ದೂರಸಂಪರ್ಕ ಕ್ಷೇತ್ರದಲ್ಲಿ ಅತ್ಯಧಿಕ ಸಾಧನೆಯತ್ತ ಭಾರತ

ಶಿವಮೊಗ್ಗ : ಭಾರತ ದೇಶವು ಅಮೇರಿಕಾದಂತೆ ಸಮಾನವಾದ ಶಕ್ತಿಯನ್ನು ಪಡೆದಿದ್ದು, ದೂರಸಂಪರ್ಕ ಕ್ಷೇತ್ರದಲ್ಲಿ ಅತ್ಯಧಿಕ ಸಾಧನೆಯತ್ತ ಮುನ್ನುಗುತ್ತಿದೆ ಎಂದು ಪದ್ಮಭೂಷಣ ಪುರಸ್ಕೃತ ಬಾಹ್ಯಾಕಾಶ ವಿಜ್ಞಾನಿ ಡಾ.ಬಿ.ಎನ್.ಸುರೇಶ್ ಅಭಿಪ್ರಾಯಪಟ್ಟರು.

ಸೋಮವಾರ ನಗರದ ಕುವೆಂಪು ರಂಗಮಂದಿರದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತಮಹೋತ್ಸವ ಉಪನ್ಯಾಸ ಮಾಲಿಕೆ 09 ರಲ್ಲಿ ‘ರಾಷ್ಟ್ರಕ್ಕೆ ಬಾಹ್ಯಾಕಾಶ ತಂತ್ರಜ್ಞಾನದ ಕೊಡುಗೆ : ಅಂದು, ಇಂದು, ಮುಂದು’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಪ್ರಸ್ತುತ ಭಾರತ 58 ಉಪಗ್ರಹಗಳನ್ನು ನಿರ್ಮಾಣ ಮಾಡಿದ್ದು, ರೆಡಿಯೋ ಆವರ್ತನ ಸಂಕೇತಗಳ ಮೂಲಕ ಹಾಸನ ಮತ್ತು ಬೆಂಗಳೂರಿನಲ್ಲಿ ಮುಖ್ಯ ನಿಯಂತ್ರಣಾ ವ್ಯವಸ್ಥೆಯನ್ನು ರೂಪಿಸಲಾಗಿದೆ. ಭವಿಷ್ಯದ ಸಾಧನೆಯಲ್ಲಿ ಎಲಾನ್ ಮಾಸ್ಕ್ ನೇತೃತ್ವದಲ್ಲಿ ಸ್ಟಾರ್ ಲಿಂಕ್ ಯೋಜನೆಯ ಮೂಲಕ ಉತ್ಕೃಷ್ಟ ಗುಣಮಟ್ಟದ ನಲವತ್ತು ಸಾವಿರ ಉಪಗ್ರಹಗಳನ್ನು, 560 ಕಿಲೋಮೀಟರ್ ಕಕ್ಷೆಯಲ್ಲಿ ಸ್ಥಾಪಿಸಲಾಗುವುದು. ಇದರಿಂದ ಅತ್ಯುತ್ತಮ ವೇಗದ ಇಂಟರ್ನೆಟ್ ಸಂಪರ್ಕದೊಂದಿಗೆ ಅಗತ್ಯ ಸೇವೆಗಳನ್ನು ಪೂರೈಸಬಹುದಾಗಿದೆ.

ದೂರಸಂವೇದಿ ಅಪ್ಲಿಕೇಶನ್ ಗಳ ಮೂಲಕ ಭೂಮಿಯ ಫಲವತ್ತತೆ, ನೀರಿನ ಅಂಶ, ಮೀನುಗಾರಿಕೆ, ವನ ಸಂರಕ್ಷಣೆ, ನಗರ ಯೋಜನೆಗಳಂತಹ ಸೂಕ್ಷ್ಮ ವಿಚಾರಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಮಾಹಿತಿ ಪಡೆಯಲು ಹಾಗೂ ನಿರ್ವಹಿಸಲು ಸಾಧ್ಯವಾಗಿದೆ. 2010 ರಲ್ಲಿಯೇ ಸುಮಾರು ಮೂವತ್ತು ಸಾವಿರ ಕೋಟಿ ರೂಪಾಯಿಗಳನ್ನು ಮೀನುಗಾರಿಕೆ ಕ್ಷೇತ್ರದಲ್ಲಿ ಉಳಿತಾಯ ಮಾಡಲಾಗಿದೆ. ಇದೇ ಮಾದರಿಯಲ್ಲಿ ಪ್ರತಿಯೊಂದು ಕ್ಷೇತ್ರಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಲು ಪ್ರಯತ್ನ ನಡೆಯುತ್ತಿದೆ.

