ಶಿವಮೊಗ್ಗ, ಡಿಸೆಂಬರ್ 23 : ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಗೆ ಸಂಬಂಧಿಸಿದಂತೆ ಹಲವು ದಶಕಗಳ ಸಮಸ್ಯೆಯ ತ್ವರಿತ ಇತ್ಯರ್ಥಕ್ಕಾಗಿ ಪ್ರತ್ಯೇಕವಾಗಿ ವಿಶೇಷ ಅಧಿಕಾರಿಯೊಬ್ಬರನ್ನು ನೇಮಿಸಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಅವರು ಇಂದು ನಗರದ ಪೆಸಿಟ್ ಕಾಲೇಜಿನ ಪ್ರೇರಣಾ ಸಭಾಣಗಣದಲ್ಲಿ ಏರ್ಪಡಿಸಲಾಗಿದ್ದ ಸುಭಿಕ್ಷಾ ಸಾವಯವ ಕೃಷಿಕರ ಬಹುರಾಜ್ಯ ಸಹಕಾರ ಸಂಘ ನಿಯಮಿತದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಇಲಾಖೆಗಳ ವಿಭಿನ್ನ ನಿಲುವುಗಳಿಂದಾಗಿ ಮಲೆನಾಡು ಭಾಗದ ಶರಾವತಿ, ಸಾವೆಹಕ್ಲು ಮುಂತಾದ ಪ್ರದೇಶಗಳ ಕೃಷಿಕರ ಹಾಗೂ ಹಲವು ದಶಕಗಳ ಬಗರ್‍ಹುಕುಂ ಸಮಸ್ಯೆ ಇತ್ಯರ್ಥಗೊಳ್ಳದೇ ಹಾಗೆಯೇ ಉಳಿದಿದೆ. ಅಲ್ಲಿನ ಜನ ಸಮಸ್ಯೆಯೊಂದಿಗೆ ದಿನಕಳೆಯುವಂತಾಗಿದೆ. ಅವರ ಜಮೀನು, ಮನೆ, ಆಸ್ತಿ-ಪಾಸ್ತಿ, ಗಡಿಗಳನ್ನು ಗುರುತಿಸಿ ಅವರಿಗೆ ಹಕ್ಕುಪತ್ರ ನೀಡುವ ಅಗತ್ಯವಿದೆ ಎಂದು ಮಲೆನಾಡಿನ ಸಂತ್ರಸ್ಥ ಜನರ ಪರವಾಗಿ ಸರ್ಕಾರವನ್ನು ಒತ್ತಾಯಿಸಿದರು.
ಈಗಾಗಲೇ ಈ ವಿಷಯದ ಕುರಿತು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಸಮಸ್ಯೆಯ ಇತ್ಯರ್ಥಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದ ಅವರು, ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪರಸ್ಪರರ ನಡುವೆ ಸಮನ್ವಯತೆ ಸಾಧಿಸಿಕೊಂಡು ಸಮಸ್ಯೆ ಇತ್ಯರ್ಥಪಡಿಸಬೇಕು. ಅದಕ್ಕಾಗಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದವರು ನುಡಿದರು.
ಪ್ರತಿ ವರ್ಷ ಸುಮಾರು 15.00ಲಕ್ಷ ಇಂಜಿನಿಯರಿಂಗ್ ಪದವೀಧರರು ಶಿಕ್ಷಣ ಮುಗಿಸಿ ಹೊರಬರುತ್ತಿದ್ದಾರೆ. ಆ ಪೈಕಿ 1-2ಲಕ್ಷ ಪ್ರಶಿಕ್ಷಣಾರ್ಥಿಗಳಿಗೆ ಮಾತ್ರ ಉದ್ಯೋಗಾವಕಾಶ ಲಭ್ಯವಾಗುತ್ತಿದೆ. ಇಂದಿನ ಯುವಜನಾಂಗ ಸ್ವಯಂ ಉದ್ಯೋಗ ಕಂಡುಕೊಂಡು ಸ್ವಾಭಿಮಾನದಿಂದ, ನೆಮ್ಮದಿಯ ಬದುಕನ್ನು ರೂಪಿಸಿಕೊಳ್ಳಬೇಕು. ಅದಕ್ಕಾಗಿ ಕಾರ್ಯಕ್ರಮ ರೂಪಿಸಬೇಕಾದ ಅಗತ್ಯವಿದೆ ಎಂದವರು ನುಡಿದರು.
ಇಂದಿನ ಯುಗದಲ್ಲಿ ಅನೇಕ ಕ್ಷೇತ್ರಗಳಲ್ಲಿ ಅತ್ಯಾಧುನಿಕ ವೈಜ್ಞಾನಿಕ ಆವಿಷ್ಕಾರಗಳು ಆಗಿದ್ದಾಗ್ಯೂ ರೈತ ಬೆಳೆಯುವುದು ವೈಜ್ಞಾನಿಕ ಆವಿಷ್ಕಾರಕ್ಕಿಂತ ಮಹತ್ವದ ವಿಷಯವಾಗಿದೆ ಎಂದರು.
ಬಹುಶ್ರುತ ಸಾವಯವ ಕೃಷಿ ಸಾಧಕ ಶ್ರೀಮತಿ ಲಕ್ಷ್ಮವ್ವ ಹೊಸಮನಿ ಮತ್ತು ಈರಪ್ಪ ಹೊಸಮನಿ ದಂಪತಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಾರಿಗೆ ಮತ್ತು ಕೃಷಿ ಸಚಿವ ಲಕ್ಷ್ಮಣ್ ಎಸ್.ಸವದಿ, ಸುಭಿಕ್ಷಾ ಸಾವಯವ ಕೃಷಿಕರ ಬಹುರಾಜ್ಯ ಸಹಕಾರ ಸಂಘದ ಅಧ್ಯಕ್ಷ ಆನಂದ ಆ.ಶ್ರೀ., ಸಾವಯವ ಕೃಷಿ ಪರಿವಾರ ರಾಜ್ಯ ಘಟಕದ ಅಧ್ಯಕ್ಷ ನಂಜುಂಡಪ್ಪ ಎನ್., ಶಾಸಕರಾದ ರುದ್ರೇಗೌಡ್ರು, ಆರಗ ಜ್ಞಾನೇಂದ್ರ, ಕೆ.ಬಿ.ಅಶೋಕಕುಮಾರ್, ಪಟ್ಟಾಭಿರಾಮ್, ಸೇರಿದಂತೆ ಸುಭಿಕ್ಷಾ ಬಳಗದ ಸದಸ್ಯರು, ಅನೇಕ ಗಣ್ಯರು, ರಾಜ್ಯದ ಬೇರೆಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಪ್ರಗತಿಪರ ಸಾವಯವ ಕೃಷಿಕರು, ಅನೇಕ ಗಣ್ಯರು ಉಪಸ್ಥಿತರಿದ್ದರು.