ಜೈವಿಕ ನಿಯಂತ್ರಣ ಕಡಿಮೆ ವೆಚ್ಚದ ತಂತ್ರಜ್ಞಾನವಾಗಿದ್ದು ಪರಿಣಾಮಕಾರಿ ವಿಧಾನವಾಗಿದೆ. ಇದರಿಂದ ಪರಿಸರ ಮಾಲಿನ್ಯತೆ ಉಂಟಾಗುವುದಿಲ್ಲ. ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದಿಲ್ಲ. ಅಣುಜೀವಿಗಳು ಕೀಟ ಹಾಗೂ ರೋಗಾಣುಗಳ ಹತೋಟಿ ಮಾಡುವುದರಿಂದ ಇತರೆ ಉಪಕಾರಿ ಕೀಟಗಳಿಗೆ ತೊಂದರೆಯಿರುವುದಿಲ್ಲ. ಜೈವಿಕ ಪೀಡೆನಾಶಕ ಅಣುಜೀವಿಗಳಲ್ಲಿ ಬ್ಯಾಕ್ಟೀರಿಯಾ, ಶಿಲೀಂದ್ರ ಮತ್ತು ನಂಜಾಣುಗಳು ಪ್ರಮುಖ ಪಾತ್ರವಹಿಸುತ್ತಿವೆ.
ಕೀಟಗಳ ಜೈವಿಕ ನಿಯಂತ್ರಣದಲ್ಲಿ ಅಣುಜೀವಿಗಳು: ಬ್ಯಾಸಿಲಸ್ ಥುರಿಂಜಿನಿಸಿಸ್ ಮಣ್ಣಿನಲ್ಲಿ ವಾಸವಾಗಿರುವ ಈ ಅಣುಜೀವಿಯು ಒಂದು ಬಗೆಯ ಪ್ರೋಟೀನನ್ನು ಉತ್ಪಾದಿಸಿ ಹಲವಾರು ಬಗೆಯ ಕೀಟಗಳನ್ನು ಕೊಲ್ಲುತ್ತದೆ. ಈ ಅಣುಜೀವಿಯು ರೇಷ್ಮೆ ಹುಳುವನ್ನೂ ಕೊಲ್ಲುವುದರಿಂದ ರೇಷ್ಮೆ ಕೃಷಿ ಪ್ರದೇಶದಲ್ಲಿ ಬಳಸಲು ಬರುವುದಿಲ್ಲ. ಇತರೆ ಬೆಳೆಗಳಿಗೆ ಒಂದು ಗ್ರಾಂ ಅಣುಜೀವಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಬಿವೇರಿಯಾ, ಮೈಟರೈಜಿಯಂ, ವರ್ಟಿಸೀಲಿಯಂ, ನುವೋರಿಯಂ ಇತ್ಯಾದಿ ಶೀಲೀಂದ್ರಗಳನ್ನು ಕೀಟಗಳ ಹತೋಟಿಗೆ ಬಳಸುತ್ತಿದ್ದಾರೆ.


