ಶಿವಮೊಗ್ಗ, ಜನವರಿ 17 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗವಾದ ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಶಿವಮೊಗ್ಗದ ವತಿಯಿಂದ ಹೆಚ್‍ಐವಿ ಸೋಂಕನ್ನು ಸೊನ್ನೆಗೆ ತರುವ ಸಲುವಾಗಿ ಶಿವಮೊಗ್ಗ ತಾಲ್ಲೂಕಿನಲ್ಲಿ ವಿವಿಧ ಮಾದ್ಯಮಗಳ ಪ್ರಚಾರದೊಂದಿಗೆ ಮನೆ ಮನೆ ಮಾಹಿತಿ ಅಭಿಯಾನ ಕಾರ್ಯಕ್ರಮವನ್ನು ಜ.18 ಮತ್ತು 19 ರಂದು ಹಮ್ಮಿಕೊಳ್ಳಲಾಗಿದೆ.
ಈಗಾಗಲೇ ವಿವಿಧ ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ಹೆಚ್‍ಐವಿ ಏಡ್ಸ್ ನಿಯಂತ್ರಣ, ಕಳಂಕ ಮತ್ತು ತಾರತಮ್ಯ, ಸಾಮಾಜಿಕ ಸೌಲತ್ತುಗಳು ಹಾಗೂ ಹೆಚ್‍ಐವಿ ಏಡ್ಸ್ ಕಾಯ್ದೆ-2017 ಇತ್ಯಾದಿಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದ್ದು, ಇದರಿಂದ ಇತ್ತೀಚಿನ ವರ್ಷಗಳಲ್ಲಿ ಹೆಚ್‍ಐವಿ ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಹೆಚ್‍ಐವಿ ಸೋಂಕನ್ನು ಸೊನ್ನೆಗೆ ತರುವ ಸಲುವಾಗಿ ಶಿವಮೊಗ್ಗ ತಾಲ್ಲೂಕಿನಲ್ಲಿ ವಿವಿಧ ಮಾದ್ಯಮಗಳ ಪ್ರಚಾರದೊಂದಿಗೆ ಮನೆ ಮನೆ ಮಾಹಿತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಉದ್ದೇಶಗಳು : ಶೇ. 95 ರಷ್ಟು ಹೆಚ್‍ಐವಿ ಸೋಂಕಿರುವವರಿಗೆ ತಮ್ಮ ಹೆಚ್‍ಐವಿ ಸ್ಥಿತಿಯನ್ನು ತಿಳಿಸುವುದು.
ಶೇ. 95 ರಷ್ಟು ಹೆಚ್‍ಐವಿ ಸೋಂಕಿತರಿಗೆ ಎಆರ್‍ಟಿ ಚಿಕಿತ್ಸೆಯನ್ನು ನೀಡುವುದು. ಹಾಗೂ ಶೇ. 95 ರಷ್ಟು ಹೆಚ್‍ಐವಿ ವೈರಸ್‍ಗಳ ಸಂಖ್ಯೆಯನ್ನು ಎಆರ್‍ಟಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಕಡಿಮೆಗೊಳಿಸುವುದು.
