ಶಿವಮೊಗ್ಗ: ಕಾಂಗ್ರೆಸ್ ಸಂಚಲನದಿಂದ ಬಿಜೆಪಿಯಲ್ಲಿ ಕಂಪನ ಆರಂಭವಾಗಿದೆ, ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹೊಸ ರಾಜಕೀಯ ಅಲೆಯ ಎಬ್ಬಿಸಿದೆ. ಈ ಅಲೆಯಲ್ಲಿ ಬಿಜೆಪಿ ಕೊಚ್ಚಿ ಹೋಗುವುದು ಖಚಿತವಾಗಿದೆ. ಅದರಲ್ಲೂ ಶಿವಮೊಗ್ಗದಲ್ಲಿ ಬಿಜೆಪಿಯಿಂದ ಯಾರೇ ಸ್ಪರ್ಧೆ ಮಾಡಿದರೂ ಕೂಡ ಕಾಂಗ್ರೆಸ್ ಗೆಲ್ಲುವುದರಲ್ಲಿ ಸಂಶಯವೇ ಇಲ್ಲ. ಬಿಜೆಪಿಯ ದುರಾಡಳಿತದಿಂದ ಜನರ ಬದುಕು ದುಸ್ತರವಾಗಿದೆ. ಬೆಲೆ ಏರಿಕೆಯ ನೋವಿನ ಜೊತೆಗೆ ನಂಜು ಮತ್ತು ಉರಿಯ ಬಿಜೆಪಿ ಮುಖಂಡರ ಮಾತುಗಳು, ಅವರ ಕೋಮುತನ, ಅಧರ್ಮದ ನಡೆ, ಸಂವಿಧಾನಕ್ಕೆ ಮಾಡುವ ಅಗೌರವ ಜನಪದ, ಪೌರಾಣಿಕ, ಐತಿಹಾಸಿಕ ಘಟನೆಗಳ ತಿರುಚುವಿಕೆಯಿಂದ ಜನರು ಬೇಸರ ಮಾತ್ರವಲ್ಲ, ಆಕ್ರೋಶ ಕೂಡ ವ್ಯಕ್ತಪಡಿಸುತ್ತಿದ್ದಾರೆ.
ಇದರ ಜೊತೆಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಪ್ರಣಾಳಿಕೆಯ ಘೋಷಣೆಗಳು ಬಡವರ ಗುಡಿಸಲುಗಳ, ಮಧ್ಯಮವರ್ಗದ ಮನ ಮನೆಗಳಲ್ಲಿ ಪ್ರತಿಧ್ವನಿಸುತ್ತಿವೆ.
ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತ, ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ., ಬಡವರಿಗೆ 10 ಕೆಜಿ ಅಕ್ಕಿ ಉಚಿತ, ನಿರುದ್ಯೋಗಿ ಪದವೀಧರರಿಗೆ 3000 ರೂ., ಡಿಪ್ಲೋಮೋ ಪಾಸಾದವರಿಗೆ 1500 ರೂ. ಘೋಷಣೆಗಳು ಸೇರಿಕೊಂಡು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ.
ಪ್ರಜಾಪ್ರಭುತ್ವದಲ್ಲಿನ ಸರ್ವಾಧಿಕಾರ ಬಹಳ ದಿನ ಉಳಿಯುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಿಗಳಿಗೆ ಜಾಗವೂ ಇಲ್ಲ. ಇದು ಐತಿಹಾಸಿಕ ಸತ್ಯವಾಗಿದೆ. ಬಿಜೆಪಿಯನ್ನು ಸಹಿಸಿಕೊಂಡಿದ್ದು ಇನ್ನು ಸಾಕು ಎಂದು ಅವರು ತಿಳಿಸಿದ್ದಾರೆ.
ಕೆ ಎಸ್ ಈಶ್ವರಪ್ಪ, ರೇಣುಕಾಚಾರ್ಯ, ಸಿ.ಟಿ. ರವಿ, ಮುಂತಾದವರ ಅಧರ್ಮದ ಮಾತುಗಳು ಅವರ ರಾಜಕೀಯ ಜೀವನವನ್ನು ಅಂತ್ಯಗೊಳಿಸಲಿವೆ. ಮೀಸೆ ತಿರುವಿ ಮೆರೆದವರೆಲ್ಲ ಬಹಳ ಕಾಲ ಆಳಲು ಸಾಧ್ಯವಿಲ್ಲ. ಅಧರ್ಮದ ಭಾವನೆಗಳ ಮೇಲೆ ಸವಾರಿ ಮಾಡಿ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಉನ್ಮಾದದಲ್ಲಿರುವ ಈಶ್ವರಪ್ಪನವರಿಗೆ ಈ ಬಾರಿ ಶಿವಮೊಗ್ಗದ ಜನ ತಕ್ಕ ಉತ್ತರ ಕೊಡಲಿದ್ದಾರೆ ಎಂದು ವೈ.ಹೆಚ್. ನಾಗರಾಜ್ ತಿಳಿಸಿದ್ದಾರೆ.