ನ. 21ರಿಂದ ಕುವೆಂಪು ವಿವಿಯಲ್ಲಿ ವಾಣಿಜ್ಯಶಾಸ್ತ್ರ ಪಠ್ಯಕ್ರಮ ಕುರಿತು ಅಧ್ಯಾಪಕರಿಗೆ ತರಬೇತಿ ಕಾರ್ಯಾಗಾರ
ಶಂಕರಘಟ್ಟ, ನ. 19: ಕುವೆಂಪು ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಹಾಗೂ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ, ಹಣಕಾಸು ಶಿಕ್ಷಣ ಮತ್ತು ಹೂಡಿಕೆ ಜಾಗೃತಿ ಕುರಿತ ಪಠ್ಯಕ್ರಮ ವಿಷಯದ ಬಗ್ಗೆ ಬರುವ ನ. 21 ಮತ್ತು 22ರಂದು ವಿವಿಯ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಪದವಿ ಕಾಲೇಜುಗಳ ವಾಣಿಜ್ಯಶಾಸ್ತ್ರ ಬೋಧಕರಿಗೆ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ನೂತನ ಶಿಕ್ಷಣ ನೀತಿ-2020 ಅಡಿಯಲ್ಲಿ ಜಾರಿಯಲ್ಲಿರುವ ಎಲ್ಲಾ ಸ್ನಾತಕ ಪದವಿಗಳ ಮೂರು ಮತ್ತು ನಾಲ್ಕನೇ ಸೆಮೆಸ್ಟರ್‌ನ ವಿದ್ಯಾರ್ಥಿಗಳಿಗೆ ಬೋಧಿಸುವ ವಿಷಯಗಳ ಪಠ್ಯಕ್ರಮದ ಕುರಿತು ಎರಡು ದಿನಗಳ ಕಾರ್ಯಾಗಾರದಲ್ಲಿ ಅಧ್ಯಾಪಕರಿಗೆ ತರಬೇತಿ ನೀಡಲಾಗುವುದು. ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕುಲಸಚಿವೆ ಜಿ. ಅನುರಾಧ, ಉನ್ನತ ಶಿಕ್ಷಣ ಪರಿಷತ್ತಿನ ವಿಶೇಷ ಅಧಿಕಾರಿ ಪ್ರೊ. ಎಂ. ಜಯಪ್ಪ, ಎನ್‌ಎಸ್‌ಇ ಸಂಸ್ಥೆಯ ಉಪನಿರ್ವಾಹಕ ರಾಘವೇಂದ್ರ. ಎಸ್, ವಿವಿಯ ಎನ್‌ಇಪಿ ನೋಡಲ್ ಅಧಿಕಾರಿ ಪ್ರೊ. ಸೈಯದ್ ಅಶ್ವಕ್ ಅಹಮದ್, ವಾಣಿಜ್ಯಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ. ಎಸ್. ವೆಂಕಟೇಶ್, ವಿವಿ ವ್ಯಾಪ್ತಿಯ ಪದವಿ ಕಾಲೇಜುಗಳ ವಾಣಿಜ್ಯಶಾಸ್ತ್ರ ಅಧ್ಯಾಪಕರು ಕಾರ್ಯಾಗಾರದಲ್ಲಿ ಭಾಗವಹಿಸಿಲಿದ್ದಾರೆ.