ಶಿವಮೊಗ್ಗ : ನವೆಂಬರ್ 02 : ಜಾನುವಾರು ಕಾಲುಬಾಯಿ ರೋಗ ಮುಕ್ತ ಜಿಲ್ಲೆಯ ನಿರ್ಮಾಣಕ್ಕೆ ಪಶುಪಾಲನಾ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲೆಯ ಎಲ್ಲಾ ಪಶುಪಾಲಕರು ಕೈಜೋಡಿಸುವಂತೆ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಉಚಿತ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಹಾಗೂ ಚರ್ಮಗಂಟು ರೋಗ ನಿಯಂತ್ರಿಸುವಲ್ಲಿ ಪಶುಪಾಲನಾ ಇಲಾಖೆಯು ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ನವೆಂಬರ್ 07ರಿಂದ ಡಿಸೆಂಬರ್ 07ವರೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಜಾನುವಾರು ಕಾಲುಬಾಯಿ ರೋಗ ಲಸಿಕಾ ಅಭಿಯಾನವನ್ನು ಏರ್ಪಡಿಸಲಾಗಿದ್ದು, ಈ ಅವಧಿಯಲ್ಲಿ ಜಿಲ್ಲೆಯ ಸುಮಾರು 6.40ಲಕ್ಷ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಹಾಕಲು ಉದ್ದೇಶಿಸಲಾಗಿದೆ. ಈ ಲಸಿಕಾ ಅಭಿಯಾನದಲ್ಲಿ ಪಶುಪಾಲಕರು ತಮ್ಮ ಮನೆಗೆ ಧಾವಿಸುವ ಪಶುವೈದ್ಯಾಧಿಕಾರಿಗಳಿಗೆ ಸಹಕಾರ ನೀಡಿ, ಕಾಲು ಬಾಯಿ ರೋಗ ನಿಯಂತ್ರಿಸುವಲ್ಲಿ ಶ್ರಮಿಸುವಂತೆ ಅವರು ಮನವಿ ಮಾಡಿದರು.
ರೈತರಿಗೆ ಆರ್ಥಿಕ ಸಂಕಷ್ಟಗಳನ್ನು ತಂದೊಡ್ಡುವ ಕಾಲುಬಾಯಿ ರೋಗವನ್ನು ನಿಯಂತ್ರಿಸಿ, ನಿರ್ಮೂಲನೆಗೊಳಿಸಲು ಪ್ರತಿ 06ತಿಂಗಳಿಗೊಮ್ಮೆ ರೋಗದ ವಿರುದ್ಧ ಲಸಿಕೆ ಹಾಕಿಸುವುದು ಪರ್ಯಾಯವಾಗಿದೆ. ಈ ರೋಗದ ವಿರುದ್ಧ ಎಲ್ಲಾ ದನ, ಎಮ್ಮೆ ಮತ್ತು ಕರುಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುವುದು. ಪ್ರತಿ ಜಾನುವಾರುಗಳಿಗೆ ಪ್ರತ್ಯೇಕ ಸಿರಿಂಜ್ ಮತ್ತು ನೀಡಲ್‍ಗಳನ್ನು ಬಳಸಲು ಸೂಚಿಸಲಾಗಿದೆ ಎಂದರು.
ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗ ಇದಾಗಿದ್ದು, ಲಸಿಕೆ ಹಾಕಲು ಮನೆ ಬಾಗಿಲಿಗೆ ಬರುವ ಲಸಿಕೆದಾರರಿಗೆ ಪಶುಪಾಲಕರು ಸಹಕರಿಸಿ, ತಮ್ಮ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆಯನ್ನು ಹಾಕಿಸಿ, ರೋಗ ಬರದಂತೆ ಜಾನುವಾರುಗಳನ್ನು ಸಂರಕ್ಷಿಸಿ, ಆರ್ಥಿಕ ನಷ್ಟ ತಡೆಯುವಂತೆ ಅವರು ಮನವಿ ಮಾಡಿದ್ದಾರೆ.
