ಶಿವಮೊಗ್ಗ, ಸೆ.11 ಪ್ರಕೃತಿಯ ಮೇಲೆ ನಾವು ಎಷ್ಟೇ ಅತಿಕ್ರಮಣ ಮಾಡಿದರೂ, ನಮ್ಮ ಭವಿಷ್ಯದ ದೃಷ್ಟಿಯಿಂದ ಕೃಷಿ ಮತ್ತು ಗೋ ಸಂಪತ್ತನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ತಿಳಿಸಿದರು.
ಅವರು ಬುಧವಾರ ಕೃಷಿ ಮತ್ತು ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಕೃತಕ ಗರ್ಭಧಾರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗೋವು ದೇಶದ ಆರ್ಥಿಕ ಚಟುವಟಿಕೆಗಳ ಬೆನ್ನೆಲುಬಾಗಿದೆ. ಆದರೆ ವಯಸ್ಸಾದ ತಂದೆ ತಾಯಂದಿರನ್ನು ವೃದ್ಧಾಶ್ರಮಕ್ಕೆ ಸೇರಿಸುವ ರೀತಿಯಲ್ಲಿ ಅಶಕ್ತ ಮತ್ತು ವಯಸ್ಸಾದ ಗೋವುಗಳನ್ನು ಕಟುಕರಿಗೆ ಮಾರುತ್ತಿರುವುದು ದುರದೃಷ್ಟಕರ. ಕುಟುಂಬದ ಸದಸ್ಯರಿಗೆ ರೋಗ ಬಂದರೆ ಯಾವ ರೀತಿಯಲ್ಲಿ ಅವರಿಗೆ ಆರೈಕೆ ಮಾಡುತ್ತೇವೆಯೋ ಅದೇ ರೀತಿ ಗೋವುಗಳಿಗೆ ಅನಾರೋಗ್ಯ ಬಂದರೆ ಔಷಧ ಉಪಚಾರ ಮಾಡಬೇಕು. ನಾವು ಪ್ರತಿನಿತ್ಯ ಬಳಸಿ ಬಿಸಾಡುವ ಪ್ಲಾಸ್ಟಿಕ್‍ಗಳನ್ನು ಸೇವಿಸಿ ಸಾವಿರಾರು ದನಕರುಗಳು ಗಂಭೀರ ಖಾಯಿಲೆಗಳಿಗೆ ತುತ್ತಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 2ರಿಂದ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಸಂಕಲ್ಪಕ್ಕೆ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದು ಹೇಳಿದರು.
ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಟಿ.ಎಂ.ಸದಾಶಿವ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲುಬಾಯಿ ರೋಗವನ್ನು ತಡೆಯಲು ಜಿಲ್ಲೆಯಲ್ಲಿ 6.45ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಸೆಪ್ಟಂಬರ್ 30ರಿಂದ ಅಕ್ಟೋಬರ್ 19ರವರೆಗೆ ನಡೆಯಲಿದೆ. ಗರ್ಭ ಧರಿಸುವ ಹಸುಗಳಲ್ಲಿ ಕಂಡು ಬರುವ ಕಂದು ರೋಗವನ್ನು ತಡೆಯಲು 4ರಿಂದ 8 ತಿಂಗಳ ಹೆಣ್ಣು ಕರುಗಳಿಗೆ ಲಸಿಕೆ ಹಾಕಲಾಗುವುದು. ಕೃತಕ ಗರ್ಭಧಾರಣಾ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯಲ್ಲಿ 100 ಹಳ್ಳಿಗಳನ್ನು ಆಯ್ಕೆ ಮಾಡಲಾಗಿದ್ದು, ತಲಾ ಒಂದು ಹಳ್ಳಿಗೆ 200 ರಾಸುಗಳಂತೆ ಒಟ್ಟು 2ಲಕ್ಷ ರಾಸುಗಳಿಗೆ ಕೃತಕ ಗರ್ಭಧಾರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೆ.15ರಿಂದ 6ತಿಂಗಳ ಕಾಲ ಉಚಿತ ಗರ್ಭಧಾರಣಾ ಕಾರ್ಯವನ್ನು ಮಾಡಲಾಗುವುದು ಎಂದರು.
ಮಹಾವಿದ್ಯಾಲದಯ ಕುಲಪತಿ ಡಾ.ಎಂ.ಕೆ.ನಾಯ್ಕ್ ಅವರು ಮಾತನಾಡಿ, 2030ರ ಒಳಗಾಗಿ ರಾಷ್ಟ್ರವನ್ನು ಜಾನುವಾರುಗಳ ಕಾಲುಬಾಯಿ ಬೇನೆ ಮುಕ್ತ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವ ಯೋಜನೆಗೆ ಪೂರಕವಾಗಿ ಈ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಎಸ್.ಪಿ.ನಟರಾಜ್ ಸೇರಿದಂತೆ ರೈತರು, ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.