News Next

ಶಿವಮೊಗ್ಗ, ಮಾ.9 : ವಿವಿಧ ಯೋಜನೆಗಳ ಅಡಿಯಲ್ಲಿ ಕೃಷಿ ಉಪಕರಣಗಳ ಮೇಲೆ ನೀಡಲಾಗುವ ಸಬ್ಸಿಡಿಯನ್ನು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.50ರಿಂದ ಶೇ.75ಕ್ಕೆ ಹೆಚ್ಚಳ ಮಾಡಲಾಗುವುದು ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರು ತಿಳಿಸಿದರು.

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಟಾರ್ಪಾಲಿನ್ ಸೇರಿದಂತೆ ಕೃಷಿ ಉಪಕರಣಗಳ ಮೇಲಿನ ಸಬ್ಸಿಡಿ ಪ.ಜಾತಿ ಮತ್ತು ಪಂಗಡಗಳ ಫಲಾನುಭವಿಗಳಿಗೆ ಶೇ.90ರಷ್ಟಿದ್ದು, ಸಾಮಾನ್ಯ ವರ್ಗದ ಬಡವರಿಗೆ ನೀಡಲಾಗುವ ಸಬ್ಸಿಡಿಯನ್ನು ಹೆಚ್ಚಿಸುವಂತೆ ಹೊಳೆ ಹೊನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ಅವರು ಸಭೆಯಲ್ಲಿ ಸಚಿವರನ್ನು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಸಾಮಾನ್ಯ ವರ್ಗದ ಫಲಾನುಭವಿಗಳ ಸಬ್ಸಿಡಿಯನ್ನು ಶೇ.75ಕ್ಕೆ ಮುಂದಿನ ಹಣಕಾಸು ಸಾಲಿನಿಂದ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ಕೃಷಿ ಹೊಂಡ ಕಾಮಗಾರಿ ಪೂರ್ಣಗೊಳಿಸಿ: ಕೃಷಿ ಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ 1092 ಕೃಷಿ ಹೊಂಡಗಳನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ. 686 ಕೃಷಿ ಹೊಂಡಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದ್ದು, ಒಟ್ಟು 546 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಇನ್ನುಳಿದ ಕೃಷಿ ಹೊಂಡಗಳನ್ನು ಆದಷ್ಟು ಬೇಗನೆ ನಿರ್ಮಿಸುವಂತೆ ಸಚಿವರು ಸೂಚನೆ ನೀಡಿದರು. ಕೃಷಿ ಭಾಗ್ಯ ಯೋಜನೆಯಡಿ 3.65 ಕೋಟಿ ರೂ. ಬಿಡುಗಡೆಯಾಗಿದ್ದು, 3.08ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್ ಕುಮಾರ್ ತಿಳಿಸಿದರು.

ಇಸ್ರೇಲಿ ಮಾದರಿ ಕೃಷಿ: ಯಾಂತ್ರೀಕೃತ ನಾಟಿ ಸೇರಿದಂತೆ ಭತ್ತದ ಯಾಂತ್ರೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕಡಿಮೆ ನೀರು ಬಳಸಿಕೊಂಡು ವೈಜ್ಞಾನಿಕ ಕೃಷಿ ಚಟುವಟಿಕೆ ನಡೆಸುವ ಇಸ್ರೇಲಿ ಮಾದರಿ ಕೃಷಿಯ ಪ್ರಾತ್ಯಕ್ಷಿಕೆಯನ್ನು ಜಿಲ್ಲೆಯಲ್ಲಿ ಕೈಗೊಳ್ಳಬೇಕು. ಈ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಿದರೆ ಅನುಮೋದನೆಯನ್ನು ನೀಡಲಾಗುವುದು. ಸಿರಿಧಾನ್ಯ ಬೆಳೆಯಲು ರೈತರಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಶೂನ್ಯ ಬಂಡವಾಳ ಕೃಷಿಯನ್ನು ಉತ್ತೇಜಿಸಲು ನೆರವು ನೀಡಲಾಗುತ್ತಿದೆ. ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ರೈತರಿಗೆ ಸಮರ್ಪಕವಾದ ಮಾಹಿತಿಯನ್ನು ನೀಡುವ ಕಾರ್ಯವನ್ನು ಮಾಡಬೇಕು ಎಂದು ಸಚಿವರು ತಿಳಿಸಿದರು.

ಕೃಷಿ ಯಂತ್ರಧಾರೆ: ಜಿಲ್ಲೆಯಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ 274 ಗ್ರಾಮಗಳ ವ್ಯಾಪ್ತಿಯಲ್ಲಿ 7ಕೃಷಿ ಯಂತ್ರಧಾರೆ ಕೇಂದ್ರ, ಜಾನ್ ಡೀರ್ ಸಂಸ್ಥೆ ಸಹಯೋಗದಲ್ಲಿ 107 ಕೇಂದ್ರಗಳ ವ್ಯಾಪ್ತಿಯಲ್ಲಿ 3 ಹಾಗೂ ವರ್ಷಾ ಅಸೋಸಿಯೇಟ್ಸ್ ಚಿತ್ರದುರ್ಗ ಸಹಯೋಗದಲ್ಲಿ 18ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇದರ ಸದುಪಯೋಗ ಪಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇಗೌಡ, ಕೃಷಿ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.


ಕೃಷಿ ಹೊಂಡ ನಿರ್ಮಾಣಕ್ಕೆ ಒತ್ತು: ಸಚಿವ ಶಿವಶಂಕರ ರೆಡ್ಡಿ

ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಲು ಒತ್ತು ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಲು ಮುಂದೆ ಬರಬೇಕು ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರು ತಿಳಿಸಿದರು.

ಸಚಿವರು ಶಿವಮೊಗ್ಗ ತಾಲೂಕಿನ ಚಾಮೇನಹಳ್ಳಿ ಗ್ರಾಮದಲ್ಲಿ ಕೃಷಿ ಹೊಂಡವನ್ನು ವೀಕ್ಷಿಸಿದ ಬಳಿಕ ಮಾತನಾಡಿದರು.

ಕೃಷಿ ಹೊಂಡ ನಿರ್ಮಾಣಕ್ಕೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ.90ರಷ್ಟು ಸಬ್ಸಿಡಿ ಹಾಗೂ ಸಾಮಾನ್ಯ ವರ್ಗದವರಿಗೆ ಶೇ.80ರಷ್ಟು ಸಬ್ಸಿಡಿಯನ್ನು ನೀಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಲು ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು. ಸೂಕ್ಷ್ಮ ನೀರಾವರಿ ಮೂಲಕ ಕೃಷಿಯಲ್ಲಿ ನೀರಿನ ಬಳಕೆ ಕಡಿಮೆ ಮಾಡಲು ಉತ್ತೇಜನ ನೀಡಲಾಗುತ್ತಿದೆ. ಇದೇ ರೀತಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯುವಂತಾಗಲು ಮಾರುಕಟ್ಟೆ ವ್ಯವಸ್ಥೆಯನ್ನು ಸಹ ಬಲಪಡಿಸಲಾಗುತ್ತಿದೆ ಎಂದು ಹೇಳಿದರು.

error: Content is protected !!