ಈ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಜಾನುವಾರುಗಳಿಗೆ ಅಗತ್ಯವಿರುವಷ್ಟು ಲಸಿಕೆಯನ್ನು ಸಂಗ್ರಹಿಸಲಾಗಿದೆ. ಅಲ್ಲದೇ ಸಕಾಲದಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕಲು ಅಗತ್ಯ ವೈದ್ಯಕೀಯ ಸಿಬ್ಬಂಧಿಯನ್ನು ನಿಯೋಜಿಸಲಾಗಿದೆ ಎಂದರು.
ಜಿಲ್ಲೆಯ 304 ಗ್ರಾಮಗಳಲ್ಲಿ ಚರ್ಮಗಂಟು ರೋಗ ಪತ್ತೆಯಾಗಿದೆ. ಈವರೆಗೆ 89,900 ಲಸಿಕೆ ಸರಬರಾಜಾಗಿದ್ದು, ಆ ಪೈಕಿ 23429ಜಾನುವಾರುಗಳಿಗೆ ಚರ್ಮಗಂಟು ರೋಗ ನಿಯಂತ್ರಣ ಲಸಿಕೆ ಹಾಕಲಾಗಿದೆ. ಸೋಂಕಿಗೊಳಗಾದ 2307 ಜಾನುವಾರುಗಳಲ್ಲಿ 645 ಜಾನುವಾರುಗಳು ಸೋಂಕಿನಿಂದ ಗುಣಮುಖವಾಗಿವೆ. ಸುಮಾರು 47 ಜಾನುವಾರುಗಳು ಸಾವನ್ನಪ್ಪಿವೆ. ಸಾವು ಕಂಡಿರುವ ಜಾನುವಾರುಗಳ ಪಾಲಕರಿಗೆ ಸರ್ಕಾರದಿಂದ ಆರ್ಥಿಕ ನೆರವು ಘೋಷಿಸಿದೆ. ಅದಕ್ಕಾಗಿ ಪರಿಹಾರ ಧನ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪರಿಹಾರಧನ ಮಂಜೂರಾದ ಕೂಡಲೆ ಮೃತಪಟ್ಟ ಪ್ರತಿ ಆಕಳಿಗೆ ರೂ.20,000/-, ಎತ್ತುಗಳಿಗೆ ರೂ.30,000/- ಹಾಗೂ ಕರುಗಳಿಗೆ ರೂ.5,000/- ಗಳ ಆರ್ಥಿಕ ನೆರವನ್ನು ನೀಡಲಾಗುವುದು ಎಂದರು.
ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿರುವ ಬಿಡಾಡಿ ಕುದುರೆಗಳಿಂದಾಗಿ ಸಾರ್ವಜನಿಕ ಸಂಚಾರ ಹಾಗೂ ವಾಹನ ಚಾಲನೆಗೆ ಭಾರೀ ಪ್ರಮಾಣದ ಅಡಚಣೆ ಉಂಟಾಗುತ್ತಿದೆ. ಅವುಗಳ ನಿಯಂತ್ರಣಕ್ಕೆ ಇರುವ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವಂತೆ ಪಶುಪಾಲನಾಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಪಶುಪಾಲನಾ ಇಲಾಖೆಯಿಂದ ಜಾನುವಾರು ಕಾಲುಬಾಯಿ ಲಸಿಕಾಂದೋಲನದ ಬಿತ್ತಿಪತ್ರ ಹಾಗೂ ಕರಪತ್ರಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ|| ಶಿವಯೋಗಿ ಬಿ.ಯಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ ಸುರಗೀಹಳ್ಳಿ ಸೇರಿದಂತೆ ಪಶು ವೈದ್ಯ ಇಲಾಖೆಯ ಅಧಿಕಾರಿ, ಸಿಬ್ಬಂಧಿಗಳು ಉಪಸ್ಥಿತರಿದ್ದರು.