ಶಿವಮೊಗ್ಗ ಜಿಲ್ಲೆಯಲ್ಲಿ 180 ಕರೋನಾ ವಾರಿಯರ್ಸ್ ಸ್ವಯಂಸೇವಕರು ನೋಂದಣಿಯಾಗಿದ್ದು, ಇವರು ಜಿಲ್ಲಾಡಳಿತದ ನಿರ್ದೇಶನದ ಪ್ರಕಾರ ಕಾರ್ಯನಿರ್ವಹಿಸುವಂತೆ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಸಿದ್ರಾಮಪ್ಪ ಅವರು ತಿಳಿಸಿದರು.
ಅವರು ಶನಿವಾರ ಶಿವಮೊಗ್ಗ ವಾರ್ತಾ ಭವನದಲ್ಲಿ ಕರೋನಾ ವಾರಿಯರ್ಸ್ ಹಾಗೂ ರೆಡ್‍ಕ್ರಾಸ್ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಜಿಲ್ಲೆಯಲ್ಲಿ ಕೈಗೊಂಡಿರುವ ಸ್ವಯಂಸೇವಾ ಕಾರ್ಯಗಳ ಮಾಹಿತಿಯನ್ನು ಪಡೆದುಕೊಂಡರು.
ಲಾಕ್‍ಡೌನ್ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಜತೆಗೆ, ಜಿಲ್ಲಾಡಳಿತ ಕೈಗೊಂಡಿರುವ ಪರಿಹಾರ ಕಾರ್ಯಗಳಲ್ಲಿ ಸ್ವಯಂ ಸೇವಕರು ಕೈ ಜೋಡಿಸಬೇಕು. ಸಂಕಷ್ಟದಲ್ಲಿರುವವರಿಗೆ ರೇಶನ್, ಆಹಾರ, ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ, ಕ್ವಾರೆಂಟೈನ್‍ನಲ್ಲಿರುವ ಮನೆಗಳಿಗೆ ಅಗತ್ಯ ನೆರವು ಒದಗಿಸುವಿಕೆ, ಅಂತಹ ವ್ಯಕ್ತಿಗಳ ಮೇಲೆ ನಿಗಾ ವಹಿಸುವುದು ಇತ್ಯಾದಿ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ಹೇಳಿದರು.
ವಲಸೆ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಅವರಿಗೆ ವಿವಿಧ ಪರಿಹಾರ ಸಾಮಾಗ್ರಿಗಳನ್ನು ತಲುಪಿಸಲಾಗುತ್ತಿದೆ. ಅಂತಹ ನಿರಾಶ್ರಿತರಿಗಾಗಿ ತೆರೆಯಲಾಗಿರುವ ಪರಿಹಾರ ಕೇಂದ್ರಗಳಲ್ಲಿ ಸಹ ರೆಡ್‍ಕ್ರಾಸ್ ಪ್ರತಿನಿಧಿಗಳ ಸಹಯೋಗದೊಂದಿಗೆ ಕರ್ತವ್ಯವನ್ನು ನಿರ್ವಹಿಸಬೇಕು ಎಂದರು.
ರೆಡ್‍ಕ್ರಾಸ್ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ದಿನೇಶ್, ಡಾ.ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ವಿಶ್ವನಾಥ್, ಕರೋನಾ ವಾರಿಯರ್ಸ್ ಪ್ರತಿನಿಧಿಗಳು ಉಪಸ್ಥಿತರಿದ್ದರು.