ಅಭಿಯಾನದ ಅಂಗವಾಗಿ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಡ್ಯಾಪ್ಕ್ಯೂ ಅಧಿಕಾರಿಗಳು, ತಾಲ್ಲೂಕು ಅಧಿಕಾರಿಗಳು, ಜಿಲ್ಲಾ ಮೇಲ್ವಿಚಾರಕರು ಒಳಗೊಂಡಂತೆ ತಾಲ್ಲೂಕಿನ ಆಶಾ ಮೆಂಟರ್, ಐಸಿಟಿಸಿ ಆಪ್ತಸಮಾಲೋಚಕರು, ಪ್ರ.ಶಾ.ತಂತ್ರಜ್ಞರು ಡ್ಯಾಪ್ಕ್ಯೂ ಘಟಕದ ಸಿಬ್ಬಂದಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಒಳಗೊಂಡಂತೆ ಒಂದು ದಿನದ ತರಬೇತಿಯನ್ನು ದಿನಾಂಕ:12.01.2021 ರಂದು ಸಮುದಾಯ ಆರೋಗ್ಯ ಕೇಂದ್ರ ಆಯನೂರು ಹಾಗೂ ದಿ :13.01.2021 ರಿಂದ 14.01.2021 ರವರೆಗೆ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕUಳ ಕಛೇರಿ ಸಭಾಂಗಣ ಶಿವಮೊಗ್ಗದಲ್ಲಿ ಒಟ್ಟು ಮೂರು ದಿನಗಳು ತರಬೇತಿ ಕಾರ್ಯಕ್ರಮವನ್ನು ನಡೆಸಲಾಗಿದೆ.
ದಿನಾಂಕ:18.01.2021 ರ ಬೆಳಿಗ್ಗೆ 9.30ಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ತುಂಗಾನಗರದಲ್ಲಿ ಜಿಲ್ಲಾಧಿಕಾರಿಗಳ/ಮಖ್ಯ ಕಾರ್ಯನಿರ್ವಹಣ ಅಧಿಕಾರಿಗಳ/ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಮನೆ ಮನೆ ಮಾಹಿತಿ ಅಭಿಯಾನ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜ.18 ಮತ್ತು 19 ಎರಡು ದಿನಗಳು ಆಶಾ ಕಾರ್ಯಕರ್ತರು ಅವರು ಕಾರ್ಯ ನಿರ್ವಹಿಸುವ ಹಳ್ಳಿಯ/ಊರಿನ ಮನೆ ಮನೆಗೆ ಭೇಟಿ ನೀಡಿ ಹೆಚ್‍ಐವಿ ಏಡ್ಸ್ ಮತ್ತು ಆರೋಗ್ಯದ ಬಗ್ಗೆ ಕರಪತ್ರದೊಂದಿಗೆ ಮಾಹಿತಿ ನೀಡಲಾಗುವುದು.
ಈ ಅಭಿಯಾನದಲ್ಲಿ ಐಇಸಿ ಸಾಮಗ್ರಿಗಳಾದ ಕರಪತ್ರ, ಭಿತ್ತಿ ಪತ್ರಗಳನ್ನು ಮನೆ ಮನೆಗೆ ನೀಡುವ ಮೂಲಕ ಮಾಹಿತಿಯನ್ನು ನೀಡಲಾಗುತ್ತದೆ. ಅಭಿಯಾನದ ಸಮಯದಲ್ಲಿ ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲವನ್ನು ಬಳಸಿಕೊಂಡು ಕೋವಿಡ್-19 ನಿಯಮಾನುಸಾರ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.

ಅಭಿಯಾನದಲ್ಲಿ ಬಸವೇಶ್ವರ ವೀರಗಾಸೆ ಹವ್ಯಾಸಿ ಸಂಘ ಅರಕೆರೆ, ಭದ್ರಾವತಿ ಇವರಿಂದ ದಿನಕ್ಕೆ 2 ರಂತೆ ಹೆಚ್‍ಐವಿ/ಏಡ್ಸ್ ಕುರಿತು ಒಟ್ಟು 15 ಜಾಗೃತಿ ಕಾರ್ಯಕ್ರಮಗಳನ್ನು ಶಿವಮೊಗ್ಗ ತಾಲ್ಲೂಕಿನಾದ್ಯಂತ ನಡೆಸಲಾಗುವುದು. ಹಾಗೂ ಆಟೋ ಪ್ರಚಾರದ ಮೂಲಕ ಮಾಹಿತಿಯನ್ನು ನೀಡಲಾಗುವುದು ಎಂದು ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಶಿವಮೊಗ್ಗ ಇವರು ತಿಳಿಸಿದ್ದಾರೆ.

error: Content is protected !!