ಶಿವಮೊಗ್ಗ ಮಾ.26 ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂಬ ಉದ್ದೇಶದಿಂದ ಮತದಾನದ ದಿನ ಕೈಗಾರಿಕೆ ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಶಿವಮೊಗ್ಗ ನಗರದ ಪರ್ಫೆಕ್ಟ್ ಅಲೆಯನ್ಸ್ ಕಾಂಪೋನೆಂಟ್ಸ್ ಆವರಣದಲ್ಲಿ ಮಂಗಳವಾರ ಕೈಗಾರಿಕಾ ಘಟಕದ ಕಾರ್ಮಿಕರಿಗೆ ಆಯೋಜಿಸಲಾಗಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ತಮಗೆ ಬೇಕಾದ ಆಡಳಿತ ವ್ಯವಸ್ಥೆಯನ್ನು ಆಯ್ಕೆ ಮಾಡುವ ಅವಕಾಶವನ್ನು ಮತದಾನ ಪ್ರಜೆಗಳಿಗೆ ನೀಡಿದೆ. ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯ ಹಬ್ಬ. ಹಬ್ಬ ಎಂದರೆ ರಜೆ ಹಾಕಿ ಮನೆಯಲ್ಲಿ ಕುಳಿತುಕೊಳ್ಳುವುದಲ್ಲ ಎಂದರು.
ಮತದಾನದ ದಿನ ಎಲ್ಲಾ ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ಸಂಬಳ ಸಹಿತ ರಜೆ ಘೋಷಿಸಲಾಗಿದೆ. ಆದರೆ ಮತದಾನ ಮಾಡದವರಿಗೆ ಸಂಬಳ ಸಹಿತ ರಜೆ ಪಡೆಯುವ ಹಕ್ಕು ಇಲ್ಲ. ಯಾವುದೇ ಅಭ್ಯರ್ಥಿ ಇಷ್ಟವಾಗದಿದ್ದರೆ ನೋಟಾ ಚಲಾಯಿಸಲು ಅವಕಾಶವಿದೆ ಎಂದರು.
ಶಿವಮೊಗ್ಗ ಹಲವು ಕ್ಷೇತ್ರಗಳಲ್ಲಿ ಪ್ರಥಮ ಸ್ಥಾನ ಗಳಿಸಿದೆ. ವಚನ ಚಳುವಳಿಯ ಹರಿಕಾರರು ಹುಟ್ಟಿದ ಜಿಲ್ಲೆ ಇದು. ಎರಡು ಜ್ಞಾನಪೀಠ ಗಳಿಸಿದ ಕೀರ್ತಿ. ಇದೇ ರೀತಿ ಮತದಾನದಲ್ಲಿ ಈ ಸಹ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಲು ಎಲ್ಲರ ಸಹಕಾರ ಅಗತ್ಯವಿದೆ. ಪ್ರತಿಯೊಬ್ಬರೂ ಮತದಾನ ಮಾಡಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
1957ರಲ್ಲಿ ಜಿಲ್ಲೆಯಲ್ಲಿ 3,24,000 ಸಾವಿರ ಮತದಾರರು ಇದ್ದರು. ಅಕ್ಷರಸ್ಥರು ಶೇ.15ರಿಂದ 20ರಷ್ಟು ಇದ್ದರೂ ಶೇ.75ರಷ್ಟು ಮತದಾನ ಆಗಿತ್ತು. ಆದರೆ ಈಗ ಅಕ್ಷರಸ್ಥರ ಸಂಖ್ಯೆ ಹೆಚ್ಚಾಗಿದ್ದರೂ, ಮತದಾನ ಪ್ರಮಾಣ ಕಡಿಮೆಯಾಗುತ್ತಿರುವುದು ವಿಷಾದನೀಯ. ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದ್ದು, ಈ ಬಾರಿ ಮತದಾನ ಪ್ರಮಾಣ ಹೆಚ್ಚಾಗಲು ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎಂದು ಅವರು ಹೇಳಿದರು.
ನೂರಾರು ಕಾರ್ಮಿಕರಿಗೆ ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರು ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು.

error: Content is protected !!