ಎನ್.ಇ.ಪಿ. ಅನುಷ್ಠಾನದಲ್ಲಿ ಅಪಾರ ವೈರುಧ್ಯಗಳಿವೆ: ಪ್ರೊ. ಪೂರ್ಣಾನಂದ

ಶಂಕರಘಟ್ಟ, ಮಾ. 30: ರಾಷ್ಟ್ರೀಯ ಶಿಕ್ಷಣ ನೀತಿ-2020 (ಎನ್.ಇ.ಪಿ.) ಬಹಳಷ್ಟು ಮಹತ್ವದ ಶೈಕ್ಷಣಿಕ ವಿಚಾರಗಳ ಕುರಿತು ಮೌನವಹಿಸುತ್ತದೆ. ಸಮರ್ಪಕತೆಯ ಕೊರತೆಯಿಂದ ಕೂಡಿರುವ ಅದನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸುವುದು ಉನ್ನತ ಶಿಕ್ಷಣಕ್ಕೆ ಹೊಡೆತ ನೀಡಲಿದೆ ಎಂದು ಕುವೆಂಪು ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ. ಡಿ. ಎಸ್. ಪೂರ್ಣಾನಂದ ಆತಂಕ ವ್ಯಕ್ತಪಡಿಸಿದರು.

ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಗುರುವಾರ ವಿಭಾಗದಲ್ಲಿ ‘ಮಾಧ್ಯಮ ಶಿಕ್ಷಣ ಪಠ್ಯಕ್ರಮ ಪುನರಚನೆ’ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನವು ಹಲವು ವಿಚಾರಗಳಲ್ಲಿ ವೈರುಧ್ಯಗಳನ್ನು ಅಪ್ಪಿಕೊಳ್ಳುತ್ತಿದೆ. ಶಿಕ್ಷಕರು ಮತ್ತು ಸಂಸ್ಥೆಗಳಿಗೆ ಪಠ್ಯಕ್ರಮ ರಚನೆಯ ಸ್ವಾಯತ್ತತೆ ನೀಡಲಾಗುವುದು ಎಂದು ನೀತಿ ಹೇಳುತ್ತದೆ ಆದರೆ ಇಡೀ ರಾಜ್ಯದ ಎಲ್ಲ ವಿವಿಗಳಿಗೆ ಒಂದೇ ಸಮಿತಿಯಿಂದ ಪಠ್ಯಕ್ರಮ ರಚನೆಗೆ ಇಲಾಖೆ ಆದೇಶ ನೀಡುತ್ತದೆ. ಸಾಮಾಜಿಕ-ಆರ್ಥಿಕ ದುರ್ಬಲವರ್ಗಗಳನ್ನು ಒಳಗೊಳ್ಳುವ ಕುರಿತು ಮಾತನಾಡುವ ಶಿಕ್ಷಣ ನೀತಿಯು, ಸರ್ಕಾರಗಳಿಂದ ಕಾಲೇಜು-ವಿವಿಗಳು ಅನುದಾನ ನಿರೀಕ್ಷಿಸದೇ ಆರ್ಥಿಕ ಸ್ವಾವಲಂಬನೆ ಸಾಧಿಸಲು ಹೇಳುತ್ತದೆ ಎಂದರು.

ಕಾರ್ಪೋರೇಟ್ ಜಗತ್ತಿನ ಅವಶ್ಯಕತೆಗಳಿಗೆ ಅನುಗುಣವಾಗಿ ಉನ್ನತ ಶಿಕ್ಷಣದಲ್ಲಿ ಕೇವಲ ಕೌಶಲ್ಯಪೂರ್ಣ ಯುವಜನಾಂಗ ನಿರ್ಮಿಸಿದಲ್ಲಿ, ಮಾಧ್ಯಮದಲ್ಲಿನ ಉನ್ನತ ಶಿಕ್ಷಣದ ಉದ್ದೇಶವು ಮುಕ್ತಚಿಂತನೆ, ವಿಚಾರಶೀಲತೆ, ವಿಶ್ವಮಾನವತ್ವವುಳ್ಳ ನಾಗರೀಕರು ಮತ್ತು ಪತ್ರಕರ್ತರನ್ನು ಸೃಷ್ಟಿಸುವುದಾಗಿರುತ್ತದೆ. ಆದರೆ ಕಾರ್ಪೋರೇಟ್ ಜಗತ್ತು ಕೇವಲ ತಾಂತ್ರಿಕ ಕೌಶಲಗಳುಳ್ಳ ಕೆಲಸಗಾರರನ್ನು ಬೇಡುತ್ತಿದೆ. ಎನ್.ಇ.ಪಿ. ಕೂಡಾ ಕೌಶಲಗಳ ಪೂರೈಕೆಗೆ ಮಹತ್ವ ನೀಡಿದೆ. ವಿಶೇಷವಾಗಿ ಉನ್ನತ ಶಿಕ್ಷಣದ ಪದವಿಗಳನ್ನು ಉದ್ಯೋಗ ಪಡೆಯಲಿರುವ ಸಾಧನ ಎಂಬ ಆಲೋಚನಾಕ್ರಮದಿಂದ ಬೇರ್ಪಡಿಸುವ ತುರ್ತು ಇದೆ ಎಂದರು.

ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯ ವಿಶೇಷ ವರದಿಗಾರ ರಾಮಚಂದ್ರ ಗುಣಾರಿ ಮಾತನಾಡಿ, ಪತ್ರಿಕೋದ್ಯಮವು ವೃತ್ತಿಯಾಧರಿತ ಕೋರ್ಸ್ ಆಗಿದ್ದು, ಉತ್ತಮ ಮೌಲ್ಯವುಳ್ಳ ಶಿಕ್ಷಣದ ಜೊತೆಗೆ ಹೆಚ್ಚೆಚ್ಚು ಮಾಧ್ಯಮ ಸಲಕರಣೆಗಳ ಬಳಕೆಯ ತರಬೇತಿ ನೀಡಬೇಕು. ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸಬಲ್ಲ ಕಾಶಲ್ಯಗಳನ್ನು ಕಲಿಸಬೇಕು. ಇದು ಸಾರ್ವಜನಿಕರ ಹಿತಕಾಯುವ ಪತ್ರಿಕೋದ್ಯಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯಕವಾಗುತ್ತದೆ ಎಂದು ಸಲಹೆಯಿತ್ತರು.

ಕನ್ನಡ ಮಿಡಿಯಂ ನ್ಯೂಸ್ ಚಾನೆಲ್‌ನ ಸಂಪಾದಕ ಹೊನ್ನಾಳಿ ಚಂದ್ರಶೇಖರ್ ಮಾತನಾಡಿ, ಮಾಧ್ಯಮವು ಪ್ರತಿನಿತ್ಯವೂ ವೇಗವಾಗಿ ಬದಲಾಗುತ್ತಿರುವ ಕ್ಷೇತ್ರವಾಗಿದೆ. ಪತ್ರಕರ್ತರು ಜಾತಿ, ಧರ್ಮ, ಪ್ರಾಂತ್ಯ, ರಾಷ್ಟ್ರೀಯತೆ, ವೈಭವೀಕೃತ ಇತಿಹಾಸಗಳಿಂದ ಹೊರತಾಗಿ ವೈಚಾರಿಕತೆ, ಬಂಧುತ್ವ, ಮಾನವತ್ವಗಳನ್ನು ಒಳಗೊಂಡವರಾಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮ ಮತ್ತು ಎಲ್ಲ ವಿಷಯಗಳ ಶಿಕ್ಷಣ ಪಠ್ಯಕ್ರಮದ ರಚನೆಯಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಭಾಗದ ಅಧ್ಯಕ್ಷ ಡಾ. ಸತ್ಯಪ್ರಕಾಶ್ ಎಂ. ಆರ್. ಪಠ್ಯಕ್ರಮ ಸಮಿತಿಯ ಅಧ್ಯಕ್ಷ ಡಾ. ಸತೀಶ್‌ಕುಮಾರ್, ಡಾ. ವರ್ಗೀಸ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಮೈಸೂರು ವಿವಿಯ ಡಾ. ಸಿ. ಕೆ. ಪುಟ್ಟಸ್ವಾಮಿ, ಕರ್ನಾಟಕ ವಿವಿಯ ಡಾ. ಸಂಜಯ್ ಮಾಲಗತ್ತಿ, ಬೆಂಗಳೂರು ವಿವಿಯ ಡಾ. ವಾಹಿನಿ, ಡಾ. ವಿನಯ್ ಎಂ. ಹಾಗೂ ವಿವಿಧ ವಿವಿಗಳ ಪತ್ರಿಕೋದ್ಯಮ ವಿಭಾಗದ ಅಧ್ಯಾಪಕರುಗಳು, ಸಂಶೋಧನಾರ್ಥಿಗಳು ಹಾಜರಿದ್ದರು.

ಕಾರ್ಯಾಗಾರದಲ್ಲಿ ಪಠ್ಯಕ್ರಮದಲ್ಲಿ ಪ್ರಯೋಗಾಲಯ ತರಬೇತಿಯ ಅವಶ್ಯಕತೆ, ಇತ್ತೀಚಿನ ಮಾಧ್ಯಮ ಪ್ರವೃತ್ತಿಗಳ ಒಳಗೊಳ್ಳುವಿಕೆ, ಎನ್.ಇ.ಪಿ. ಅಳವಡಿಯ ಸಾಧಕ-ಬಾಧಕಗಳು, ಮಾಧ್ಯಮ ವಿಭಾಗ ಮತ್ತು ವೃತ್ತಿಕ್ಷೇತ್ರದ ಸಂಬಂಧಗಳ ವಿಚಾರಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.

error: Content is protected !!