ಪ್ರಸ್ತುತ ದಿನಗಳಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಹೊಸನಗರ ತಾಲೂಕಿನ ನೆವಟೂರು ಗ್ರಾಮದ ಸಂತೋಷ್ ಕುಮಾರ್ ಅವರು ಕಾಲೇಜಿನ ಗದ್ದೆಯಲ್ಲಿ ಕೃಷಿಕರಾಗಿ, ಕಾಲೇಜಿನಲ್ಲಿ ಉಪನ್ಯಾಸಕರಾಗಿ ಎರಡು ರಂಗಗಳಲ್ಲಿಯೂ ಮಾದರಿಯಾಗಿದ್ದಾರೆ.

    ಪ್ರಾಣಿ, ಪಕ್ಷಿಗಳಿಂದ ಬೆಳೆ ಹಾಳಾಗದಂತೆ ಎಚ್ಚರಿಕೆ ವಹಿಸುವುದರಲ್ಲಿಯೇ ರೈತ ಹೈರಾಣಾಗುತ್ತಾನೆ. ಇನ್ನು ಕೀಟಗಳಿಂದ ಬೆಳೆಗಳನ್ನು ರಕ್ಷಿಸುವುದು ಸವಾಲಿನ ಕೆಲಸ. ಕೀಟಗಳ ನಿಯಂತ್ರಣಕ್ಕೆ ಸಂತೋಷ್ ಅವರು ಸೋಲಾರ್ ದೀಪ ವ್ಯವಸ್ಥೆ ಅಳವಡಿಸಿ ಯಶಸ್ವಿಯಾಗಿದ್ದಾರೆ.

    ಸಂತೋಷ್ ಕುಮಾರ್ ಅವರು, ತೋಟಗಾರಿಕೆ ಬೆಳೆಯಾದ ಅಡಿಕೆ ಜೊತೆ ಶುಂಠಿ. ಜೋಳ. ಹಲವು ಬಗೆಯ ಹೂವು, ಹೀರೆ, ಬೆಂಡೆ, ಟೊಮೆಟೊ, ಬೀನ್ಸ್, ಹಸಿಮೆಣಸು ಮುಂತಾದ ತರಕಾರಿಗಳು, ಕಬ್ಬು, ಸುವರ್ಣಗೆಡ್ಡೆ, ರಬ್ಬರ್‍ಬೆಳೆ, ಕಾಳುಮೆಣಸು ಕೃಷಿ ಮಾಡುತ್ತಿದ್ದು, ಇವರ ಕೃಷಿ ಕಣ್ಮನ ತಣಿಸುತ್ತದೆ. ಇದರ ಜೊತೆ ಅವಲಕ್ಕಿ ಮತ್ತು ಕುಚಲಕ್ಕಿ ಭತ್ತವನ್ನು ಕೂಡ ಸುಮಾರು 2.5 ಹೇಕ್ಟೇರೆ ಪ್ರದೇಶದಲ್ಲಿ ಬೆಳೆಸುತ್ತಿದ್ದಾರೆ.

   1.5 ಎಕರೆ ಪ್ರದೇಶದಲ್ಲಿ ರಬ್ಬರ್ ಮರಗಳನ್ನು ಬೆಳೆಯಲಾಗಿದ್ದು, ಇವೆಲ್ಲದರ ಜೊತೆಗೆ ಪ್ರತೀ ದಿನ ಬೆಳೆಗ್ಗೆ ಹಾಗೂ ಸಂಜೆ 10 ಲೀಟರ್ ಹಾಲನ್ನು ಡೈರಿಗೆ ಕೊಡಲಾಗುತ್ತಿದೆ. ಇದರಿಂದ ವಾರ್ಷಿಕ ಆದಾಯ 2 ರಿಂದ 4 ಲಕ್ಷಕ್ಕೂ ಅಧಿಕ ಗಳಿಕೆ. ಬೆಳೆಗಳಿಗೆ ಸರಿಯಾದ ಸಮಯಕ್ಕೆ ನೀರು, ಗೊಬ್ಬರ ಔಷದೋಪಚಾರ ಮಾಡುವುದರಿಂದ ಮತ್ತು ಹೆಚ್ಚಾಗಿ ಸಗಣಿ ಮಿತವಾಗಿ ರಾಸಾಯನಿಕ ಗೊಬ್ಬರ ಬಳಕೆಯಿಂದ ಒಳ್ಳೆಯ ಇಳುವರಿ ಪಡೆಯಬಹುದು ಎಂಬುವುದು ಇವರ ಅಭಿಪ್ರಾಯ.

