ಶಿವಮೊಗ್ಗ, ಏಪ್ರಿಲ್ 11 : ಏಪ್ರಿಲ್ 23ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯುತ್ತಿದ್ದು, ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರಕಾಶಕರು, ಫ್ಲೆಕ್ಸ್ ಹಾಗೂ ಮುದ್ರಣಾಲಯ ಮಾಲೀಕರು ಮುದ್ರಿಸುವ ಯಾವುದೇ ರಾಜಕೀಯ ಪಕ್ಷದ ಕರಪತ್ರ, ಪೋಸ್ಟರ್ ಮತ್ತು ಇತರೆ ದಾಖಲಾತಿಗಳನ್ನು ಚುನಾವಣಾ ಆಯೋಗದ ನಿಯವi ಪಾಲಿಸಿ ಪ್ರಕಟಿಸುವಂತೆ ಸಹಾಯಕ ಚುನಾವಣಾಧಿಕಾರಿ ಹಾಗೂ ಮಹಾನಗರಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ.
ಯಾವುದೇ ರಾಜಕೀಯ ಪಕ್ಷ, ವ್ಯಕ್ತಿಗಳ ಕರಪತ್ರ ಮತ್ತು ಪೋಸ್ಟರ್‍ಗಳನ್ನು ಮುದ್ರಿಸುವಾಗ ಮುದ್ರಣಾಲಯ, ಪ್ರಕಾಶಕರ ಹೆಸರು, ವಿಳಾಸ ಮತ್ತು ಮುದ್ರಿತ ಪ್ರತಿಗಳ ಒಟ್ಟು ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿರುತ್ತದೆ. ಯಾವುದೇ ವ್ಯಕ್ತಿಯು ತನ್ನ ಅಥವಾ ರಾಜಕೀಯ ಪಕ್ಷದ ಕರಪತ್ರ, ಪೋಸ್ಟರ್ ಮುದ್ರಿಸಲು ತಂದಾಗ ಸದರಿ ವ್ಯಕ್ತಿಯ ದಾಖಲೆ ಹಾಗೂ ಸದರಿ ವ್ಯಕ್ತಿಗೆ ವೈಯಕ್ತಿಕವಾಗಿ ಪರಿಚಯವಿರುವ ಇಬ್ಬರು ಸಾಕ್ಷಿಯೊಂದಿಗೆ ಚುನಾವಣಾ ಆಯೋಗದಿಂದ ನಿರ್ದಿಷ್ಟಪಡಿಸಿದ ನಮೂನೆಯಲ್ಲಿ ಸದರಿ ವ್ಯಕ್ತಿಯ ಘೋಷಣಾಪತ್ರವನ್ನು ಪಡೆದು ನಂತರ ಕರಪತ್ರ, ಪೋಸ್ಟರ್ ಮುದ್ರಿಸಲು ಕ್ರಮವಹಿಸುವುದು. ಮುದ್ರಣವಾದ 3ದಿನಗಳೊಳಗೆ ಸದರಿ ಕರಪತ್ರ, ಪೋಸ್ಟರ್‍ಗಳ 4ಪ್ರತಿಗಳನ್ನು ಹಾಗೂ ವ್ಯಕ್ತಿಯು ನೀಡಿದ ಘೋಷಣಾಪತ್ರವನ್ನು ನಿರ್ದಿಷ್ಟಪಡಿಸಿದ ನಮೂನೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳವರಿಗೆ ತಲುಪಿಸಬೇಕು.
ಯಾವುದೇ ಕರಪತ್ರ, ಪೋಸ್ಟರ್‍ಗಳಲ್ಲಿ ಜಾತಿ, ಲಿಂಗಬೇಧ, ಭಾಷೆ ಅಥವಾ ವೈಯಕ್ತಿಕ ಚರಿತ್ರಾಹರಣ ಮಾಡುವುದನ್ನು ಕಡ್ಡಾಯವಾಗಿ ಬಳಸಬಾರದು. ಅನೇಕ ಮುದ್ರಣ ಸಂಸ್ಥೆಗಳ ಚುನಾವಣಾ ಆಯೋಗದ ನಿಯಮವನ್ನು ಉಲ್ಲಂಘಿಸುತ್ತಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ನಿಯಮ ಉಲ್ಲಂಘನೆ ಶಿಕ್ಷಾರ್ಹ ಅಪರಾಧವಾಗಿದ್ದು, ಕಾನೂನಿನ ಪ್ರಕಾರ 6ತಿಂಗಳುಗಳ ಕಾರಾಗೃಹವಾಸ ಹಾಗೂ ರೂ.2,000/-ಗಳ ದಂಡ ವಿಧಿಸಬಹುದಾಗಿದೆ. ಆದ್ದರಿಂದ ಎಲ್ಲಾ ಪ್ರಕಾಶಕರು, ಫ್ಲೆಕ್ಸ್ ಹಾಗೂ ಮುದ್ರಣಾಲಯ ಮಾಲೀಕರು ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ಸಹಾಯಕ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.