ಎನ್.ಪಿ.ವಿ.ನಂಜಾಣುವನ್ನು ಪ್ರಮುಖವಾಗಿ ಕೀಟಗಳ ಹತೋಟಿಯಲ್ಲಿ ಬಳಸುತ್ತಿದ್ದಾರೆ. ಹತ್ತಿಕಾಯಿ ಕೊರಕ ಕೀಟಗಳ ನಿಯಂತ್ರಣಕ್ಕೆ 500 ಎಲ್.ಇ ಪ್ರತಿ ಹೆಕ್ಟೇರಿನಲ್ಲಿ ಸಿಂಪರಣೆ ಮಾಡಬೇಕು. ಕಡಲೆ, ತೊಗರಿ, ಮೆಣಸಿನಕಾಯಿ ಕೊರಕ ಕೀಟಗಳ ನಿಯಂತ್ರಣಕ್ಕೆ 250 ಎಲ್.ಇ ಪ್ರತಿ ಹೆಕ್ಟೇರಿಗೆ ಸಿಂಪರಣೆ ಮಾಡಬೇಕು.
ರೋಗಾಣುಗಳ ಜೈವಿಕ ನಿಯಂತ್ರಣದಲ್ಲಿ ಅಣುಜೀವಿಗಳು: ಸೂಡೋಮೊನಸ್ ಫ್ಲೂರೊಸೆನ್ಸ ಎನ್ನುವ ದುಂಡಾಣುವನ್ನು ಪ್ರತಿ ಲೀಟರ್ ನೀರಿಗೆ 10 ಗ್ರಾಂ ಪ್ರಮಾಣದಲ್ಲಿ ಬೆರೆಸಿ ಸಿಂಪರಣೆ ಮಾಡಬಹುದು ಅಥವಾ ಪ್ರತಿ ಕಿಲೋ ಬೀಜಕ್ಕೆ 4-6 ಗ್ರಾಂ ಲೇಪಿಸಬಹುದು. ನಾಟಿ ಹಾಕುವ ಸಸಿಗಳ ಬೇರನ್ನು ಈ ಅಣುಜೀವಿಯ ದ್ರಾವಣದಲ್ಲಿ 10ಗ್ರಾಂ ಅಣುಜೀವಿಯನ್ನು ಪ್ರತಿ ಲೀಟರ್ ನೀರಿಗೆ ಬಳಸಿ ದ್ರಾವಣ ಮಾಡಬೇಕು, ಇದರಿಂದ ಮಣ್ಣಿನಲ್ಲಿರುವ ರೋಗಗಳ ಹಾಗೂ ಬೀಜದ ಮೇಲಿರುವ ರೋಗಾಣುಗಳ ಹತೋಟಿಯಾಗುತ್ತದೆ.


ಟ್ರೈಕೋಡರ್ಮಾ : ಟ್ರೈಕೋಡರ್ಮಾ ಶಿಲೀಂಧ್ರವನ್ನು ಪ್ರತಿ ಕಿಲೋ ಬೀಜಕ್ಕೆ 4-6 ಗ್ರಾಂ ಲೇಪಿಸಿ ಬಿತ್ತನೆ ಮಾಡಿದರೆ ಬಾಡು ರೋಗ ಹಾಗೂ ಬುಡ ಕೊಳೆ ರೋಗವನ್ನು ಹತೋಟಿ ಮಾಡಬಹುದು. ಒಂದು ಕಿಲೋ ಟ್ರೈಕೋಡರ್ಮಾವನ್ನು 50 ಕಿಲೋ ಸಗಣಿ ಗೊಬ್ಬರದಲ್ಲಿ ಸೇರಿಸಿ ಒಂದು ವಾರದ ನಂತರ ತೋಟಗಾರಿಕಾ ಬೆಳೆಗಳಿಗೆ ಪ್ರತಿ ಗಿಡಕ್ಕೆ 100 ಗ್ರಾಂ ಪ್ರಮಾಣದಲ್ಲಿ ಹಾಕಿದರೆ ಬಾಡು ರೋಗ ಹಾಗೂ ಬುಡಕೊಳೆ ರೋಗವನ್ನು ತಡೆಗಟ್ಟಬಹುದು. ಹೀಗೆ ಅಣುಜೀವಿಗಳು ಬೆಳೆಯ ಕೀಟ ಹಾಗೂ ರೋಗಗಳ ಜೈವಿಕ ನಿಯಂತ್ರಣದಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿವೆ.
*ಜಹೀರ್‍ಅಹಮ್ಮದ್, ಡಾ. ರಾಜು ಜಿ. ತೆಗ್ಗೆಳ್ಳಿ ವಿಜ್ಞಾನಿಗಳು, ಕೃಷಿ ವಿಶ್ವವಿದ್ಯಾಲಯ, ರಾಯಚೂರು

error: Content is protected !!