ಶಿವಮೊಗ್ಗ, ಏಪ್ರಿಲ್ 06, :ಹೆಚ್‍ಐವಿ ಪಾಸಿಟಿವ್ ವ್ಯಕ್ತಿಗಳನ್ನು ಗುರುತಿಸಿ, ಅವರಿಗೆ ಆಪ್ತಸಮಾಲೋಚನೆಯೊಂದಿಗೆ ನಿಯಮಿತವಾಗಿ ಎಆರ್‍ಟಿ ಚಿಕಿತ್ಸೆ ಕೊಡಿಸುವುದು ಹಾಗೂ ಹೆಚ್‍ಐವಿ ತಡೆಗಟ್ಟುವ ಕುರಿತಾದ ಕ್ರಮಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಏಡ್ಸ್ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿರುವ ಎನ್‍ಜಿಓ ಗಳಿಗೆ ತಿಳಿಸಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಏಡ್ಸ್ ತಡೆಗಟ್ಟುವ ನಿಯಂತ್ರಣ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಸಮುದಾಯ ಸಂಪನ್ಮೂಲ ಗುಂಪು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಲೈಂಗಿಕ ಕಾರ್ಯಕರ್ತರು ಹೆಚ್ಚಿರುವ ಹಾಟ್‍ಸ್ಪಾಟ್‍ಗಳನ್ನು ಗುರುತಿಸಬೇಕು. ಹೆಚ್‍ಐವಿ/ಏಡ್ಸ್ ರೋಗದ ಕುರಿತು ಅವರಲ್ಲಿ ಅರಿವು ಮೂಡಿಸಬೇಕು. ಹಾಗೂ ಎಲ್ಲ ಎನ್‍ಜಿಓ ಗಳು ತಮ್ಮಲ್ಲಿ ನೋಂದಾಯಿಸಿಕೊಂಡಿರುವ ಟ್ರಾನ್ಸ್‍ಜೆಂಡರ್ಸ್, ಲೈಂಗಿಕ ಕಾರ್ಯಕರ್ತರ ಹೆಚ್‍ಐವಿ ತಪಾಸಣೆಯನ್ನು ಪ್ರತಿ ಆರು ತಿಂಗಳಿಗೊಮ್ಮೆ ನಡೆಸಬೇಕು. ಆಪ್ತಸಮಾಲೋಚನೆ ನಡೆಸಬೇಕು.
ಯಾವುದೇ ಹೆಚ್‍ಐವಿ ಸೋಂಕಿತರು ಎಆರ್‍ಟಿ ಚಿಕಿತ್ಸೆಯಿಂದ ಹೊರಗುಳಿಯಂತೆ ಫಾಲೋ ಅಪ್ ಮಾಡಬೇಕು. ಅವರು ಇಲ್ಲಿಂದ ಬೇರೆಡೆ ವರ್ಗಾವಣೆ, ವಲಸೆ ಹೋದರೆ ಅಥವಾ ಮತ್ತಾವುದೋ ಕಾರಣಕ್ಕೆ ಚಿಕಿತ್ಸೆ ಅರ್ಧದಲ್ಲೇ ನಿಲ್ಲಿಸಿದರೆ ಅವರ ಮನವೊಲಿಸಿ ಚಿಕಿತ್ಸೆ ನೀಡಬೇಕು.
ಜೊತೆಗೆ ಸಮುದಾಯದಲ್ಲಿ ಹೆಚ್‍ಐವಿ ರೋಗ ತಡೆಗಟ್ಟುವ ಕುರಿತಾದ ಕ್ರಮಗಳು ಮತ್ತು ಅರಿವು ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು. ಅವರಿಗೆ ಲಭಿಸಬೇಕಾದ ಸಾಮಾಜಿಕ ಸೌಲಭ್ಯಗಳನ್ನು ತಲುಪಿಸಲು ಶ್ರಮಿಸಬೇಕೆಂದರು ಎನ್‍ಜಿಓ ಗಳಿಗೆ ತಿಳಿಸಿದರು.
ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕದ ಕಾರ್ಯಕ್ರಮಧಾರಿ ಡಾ. ದಿನೇಶ್ ಮಾತನಾಡಿ ಜಿಲ್ಲೆಯಲ್ಲಿ ಪ್ರಸ್ತುತ 3221 ಹೆಚ್‍ಐವಿ ಸೋಂಕಿತರು ಎಆರ್‍ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿ ಗರ್ಭಿಣಿಯರಿಗೆ ಪ್ರಸವಪೂರ್ವ ಆರೈಕೆಯಲ್ಲಿ ಹೆಚ್‍ಐವಿ ಪರೀಕ್ಷೆ ಮಾಡಿಸಲಾಗುತ್ತಿದೆ. 2022 ರ ಏಪ್ರಿಲ್ ನಿಂದ 2023 ರ ಫೆಬ್ರವರಿವರೆಗೆ ಹೆಚ್‍ಐವಿ ಪಾಸಿಟಿವ್ ಇರುವ 18 ಗರ್ಭಿಣಿಯರ ಪ್ರಸವ ಆಗಿದ್ದು, ಶಿಶುಗಳಿಗೆ ನಿಯಮಾನುಸಾರ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ರಕ್ಷಾ ಸಮುದಾಯ ಸಂಘ, ಅಭಯಧಾಮ ಹೆಚ್‍ಐವಿ ಸೋಂಕಿತರ ಬೆಂಬಲ ಸಂಘ, ಜಯಪ್ರಕಾಶ್ ನಾರಾಯಣ್ ಗ್ರಾಮೀಣಾಭಿವೃದ್ದಿ ಸೇವಾ ಸಂಸ್ಥೆ, ಅಭಯದಾಮ ಸಂಸ್ಥೆ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಎನ್‍ಜಿಓಗಳ ಪದಾಧಿಕರಿಗಳು, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಸಿದ್ದನಗೌಡ ಪಾಟಿಲ್, ಎಆರ್‍ಟಿ ವೈದ್ಯಾಧಿಕಾರಿ ಡಾ.ರವಿಕುಮಾರ್, ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ.ಅನಿತಾ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕಿ ಮಂಗಳಾ ಹಾಜರಿದ್ದರು.