ಕ್ರೀಡಾಸ್ಫೂರ್ತಿ ಯಶಸ್ಸಿಗೆ ಸಹಕಾರ: ಪ್ರೊ. ವೀರಭದ್ರಪ್ಪ

ಶಂಕರಘಟ್ಟ, ಜು. 29: ಯಾವುದೇ ಆಟೋಟ, ಕ್ರೀಡೆಗಳಲ್ಲಿ ಯಶಸ್ಸು ಪಡೆಯಲು ತಾಳ್ಮೆ, ಪರಿಶ್ರಮ, ಸತತ ಪ್ರಯತ್ನ ಹಾಗೂ ಕ್ರೀಡಾಸ್ಫೂರ್ತಿ ಅಗತ್ಯವಾಗಿರುತ್ತದೆ ಎಂದು ಕುವೆಂಪು ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.

ದೇಶವು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸುಸಂದರ್ಭದಲ್ಲಿರುವುದನ್ನು ಆಚರಿಸುವ ಸಲುವಾಗಿ ಕುವೆಂಪು ವಿವಿಯು ತನ್ನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಇದೇ 29ರಿಂದ 3ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಿದ್ದು, ಓಟದ ಸ್ಪರ್ಧೆಗೆ ಚಾಲನೆ ನೀಡುವ ಮೂಲಕ ಅವರು ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.

ಭಾರತ ದೇಶವು ತಾಳ್ಮೆ, ಪರಿಶ್ರಮ, ಸತತ ಪ್ರಯತ್ನಗಳಂತಹ ಸ್ಫೂರ್ತಿಗಳನ್ನು ಅಳವಡಿಸಿಕೊಂಡು ಸುಧೀರ್ಘ ಹೋರಾಟ ನಡೆಸಿ ಸ್ವಾತಂತ್ರ ಪಡೆಯಿತು. ಅಥ್ಲೆಟಿಕ್ಸ್ ಸೇರಿದಂತೆ ಎಲ್ಲ ಕ್ರೀಡೆಗಳೂ ಸಹ ಇಂತಹುದೇ ಗುಣಗಳನ್ನು, ಪ್ರಯತ್ನಶೀಲತೆಯನ್ನು ಬೇಡುತ್ತವೆ. ಕ್ರೀಡಾಸ್ಫೂರ್ತಿಯಂತಹ ನೈತಿಕ ಗುಣಗಳನ್ನು ಬೆಳೆಸಿಕೊಂಡಲ್ಲಿ ವೈಯಕ್ತಿಕ, ಸಾಮಾಜಿಕ ಜೀವನದಲ್ಲಿ ಯಶಸ್ಸು ನಿಶ್ಚಿತ ಎಂದು ತಿಳಿಸಿದರು.

ದೇಶವು ಸ್ವಾತಂತ್ರ ಪಡೆದುಕೊಂಡ ಸಂಭ್ರಮಕ್ಕೆ ಅಮೃತ ಮಹೋತ್ಸವ ಸುಸಂದರ್ಭ ಒದಗಿಬಂದಿದ್ದು, ಪ್ರತಿಯೊಬ್ಬ ಭಾರತೀಯನೂ ಇದನ್ನು ಆಚರಿಸಬೇಕು. ಈಗಾಗಲೇ ಸರ್ಕಾರವು ತಿಳಿಸಿರುವಂತೆ ನಾವೆಲ್ಲರೂ ಹಾಗೂ ವಿವಿಯ ಪ್ರತಿ ವಿದ್ಯಾರ್ಥಿಯು ತಮ್ಮತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ದೇಶಪ್ರೇಮ ಮೆರೆಯಬೇಕು ಹಾಗೂ ಸ್ವಾತಂತ್ರೋತ್ಸವವನ್ನು ಸಂಭ್ರಮಿಸಬೇಕು ಎಂದು ಕರೆಕೊಟ್ಟರು.

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸಲುವಾಗಿ ಜುಲೈ 29, 30 ಮತ್ತು ಆಗಸ್ಟ್ 01 ರಂದು ಸ್ಪರ್ಧಾಕೂಟವನ್ನು ಆಯೋಜಿಸಲಾಗಿದೆ. ಪೇಂಟಿಗ್, ಸ್ವಾತಂತ್ರ ಗೀತೆ ಗಾಯನ, ಸ್ವಾತಂತ್ರಕ್ಕಾಗಿ ಓಟ ಸ್ಪರ್ಧೆ, ಚರ್ಚಾಸ್ಪರ್ಧೆ, ನಾಟಕ, ಪ್ರಬಂಧ ಲೇಖನ ಹಾಗೂ ಪೋಸ್ಟರ್ ತಯಾರಿಕೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ವಿವಿಯ ಎಲ್ಲ ವಿಭಾಗಗಳ ಸ್ನಾತಕೋತ್ತರ ವಿದ್ಯಾರ್ಥಿಗಳು ಸ್ಪರ್ಧಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಉಧ್ಘಾಟನಾ ಕಾರ್ಯಕ್ರಮದಲ್ಲಿ ವಿವಿಯ ವಿವಿಧ ವಿಭಾಗಗಳ ಅಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

error: Content is protected !!