ಮಾರ್ಚ್ ಅಂತ್ಯದ ಒಳಗಾಗಿ ಅನುದಾನ ಪೂರ್ಣ ಬಳಕೆ ಮಾಡಿ: ಡಾ.ಸೆಲ್ವಮಣಿ
ಶಿವಮೊಗ್ಗ, ಜ. 17 ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ಮೀಸಲಾಗಿರುವ ಅನುದಾನವನ್ನು ಮಾರ್ಚ್ ಅಂತ್ಯದ ಒಳಗಾಗಿ ಪೂರ್ಣ ಬಳಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್‍ಸಿಪಿ/ಎಸ್‍ಟಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ಮೀಸಲಾಗಿರಿಸಿರುವ ಅನುದಾನವನ್ನು ನಿಗದಿತ ಅವಧಿಯ ಒಳಗಾಗಿ ಬಳಕೆ ಮಾಡದಿದ್ದರೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೇ ನೇರವಾಗಿ ಹೊಣೆಯಾಗುತ್ತಾರೆ. ಅಂತಹ ಅಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಯಾವುದೇ ಕಾರಣಕ್ಕೂ ಬಿಡುಗಡೆಯಾಗಿರುವ ಅನುದಾನ ಲೋಪವಾಗಬಾರದು. ಈಗಾಗಲೇ ಬಿಡುಗಡೆಯಗಿರುವ ಅನುದಾನ ಫೆಬ್ರವರಿ ಅಂತ್ಯದ ಒಳಗಾಗಿ ಬಳಕೆ ಮಾಡಬೇಕು. ಇದುವರೆಗೆ ನಿಗದಿತ ಗುರಿಯನ್ನು ಸಾಧಿಸುವಲ್ಲಿ ವಿಫಲರಾಗಿರುವ ಅಧಿಕಾರಿಗಳಿಗೆ ನೊಟೀಸ್ ಜಾರಿಗೊಳಿಸುವಂತೆ ಅವರು ತಿಳಿಸಿದರು.
ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಆದಷ್ಟು ಬೇಗನೇ ಪೂರ್ಣಗೊಳಿಸಬೇಕು. ಜನಪ್ರತಿನಿಧಿಗಳ ಅಧ್ಯಕ್ಷತೆಯಲ್ಲಿರುವ ಫಲಾನುಭವಿಗಳ ಆಯ್ಕೆ ಸಮಿತಿ ಸಭೆಯನ್ನು ಕರೆದು ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಕಲ್ಯಾಣಕ್ಕಾಗಿ ಜಾರಿಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳ ಬಗ್ಗೆ ಗ್ರಾಮಪಂಚಾಯತ್ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.
ಶಾಸಕ ಅಶೋಕ ನಾಯ್ಕ್ ಅವರು ಮಾತನಾಡಿ, ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಬೇಕಾಗಿದೆ. ಇದಕ್ಕಾಗಿ ಶಾಸಕರ ನಿಧಿಯನ್ನು ಬಳಕೆ ಮಾಡಿಕೊಳ್ಳಬಹುದು. ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಆನ್‍ಲೈನ್ ಹಾಜರಾತಿಯನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ ಸೇರಿದಂತೆ ಎಲ್ಲಾ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.