ್ರಾಸ್ತಾವಿಕ ನುಡಿಯಲ್ಲಿ ನವೋದ್ಯಮ ಕಾರ್ಯಗಾರವನ್ನು ಉದ್ಯಮಿಗಳಾಗುವವರಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಲು ಹಾಗೂ ಸಾಧಕರೊಂದಿಗೆ ಸಂವಾದಿಸಲು ಆಯೋಜಿಸಲಾಗಿದೆ ಎಂದರು.
ಸಹ ವಿಸ್ತರಣಾ ನಿರ್ದೇಶಕರು ಹಾಗೂ ನವೋದ್ಯಮ ಕೇಂದ್ರದ ಮುಖ್ಯಸ್ಥರಾದ ಡಾ.ಎಸ್. ಯು. ಪಾಟೀಲ್ ವಿಶ್ವವಿದ್ಯಾಲಯದ ನವೋದ್ಯಮ ಕೇಂದ್ರದ ಪ್ರಯೋಜನವನ್ನು ಉದ್ಯಮಶೀಲರಾಗಬೇಕೆಂದಿರುವ ಯುವ ಪೀಳಿಗೆಯವರು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿ ವಂದನಾರ್ಪಣೆ ಸಲ್ಲಿಸಿದರು. ಡಾ.ಅರುಣ್ ಕುಮಾರ್, ವಿಜ್ಞಾನಿಗಳು (ಕೃಷಿ ವಿಸ್ತರಣೆ), ಇವರು ಕಾರ್ಯಕ್ರಮವನ್ನು ನಿರೂಪಿಸಿದರು.