ಬೇಸಿಗೆಯ ಹಣ್ಣು ಎಂದಾಕ್ಷಣ ನೆನಪಾಗುವುದು ಕಲ್ಲಂಗಡಿ. ಕಲ್ಲಂಗಡಿ ಹಣ್ಣು ರಸಭರಿತ ಹಣ್ಣು ಎಂಬುದು ಎಲ್ಲರಿಗೂ ಗೊತ್ತಿದೆ. ಹಣ್ಣುಗಳಲ್ಲಿ ಕಲ್ಲಂಗಡಿ ಹಣ್ಣನ್ನು ಜನರು ಹೆಚ್ಚು ಇಷ್ಟಪಟ್ಟು ಸೇವಿಸುತ್ತಾರೆ. ಬೇಸಿಗೆಯಲ್ಲಿ ಈ ಹಣ್ಣು ದೇಹಕ್ಕೆ ತಂಪು ನೀಡುವ ಜೊತೆಗೆ ನೀರಡಿಕೆಯನ್ನೂ ನೀಗಿಸುತ್ತದೆ. ಕಲ್ಲಂಗಡಿ ಬಾಯಾರಿಕೆಯನ್ನು ಮಾತ್ರ ತೀರಿಸದೆ ರೋಗಗಳ ವಿರುದ್ಧ ಹೋರಾಡುವ ಗುಣವನ್ನು ಹೇರಳವಾಗಿಸಿಕೊಂಡ ಸಮೃದ್ಧ ಹಣ್ಣು.
ಹೆಚ್ಚು ಸಿಹಿಯಾಗಿರುವುದರ ಜತೆಗೆ ಆಂಟಿ ಆಕ್ಸಿಡೆಂಟ್​ಗಳು, ಜೀವಸತ್ವಗಳು, ಖನಿಜಗಳು ಮತ್ತು ಇತರ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ಕ್ಯಾಲೊರಿ ಕಡಿಮೆ ಇರುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಎ ಸೇರಿದಂತೆ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಬೇಸಿಗೆಯಲ್ಲಿ ದೇಹ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಕಲ್ಲಂಗಡಿ ಹಣ್ಣಿನಲ್ಲಿ ಶೇ 92ರಷ್ಟು ನೀರಿನಂಶವಿದ್ದು, ಪ್ರತಿನಿತ್ಯ ಇದರ ಸೇವನೆ ಉತ್ತಮ. ಕಲ್ಲಂಗಡಿ ಹಣ್ಣಿನ ಸೇವನೆ ಅಥವಾ ಇದನ್ನು ಜ್ಯೂಸ್‌ ಮಾಡಿ
ಸೇವಿಸುವುದರಿಂದ ನಿರ್ಜಲೀಕರಣದಿಂದ ದೂರ ಉಳಿಯಬಹುದು. ಇದು ದೇಹದ ಉಷ್ಣಾಂಶವನ್ನು ಸಮಸ್ಥಿತಿಗೆ ತರುತ್ತದೆ.
ಜೀವಕೋಶಗಳಿಗೆ ಪೋಷಕಾಂಶವನ್ನು ಒದಗಿಸುತ್ತದೆ. ಅಂಗಾಂಶಗಳ ಕಾರ್ಯ ಸುಧಾರಣೆಗೆ ನೆರವಾಗುತ್ತದೆ. ಇದು ಕಡಿಮೆ ಕ್ಯಾಲೊರಿ ಅಂಶ ಹೊಂದಿದ್ದು, ದೇಹತೂಕ ಇಳಿಸಲು ಸಹಕಾರಿ.
ಕಲ್ಲಂಗಡಿಯಲ್ಲಿ ಹಲವು ರೀತಿ ಸಸ್ಯ ಸಂಯುಕ್ತಗಳಿವೆ. ಇದರಲ್ಲಿ ಲೈಕೊಪೀನ್‌ ಹಾಗೂ ಕುಕುರ್ಬಿಟಾಸಿನ್‌ ಇ ಅಂಶಗಳಿದ್ದು ಇದು ಆಂಟಿಕ್ಯಾನ್ಸರ್‌ ಪರಿಣಾಮಗಳನ್ನು ಹೊಂದಿದೆ. ಲೈಕೊಪೀನ್‌ ಅಂಶ ಇರುವ ಆಹಾರ ಪದಾರ್ಥಗಳ ಸೇವನೆಯಿಂದ ಪ್ರಾಸ್ಟೇಟ್‌ ಹಾಗೂ ಕೊಲೊರೆಕ್ಟರ್‌ ಕ್ಯಾನ್ಸರ್‌ನ ಅಪಾಯದ ಸಂಭವ ಕಡಿಮೆ ಇರತ್ತದೆ.

