ಶಿವಮೊಗ್ಗ, ಜುಲೈ . 31 : ಕಾನೂನು ಪ್ರಕ್ರಿಯೆ ಇಲ್ಲದೆ ನಡೆಯುವ ದತ್ತು ಪ್ರಕ್ರಿಯೆ ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಕೃತ್ಯಗಳಲ್ಲಿ ಯಾರು ಪಾಲ್ಗೊಳ್ಳಬಾರದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್ ಹೇಳಿದರು.
ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಅನಾಥ, ಪರಿತ್ಯಕ್ತ ಮತ್ತು ಒಪ್ಪಿಸಲ್ಪಟ್ಟ ಮಕ್ಕಳನ್ನು ಕಾನೂನು ಬದ್ದ ದತ್ತು ಪ್ರಕ್ರಿಯೆ ಕುರಿತು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ದತ್ತು ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾರು ಸಹ ಕಾನೂನಿನ ಅರಿವಿಲ್ಲ ಎಂಬ ಕಾರಣಕ್ಕಾಗಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಮಕ್ಕಳ ಸ್ವಾತಂತ್ರ್ಯ ಹಾಗೂ ಹಕ್ಕುಗಳನ್ನು ಗೌರವಿಸಿ ರಕ್ಷಿಸುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಈ ಕಾರಣದಿಂದಾಗಿ ದತ್ತು ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಾನೂನನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಕಾನೂನು ಬದ್ಧವಲ್ಲದ ಮಕ್ಕಳ ದತ್ತು ಪ್ರಕ್ರಿಯೆ ಹೆಚ್ಚಿದ್ದು, ಈ ರೀತಿಯ ಅಕ್ರಮ ಕಾರ್ಯಗಳಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು, ಕೆಲವು ಮಧ್ಯವರ್ತಿಗಳು ಹಾಗೂ ಮಕ್ಕಳ ಪಾಲಕರು ಪಾಲ್ಗೊಳ್ಳುತ್ತಿರುವುದು ವಿಷಾಧಕರ ವಿಷಯವಾಗಿದೆ. ಇಂತಹ ಕಾರ್ಯಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದರು.
ಆಸ್ಪತ್ರೆಯ ಸಿಬ್ಬಂದಿಗಳು ಈ ಕಾನೂನಿನ ಬಗ್ಗೆ ಅರಿತುಕೊಂಡು ಆಸ್ಪತ್ರೆಯಲ್ಲಿ ನಡೆಯುವ ಮಕ್ಕಳ ಅಕ್ರಮ ದತ್ತು ಪ್ರಕ್ರಿಯೆಯನ್ನು ತಡೆಯುವಲ್ಲಿ ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಅಧ್ಯಕ್ಷೆ ರೇಖಾ ಜಿ.ಎಂ ಮಾತನಾಡಿ, ಮಕ್ಕಳ ದತ್ತು ಪ್ರಕ್ರಿಯೆಗೆ ಸಂಬಂಧಿಸಿದ ಕಾನೂನಿನಲ್ಲಿ ಮಕ್ಕಳ ಅಭಿವೃದ್ಧಿ ಹಾಗೂ ಭದ್ರತೆಗೆ ಬೇಕಾದಂತಹ ಸೂಕ್ತ ಕ್ರಮಗಳನ್ನು ಒಳಗೊಂಡಿರುವ ಮುಚ್ಚಳಿಕೆ ಮತ್ತು ನಿಯಮಗಳಿದ್ದು ಯಾವ ಕಾರಣಕ್ಕೂ ಕಾನೂನು ಪ್ರಕ್ರಿಯೆಯಿಂದ ದತ್ತುಗೆ ಒಳಗಾದ ಮಗುವಿಗೆ ಅನ್ಯಾಯ ಆಗದಂತೆ ಭದ್ರತೆ ಒದಗಿಸಲಾತ್ತದೆ ಎಂದರು.
ರಾಜ್ಯದಲ್ಲಿ ಎಲ್ಲೂ ಮಕ್ಕಳು ಸಿಗದಿದ್ದರೆ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಕ್ಕಳು ಸಿಗುತ್ತಾರೆ ಎಂಬ ಮಾತು ಕೇಳಿ ಬಂದಿರುವುದು ಬೇಸರದ ಸಂಗತಿ. ಈ ಕುರಿತು ಎಚ್ಚರಿಕೆ ವಹಿಸಿದ್ದರೂ ಸಹ ಹೆಚ್ಚಿನ ಮಟ್ಟದಲ್ಲಿ ಅಕ್ರಮ ನಡೆಯುತ್ತ ಬಂದಿದೆ. ಇದು ಬದಲಾಗಬೇಕು. ಈ ನಿಟ್ಟಿನಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಪ್ರಜ್ಞಾವಂತರು ಆಲೋಚಿಸಿ ಸಾಗಬೇಕಾದ ಅಗತ್ಯವಿದೆ ಎಂದರು.
ಮಕ್ಕಳ ಅಕ್ರಮ ದತ್ತು ಹಾಗೂ ಇನ್ನಿತರೆ ಮಕ್ಕಳ ಹಕ್ಕುಗಳಿಗೆ ದಕ್ಕೆಯಾಗುವಂತಹ ಘಟನೆಗಳು ನಡೆಯುತ್ತಿದ್ದಲ್ಲಿ, ಮಕ್ಕಳ ಸಹಾಯವಾಣಿ 1098ಗೆ ಮಾಹಿತಿ ನೀಡಬೇಕು ಎಂದು ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ವಿರೂಪಾಕ್ಷಪ್ಪ. ವಿ, ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ರಕ್ಷಣಾಧಿಕಾರಿ ಸುರೇಶ್ ಜಿ.ಜಿ, ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಂಕ್ರಪ್ಪ ಡಿ. ಹಾಗೂ ಶಾಂತಿ ಸಂದೇಶ ಟ್ರಸ್ಟ್ನ ನಿರ್ದೇಶಕಿ ಸಿಸ್ಟರ್ ಡುಲ್ಪಿನಾ ಕ್ರಾಸ್ಟಾ ಉಪಸ್ಥಿತರಿದ್ದರು.