ಯಾವುದೇ ರಾಕೆಟ್ ಉಡಾವಣೆಯ ಹಿಂದೆ ಸೂಮಾರು ಎಂಟು ನೂರು ಕೋಟಿಗಳ ವೆಚ್ಚವಿರುತ್ತದೆ. ಅದರೇ ಅಲ್ಲಾಗುವ ಚಿಕ್ಕ ತಪ್ಪು ರಾಕೆಟ್ ಕಕ್ಷೆ ಸೇರದೆ‌ ಸಮುದ್ರ ಸೇರುತ್ತದೆ. ಅಂತಹ ಸೋಲುಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಮಾತುಗಳು ಸಿಗದೆ ಬೇಸರ ಮೂಡಿಸುತ್ತದೆ.

ಸರ್ಕಾರ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದ ಉತ್ತೇಜನಕ್ಕೆ‌ ಅಗತ್ಯ ಸೌಲಭ್ಯಗಳನ್ನು ನೀಡುತ್ತಿದೆ. 1992 ರಲ್ಲಿ ಎ.ಎಸ್.ಎಲ್.ವಿ ಪ್ರಯೋಗ ನಡೆಯುವಾಗ ನಮಗೆ ಅಧಿಕ ಸವಾಲುಗಳಿದ್ದವು. ಈ ಹಿಂದಿನ ಸೋಲುಗಳಿಂದಾಗಿ ಸವಾಲಿನ ಒತ್ತಡ ಹೆಚ್ಚಿತ್ತು. ಅದರೇ ನಮ್ಮ ಪರಿಶ್ರಮಕ್ಕೆ ಫಲ ಸಿಕ್ಕಿತ್ತು. ಯಶಸ್ಸು ಸಿಕ್ಕಿದ ಕ್ಷಣ ಎಲ್ಲರ ಕಣ್ಣುಗಳಲ್ಲಿ ನೀರು, ಸ್ತಬ್ದತೆಯ ಸಂಭ್ರಮ ಮನೆ ಮಾಡಿತ್ತು ಎಂದು ಸ್ಮರಿಸಿದರು.

ಭಾರತ ದೇಶದ ಬಲಿಷ್ಟ ಸ್ನೇಹಿತ ರಷ್ಯಾ

ಭಾರತ ದೇಶದ ತಂತ್ರಜ್ಞಾನ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ರಷ್ಯಾ ನಿರಂತರ ಸಹಾಯ ಮಾಡುತ್ತ ಬಂದಿದೆ. ಈ ಮೂಲಕ ಭಾರತದ ಬಲಿಷ್ಟ ಸ್ಮೇಹಿತನಾಗಿ ರಷ್ಯಾ ಸದಾ ಜೊತೆಯಲ್ಲಿದೆ.

ಹೂವು ನೀಡಿ ಸ್ವಾಗತಿಸಿದ ರೋಬೊ

ಎಸ್.ಆರ್.ಎನ್.ಎಂ ಕಾಲೇಜಿನ ವಿದ್ಯಾರ್ಥಿಗಳೇ ನಿರ್ಮಿಸಿದ ರೋಬೊ ವೇದಿಕೆಯ ಮೇಲಿದ್ದ ಅತಿಥಿಗಳಿಗೆ ಹೂವು ನೀಡಿ ಸ್ವಾಗತಿಸಿತು. ಎನ್ಇಎಸ್ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಅವರು ಅತಿಥಿಗಳನ್ನು ಸ್ವಾಗತಿಸುತ್ತಿದಂತೆ, ಮಿಣ ಮಿಣ ಮಿಂಚುತ್ತ ಬಂದ ರೋಬೊ ಗುಲಾಬಿ ಹೂವು ನೀಡಿ ಸ್ವಾಗತಿಸಿದ್ದು, ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.

ಅಧ್ಯಕ್ಷತೆ ವಹಿಸಿದ್ದ ಎನ್.ಇ.ಎಸ್ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಮಾತನಾಡಿ, ಕಾಲಕಾಲಕ್ಕೆ ಆಡಳಿತದಲ್ಲಿದ್ದ ಸರ್ಕಾರಗಳು ಬಾಹ್ಯಾಕಾಶ ಸಂಶೋಧನೆ ನೀಡಿದ ಬೆಂಬಲದಿಂದಾಗಿ, ಕಡಿಮೆ ಅವಧಿಯಲ್ಲಿಯೇ ಅನೇಕ ಸಾಧನೆಗಳನ್ನು ಮಾಡಲು ನಮ್ಮ ಹೆಮ್ಮೆಯ ವಿಜ್ಞಾನಿಗಳಿಗೆ ಸಾಧ್ಯವಾಯಿತು. ಆಡಳಿತ ನಡೆಸುವವರಿಗೆ ಮತ್ಸರಕ್ಕಿಂತ ಮುತ್ಸದ್ದಿತ್ತನ ಬೇಕಿದ್ದು, ಆಗ ಮಾತ್ರ ಇಂತಹ ಸಾಧನೆಗಳು ನಡೆಯಲಿದೆ ಎಂದು ಹೇಳಿದರು.

ಎನ್.ಇ.ಎಸ್ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಖಜಾಂಚಿಗಳಾದ ಡಿ.ಜಿ.ರಮೇಶ್, ಎಸ್.ಆರ್.ನಾಗಪ್ಪಶೆಟ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಲ್.ಅರವಿಂದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!