ಕಲ್ಲಂಗಡಿಯಲ್ಲಿರುವ ಪೊಟ್ಯಾಷಿಯಮ್​ ಮತ್ತು ಮೆಗ್ನೀಷಿಯಮ್​ ಪ್ರಮಾಣವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವುದರಿಂದ ಹೃದ್ರೋಗ ಸಮಸ್ಯೆಯನ್ನು ತಡೆಗಟ್ಟಲು ಸಹಾಯಕವಾಗಿದೆ. ಇದರಲ್ಲಿನ ಸಂಯಕ್ತಗಳು ಫ್ರಿ ರಾಡಿಕಲ್ಸ್‌ಗಳ ವಿರುದ್ಧ ಹೋರಾಡುತ್ತವೆ. ಕ್ಯಾನ್ಸರ್‌ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಕಲ್ಲಂಗಡಿಯಲ್ಲಿ ಸಿಟ್ರುಲಿನ್‌ ಸಮೃದ್ಧವಾಗಿದೆ. ಇದು ಅಮೈನೊ ಆಮ್ಲವಾಗಿದ್ದು, ವ್ಯಾಯಾಮದ ಕಾರ್ಯಕ್ಷಮತೆಯನ್ನೂ
ಸುಧಾರಿಸುತ್ತದೆ. ವಿಟಮಿನ್‌ ಸಿ ಹಾಗೂ ಉತ್ಕರ್ಷಣ ವಿರೋಧಿ ಗುಣವನ್ನು ಹೊಂದಿದೆ. ಉರಿಯೂತವು ಅನೇಕ ದೀರ್ಘಾವಧಿ ಕಾಯಿಲೆಗಳನ್ನು ಹರಡುತ್ತದೆ. ಇದರಲ್ಲಿರುವ ಲೈಕೊಪೀನ್‌, ವಿಟಮಿನ್‌ ಸಿ ಹಾಗೂ ಆಂಟಿಆಕ್ಸಿಡೆಂಟ್‌ಗಳ ಕಾರಣದಿಂದ ಉರಿಯೂತದ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಆಕ್ಸಿಡೇಟಿವ್‌ ಹಾನಿಯನ್ನೂ
ನಿಯಂತ್ರಿಸುತ್ತದೆ. ಕಲ್ಲಂಗಡಿಹಣ್ಣಿನಲ್ಲಿರುವ ಲೈಕೊಪೀನ್‌ ಅಂಶ ಕಣ್ಣಿನ ಆರೋಗ್ಯಕ್ಕೂ ಸಹಕಾರಿ. ವಯಸ್ಸಾದಂತೆ
ಎದುರಿಸುವ ಮ್ಯಾಕ್ಯುಲರ್ ಡಿಜೆನರೇಶನ್ ಎನ್ನುವ ಕಣ್ಣಿನ ಸಮಸ್ಯೆಗೂ ಇದರ ಸೇವನೆ ಉತ್ತಮ.

