ಶಿವಮೊಗ್ಗ, ಜನವರಿ 11 : ಶಿವಮೊಗ್ಗ ಜನರ ಆಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸಲು ಬಹುದಿನಗಳಿಂದ ಜಿಲ್ಲೆಯ ಜನರ ಕನಸಾಗಿರುವ ಎಫ್.ಎಂ.ರೇಡಿಯೋ ಕೇಂದ್ರವನ್ನು ಶಿವಮೊಗ್ಗದಲ್ಲಿ ಸ್ಥಾಪಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್‍ರವರನ್ನು ನಿನ್ನೆ ನವದೆಹಲಿಯಲ್ಲಿ ಭೇಟಿ ಮಾಡಿ ಮನವಿ ಮಾಡಿದರು.
ಈ ಹಿಂದೆ ಶಿವಮೊಗ್ಗದಲ್ಲಿ ಎಫ್.ಎಂ.ರೇಡಿಯೋ ಕೇಂದ್ರವನ್ನು ಆರಂಭಿಸುವಂತೆ ಹಾಗೂ ಭದ್ರಾವತಿಯಲ್ಲಿ ಈಗಿರುವ ರೇಡಿಯೋ ಕೇಂದ್ರಕ್ಕೆ ತರಂಗಾತರಗಳನ್ನು ಹೆಚ್ಚಿಸಿ ಮೇಲ್ದರ್ಜೆಗೇರಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ನಿರೀಕ್ಷೆಯಂತೆ ಯೋಜನೆ ಅನುಷ್ಠಾನಗೊಳ್ಳದ ಹಿನ್ನೆಲೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರರವರು ಮತ್ತೊಮ್ಮೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಎಫ್.ಎಂ.ರೇಡಿಯೋ ಕೇಂದ್ರ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದು, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹಾಗೂ ಶಿವಮೊಗ್ಗ ಜಿಲ್ಲೆಯ ಕೇಂದ್ರ ಸ್ಥಳವಾಗಿರುವ ಶಿವಮೊಗ್ಗದಲ್ಲಿ ಒಂದು ಎಫ್.ಎಂ. ಕೇಂದ್ರ ಇರುವುದಿಲ್ಲ. ಭದ್ರಾವತಿ ಆಕಾಶವಾಣಿ ಕೇಂದ್ರವು ಕಳೆದ 50ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಕಡಿಮೆ ಶಕ್ತಿಯ ಟ್ರಾನ್ಸ ಮೀಟರ್‌ ನಿಂದಾಗಿ ಉತ್ತಮವಾದ ಕಾರ್ಯಕ್ರಮಗಳನ್ನು ಆಯೋಜಿಸಿದರೂ ಕೂಡ ಕೆಲವೇ ಕಿ.ಮಿ.ಗಳ ದೂರದಲ್ಲಿರುವ ಜಿಲ್ಲಾ ಕೇಂದ್ರಕ್ಕೂ ತಲುಪದಿರುವ ಬಗ್ಗೆ ಸಂಸದರು ಸಚಿವರ ಗಮನಕ್ಕೆ ತರಲಾಗಿದೆ ಎಂದವರು ತಿಳಿಸಿದ್ಧಾರೆ.
ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಡಿಮೆ ಶಕ್ತಿಯ ದೂರದರ್ಶನ ಕೇಂದ್ರದಲ್ಲಿ ಹೆಚ್ಚಿನ ಸ್ಥಳಾವಕಾಶವಿರುವ ನಿಟ್ಟಿನಲ್ಲಿ ಹೆಚ್ಚಿನ ಶಕ್ತಿಯ ಟ್ರಾನ್ಸ ಉನ್ನತಿಕರಿಸಿ, ಇಲ್ಲಿರುವ ಸ್ಥಳವಾಕಾಶ ಹಾಗೂ ಸ್ಥಳೀಯ ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯುವ ಹಿನ್ನೆಲೆಯಲ್ಲಿ ಈಗಿರುವ ಟ್ರಾನ್ಸ ಮೀಟರ್‌ ನ್ನು 10ಕೆ.ವಿ.ಗೆ ಹೆಚ್ಚಿಸಿ, ಎಫ್.ಎಂ. ಕೇಂದ್ರವನ್ನು ಮಂಜೂರು ಮಾಡಿದ್ದಲ್ಲಿ, ಮಲೆನಾಡಿನ ಹೆಚ್ಚಿನ ಸಂಖ್ಯೆಯ ಶಾಸ್ತ್ರೀಯ ಹಾಗೂ ಜನಪದ ಕಲಾವಿದರಿಗೆ ಅನುಕೂಲವಾಗಲಿದೆ ಎಂದವರು ತಿಳಿಸಿದ್ದಾರೆ.