   ಕಾಲೇಜಿಗೆ ತೆರಳುವ ಪೂರ್ವದಲ್ಲಿ ಗದ್ದೆಯಲ್ಲಿ ನಿತ್ಯವೂ ಕೆಲಸ ಮಾಡುವ ಇವರು ಪ್ರತಿ ದಿನ ಮುಂಜಾನೆಯೇ 5.30ಕ್ಕೆ ಎದ್ದು ಹೊಲಕ್ಕೆ ಭೇಟಿನೀಡಿ, ಫಸಲಿನ ಬೆಳೆವಣಿಗೆಯನ್ನು ವೀಕ್ಷಿಸಿ, ಬೆಳೆಗೆ ಬೇಕಾದ ಗೊಬ್ಬರ, ನೀರು ಇತ್ಯಾದಿಗಳನ್ನು ಸಕಾಲಕ್ಕೆ ಒದಗಿಸುತ್ತಾರೆ. ನಂತರ ಕಾಲೇಜಿಗೆ ಹೊರಟು ಬಿಡುತ್ತಾರೆ. ಕಾಲೇಜು ರಜೆ ದಿನಗಳಲ್ಲಿ ಇಡೀ ದಿನ ಕೃಷಿಕನಾಗಿ ದುಡಿಯುವ ಶ್ರಮಜೀವಿ ಇವರಾಗಿದ್ದಾರೆ.

   ಕೃಷಿ ಎಂದರೆ ಹಿಂದೇಟು ಹಾಕುವ ಇಂದಿನ ಸಂದರ್ಭಗಳಲ್ಲಿ ಇವರು ಕಳೆದ 7 ವರ್ಷದಿಂದಲೂ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ನಿರ್ವಹಿಸುತ್ತಿರುವುದರೊಂದಿಗೆ ಇವರು ತಮ್ಮ ಮೂಲ ಕಸುಬಾದ ಕೃಷಿಯನ್ನು ಬಿಟ್ಟಿಲ್ಲ. ಇದರೊಂದಿಗೆ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಜ್ಞಾನಧಾರೆ ಎರೆಯುವ ಜೊತೆಗೆ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಇವರು ಇಂದಿನ ಯುವ ಜನತೆಗೆ ಮಾದರಿಯಾಗಿದ್ದಾರೆ.

————
ಸಂತೋಷ್‍ಕುಮಾರ್ ಶಿಕ್ಷಕ (ಪ್ರಗತಿ ಪರ ರೈತ): ಯುವಜನತೆಯಲ್ಲಿ ಇತ್ತೀಚೆಗೆ ಕೃಷಿ ಕ್ಷೇತ್ರದ ಬಗ್ಗೆ ಒಲವು ಕ್ಷೀಣಿಸುತ್ತಿದ್ದು, ಮುಂದಿನ ದಿನಗಳಲ್ಲಿ ಆಹಾರ ಅಭದ್ರತೆ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಆದರಿಂದ ಯುವ ಜನತೆಯು ಸುಮ್ಮನೆ ಉದ್ಯೋಗವಿಲ್ಲದೇ ಕಾಲಹರಣ ಮಾಡುವುದನ್ನು ಬಿಟ್ಟು ಕೃಷಿಯಲ್ಲಿ ತೊಡಗಿಕೊಂಡಾಗ ತಮ್ಮದೇ ಸ್ಥಾನಮಾನ ದೊರೆಯುವುದು ಎಂಬುವುದು ಅವರ ಅಭಿಪ್ರಾಯ.

ಸುಮ.ಜಿ.ಬತ್ತಿಕೊಪ್ಪ(ಆನಂದಪುರಂ)

error: Content is protected !!