ಕಲ್ಲಂಗಡಿ ಹಣ್ಣಿನಲ್ಲಿರುವ ವಿಟಮಿನ್‌ ಎ ಹಾಗೂ ಸಿ ಅಂಶ ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮ. ವಿಟಮಿನ್‌ ಸಿ
ಚರ್ಮದಲ್ಲಿ ಕೊಲಾಜನ್‌ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಲ್ಲಿ ಪೋಷಕಾಂಶ ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಉತ್ತಮ. ವಿಟಮಿನ್‌ ಎ ಅಂಶದ ಚರ್ಮದ ಆರೋಗ್ಯಕ್ಕೆ ಅವಶ್ಯ, ಅಲ್ಲದೆ ಇದು ಚರ್ಮದ ಕೋಶಗಳನ್ನು ಸರಿಪಡಿಸುತ್ತದೆ.
ಇದರಲ್ಲಿ ಸಾಕಷ್ಟು ನೀರಿನಂಶ ಹಾಗೂ ನಾರಿನಂಶವೂ ಇದ್ದು, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನಾರಿನಂಶ
ಮಲಬದ್ಧತೆಯನ್ನು ನಿಯಂತ್ರಿಸುತ್ತದೆ.

ಇದರಲ್ಲಿ ಕಬ್ಬಿಣದಂಶ, ಮ್ಯಾಗ್ನಿಷ್ಯಿಯಂ, ಕ್ಯಾಲ್ಸಿಯಂ, ಸತು, ಪೊಟಾಷ್ಯಿಯಂ, ಐಯೋಡಿನ್ ಇರುವುದರಿಂದ
ಮೂಳೆಗಳನ್ನು ಬಲವಾಗಿಸುತ್ತದೆ. ಇದರಿಂದ ಸಂಧಿ ನೋವು ಉಂಟಾಗುವುದಿಲ್ಲ. ಇತರ ಹಣ್ಣುಗಳಿಗಿಂತ ಕಲ್ಲಂಗಡಿ ಹಣ್ಣಿನಲ್ಲಿ ಲೈಕೋಪೆನೆ ಅಧಿಕವಿದೆ. ಲೈಕೋಪೆನೆ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ.
ಇದರಲ್ಲಿ ವಿಟಮಿನ್ ಬಿ6 ಇರುವುದರಿಂದ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಬೇಗನೆ ಉದ್ವೇಗಕ್ಕೆ ಒಳಗಾಗುವುದನ್ನು ತಡೆಯುತ್ತದೆ.
ಈ ಹಣ್ಣಿನಲ್ಲಿ ಸಿಟ್ರೊಲೈನ್ಇದ್ದು, ಇದು ದೇಹವನ್ನು ಸೇರಿದಾಗ ಅಮೈನೋ ಆಸಿಡ್ ಆಗಿ ಪರಿವರ್ತನೆಯಾಗುತ್ತದೆ.
ಅಮೈನೋ ಆಸಿಡ್ ಕಿಡ್ನಿಯಲ್ಲಿ ಕಲ್ಲು ಉಂಟಾಗದಂತೆ ಕಾಪಾಡುತ್ತದೆ. ಈ ಸುಡುವ ಬೇಸಿಗೆಯಲ್ಲಿ ನಾವು ಕಲ್ಲಂಗಡಿ ಹಣ್ಣು, ಜ್ಯೂಸ್, ಸ್ಕ್ವ್ಯಾಷ್ ಮತ್ತು ಇತರ ಹಣ್ಣಿನ ರಸಗಳನ್ನು ಸೇವಿಸುವ ಮೂಲಕ ನಮ್ಮ ಆರೋಗ್ಯವನ್ನುಕಾಪಾಡಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ:

ಡಾ. ಜ್ಯೋತಿ ಎಂ. ರಾಠೋಡ್, ವಿಜ್ಞಾನಿ (ಗೃಹ ವಿಜ್ಞಾನ), ಕೆ.ವಿ.ಕೆ., ಶಿವಮೊಗ್ಗ , 93539 78995

error: Content is protected !!