ಆಕಾಶವಾಣಿ ಕೇಂದ್ರವು ಶಿವಮೊಗ್ಗದಿಂದ 20ಕಿ.ಮೀ. ದೂರದಲ್ಲಿರುವ ಭದ್ರಾವತಿಯಲ್ಲಿದ್ದರೂ, ಅದೂ ನಗರ ವ್ಯಾಪ್ತಿ ಪ್ರದೇಶದಿಂದ 5 ಕಿ.ಮೀ. ದೂರದಲ್ಲಿದೆ. ಶಿವಮೊಗ್ಗ ಜಿಲ್ಲಾಧ್ಯಂತ ವಿವಿಧ ಭಾಗಗಳಿಂದ ಇಲ್ಲಿಗೆ ಜನರು ಬರಲು ತೊಂದರೆಯಾಗುತ್ತಿದೆ. ಅದೂ ಅಲ್ಲದೇ ಈ ಕೇಂದ್ರಕ್ಕೆ ನಿರ್ವಹಣಾಧಿಕಾರಿಗಳು ಇಲ್ಲದ ಪ್ರಯುಕ್ತ ಕಲಾವಿಧರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ದೊರೆಯದಂತಾಗಿದೆ. ಪ್ರಯುಕ್ತ ಕೂಡಲೇ ಒಬ್ಬರು ಜಿಲ್ಲಾ ಮಟ್ಟದ ಅಧಿಕಾರಿಯನ್ನು ನಿಯೋಜಿಸುವಂತೆಯೂ ಕೇಂದ್ರ ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.
ನಗರದಲ್ಲಿ ಯಾವುದೇ ರೀತಿಯ ರೇಡಿಯೋ ಚಾನಲ್‍ಗಳು ಇಲ್ಲದಿರುವ ಪ್ರಯುಕ್ತ, ಎಫ್.ಎಂ. ಕೇಂದ್ರ ಪ್ರಾರಂಭವಾದಲ್ಲಿ ಇದೊಂದು ಅತ್ಯುತ್ತಮ ರೇಡಿಯೋ ಕೇಂದ್ರ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಸರ್ಕಾರಿ ಎಫ್.ಎಂ. ಕೇಂದ್ರ ಸ್ಥಾಪನೆಯಾದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳು ಮತ್ತು ಅವುಗಳ ಉಪಯುಕ್ತತೆ ಬಗ್ಗೆ ಜನರಲ್ಲಿ ಜಾಗೃತಿಯನ್ನುಂಟು ಮಾಡುವಲ್ಲಿ ಸಹಕಾರಿಯಾಗಲಿದೆ ಎಂದವರು ತಿಳಿಸಿದ್ದಾರೆ.
ಜ್ಞಾನಪೀಠ ಪುರಸ್ಕೃತರು ಕುವೆಂಪು ಯು.ಆರ್. ಅನಂತಮೂರ್ತಿ), ಪ್ರೊ.ಜಿ.ಎಸ್. ಶಿವರುದ್ರಪ್ಪ, ರಾಷ್ಟ್ರಕವಿ ಪ್ರಶಸ್ತಿ ಪುರಸ್ಕೃತರು ಹೊರಹೊಮ್ಮಿದಂತಹ ಶಿವಮೊಗ್ಗ ಜಿಲ್ಲೆಯಿಂದ ರಾಜ್ಯಕ್ಕೆ 4 ಜನ ಮುಖ್ಯ ಮಂತ್ರಿಗಳನ್ನು ಕೊಡುಗೆಯಾಗಿ ನೀಡಿದಂತಹ ಜಿಲ್ಲೆ ಇದಾಗಿದ್ದು, ಅತೀ ಜರೂರಾಗಿ ಶಿವಮೊಗ್ಗಕ್ಕೆ ಎ.ಎಂ. ಕೇಂದ್ರ ಸ್ಥಾಪನೆಗೆ ಮನವಿ ಮಾಡಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

error: Content is protected !!