ವಿದ್ಯಾರ್ಥಿಗಳಲ್ಲಿ ರಂಗ ಅಭಿರುಚಿ ಮೂಡಿಸಲು ರಂಗೋತ್ಸವ ಪೂರಕ: ಸಂದೇಶ ಜವಳಿ
ಶಿವಮೊಗ್ಗ, ಡಿ.12: ವಿದ್ಯಾರ್ಥಿಗಳಲ್ಲಿ ರಂಗ ಚಟುವಟಿಕೆಗಳ ಕುರಿತು ಅಭಿರುಚಿ ಮೂಡಿಸಲು ಪೂರಕವಾಗಿ ಶಿವಮೊಗ್ಗ ರಂಗಾಯಣ ಕಾಲೇಜು ರಂಗೋತ್ಸವ ಆಯೋಜಿಸಿದೆ ಎಂದು ರಂಗಾಯಣ ನಿರ್ದೇಶಕ ಸಂದೇಶ ಜವಳಿ ಅವರು ತಿಳಿಸಿದರು.
ಅವರು ಶನಿವಾರ ಶಿವಮೊಗ್ಗ ರಂಗಾಯಣ ವ್ಯಾಪ್ತಿಯ 5 ಜಿಲ್ಲೆಗಳ ಆಯ್ದ 15 ಕಾಲೇಜುಗಳಲ್ಲಿ ಕಾಲೇಜು ರಂಗೋತ್ಸವದ ನಾಟಕ ರಚನಾ ಶಿಬಿರಗಳಿಗೆ, ಶಿವಮೊಗ್ಗ ರಂಗಾಯಣದಲ್ಲಿ ಆಯೋಜಿಸಲಾಗಿದ್ದ ವರ್ಚುವಲ್ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದರು.
ಶಿವಮೊಗ್ಗ ರಂಗಾಯಣ ವ್ಯಾಪ್ತಿಯ ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳ 15 ಕಾಲೇಜುಗಳಲ್ಲಿ ಕಾಲೇಜು ರಂಗೋತ್ಸವ ಪ್ರಯುಕ್ತ ನಾಟಕ ರಚನಾ ಶಿಬಿರಕ್ಕೆ ಇಂದು ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಡಿಸೆಂಬರ್ ಅಂತ್ಯದವರೆಗೆ ನಾಟಕ ರಚನಾ ಶಿಬಿರ ನಡೆಯಲಿದ್ದು, ಜನವರಿ ಮೊದಲ ವಾರದಲ್ಲಿ ಆಯಾ ಜಿಲ್ಲಾ ಮಟ್ಟದಲ್ಲಿ ನಾಟಕ ಪ್ರದರ್ಶನ ಆಯೋಜಿಸಲಾಗುವುದು. ಜನವರಿ ಮೂರನೇ ವಾರದಲ್ಲಿ ಶಿವಮೊಗ್ಗದಲ್ಲಿ ಆಯ್ದ ನಾಟಕಗಳ ಪ್ರದರ್ಶನದೊಂದಿಗೆ ಕಾಲೇಜು ರಂಗೋತ್ಸವ ನಡೆಯಲಿದೆ ಎಂದು ಹೇಳಿದರು.
ರಂಗ ಸಮಾಜದ ಸದಸ್ಯ ಹಾಲಸ್ವಾಮಿ ಅವರು ಮಾತನಾಡಿ, ರಂಗ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ. ವಿದ್ಯಾರ್ಥಿಗಳಲ್ಲಿ ರಂಗಭೂಮಿಯ ಕುರಿತು ಒಲವು ಮೂಡಿಸುವ ಉದ್ದೇಶದಿಂದ ಕಾಲೇಜು ರಂಗೋತ್ಸವ ಆಯೋಜಿಸಲಾಗುತ್ತಿದೆ. ನೂತನ ಶಿಕ್ಷಣ ನೀತಿಯಲ್ಲಿ ರಂಗ ಚಟುವಟಿಕೆ ಪಠ್ಯೇತರ ಚಟುವಟಿಕೆಯಾಗಿರದೆ, ಪಠ್ಯಕ್ಕೆ ಪೂರಕ ಚಟುವಟಿಕೆಯಾಗಿದೆ. ಈ ಅವಕಾಶವನ್ನು ಬಳಸಿಕೊಂಡು ಉತ್ತಮ ನಾಟಕ ರಚಿಸಿ, ಕಾಲೇಜುಗಳಲ್ಲಿ ರಂಗ ಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಅವರು ಮಾತನಾಡಿ, ಶುಭ ಕೋರಿದ್ರು. ಕಾಲೇಜು ರಂಗೋತ್ಸವದ ಸಂಚಾಲಕ ಪ್ರವೀಣ್ ಹಾಲ್ಮತ್ತೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಜಿಲ್ಲೆಗಳ 15 ಕಾಲೇಜುಗಳ ಅಧ್ಯಾಪಕರು, ವಿದ್ಯಾರ್ಥಿಗಳು ವರ್ಚುವಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿವಮೊಗ್ಗ ರಂಗಾಯಣದ ಕಲಾವಿದರು ರಂಗ ಗೀತೆಗಳನ್ನು ಹಾಡಿದರು.