ಶಿವಮೊಗ್ಗ, ಜುಲೈ 25 : ಜಿಲ್ಲೆಯಲ್ಲಿ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆಯಡಿ ವಿವಿಧ ಇಲಾಖೆಗಳಲ್ಲಿ ಮಂಜೂರಾಗಿರುವ ಅನುದಾನವನ್ನು ಉದ್ದೇಶಿತ ಯೋಜನೆಗಳಿಗೆ ಬಳಸಬೇಕು. ಸದರಿ ಅನುದಾನ ದುರ್ಬಳಕೆ ಆದಲ್ಲಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದಲ್ಲದೇ ನಿಯಮಾನುಸಾರ ದಂಡನೆಗೆ ಗುರಿಪಡಿಸುವುದು ಅನಿವಾರ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯ ಹರಮಘಟ್ಟ, ಬಸನವಗಂಗೂರು ಮತ್ತು ಚಿನ್ಮನೆ ಗ್ರಾಮಗಳಲ್ಲಿ ಈಗಾಗಲೇ ಮಂಜೂರಾಗಿರುವ ಸ್ಮಶಾನ ಭೂಮಿಯನ್ನು ತಹಶೀಲ್ದಾರರು ವಶಕ್ಕೆ ಪಡೆದು, ಅಭಿವೃದ್ಧಿಪಡಿಸಿ, ಗ್ರಾಮ ಪಂಚಾಯತಿಗಳಿಗೆ ಶೀಘ್ರವಾಗಿ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಸೂಚಿಸಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ಇರಬಹುದಾದ ಸ್ಮಶಾನಭೂಮಿಯನ್ನು ಅನ್ಯರು ಆಕ್ರಮಿಸಿಕೊಳ್ಳದಂತೆ ಎಲ್ಲೆಯನ್ನು ಗುರುತಿಸಿ, ಸಾರ್ವಜನಿಕ ಸೇವೆಗೆ ಮುಕ್ತವಾಗಿರುವಂತೆ ನೋಡಿಕೊಳ್ಳಲು ಅವರು ಸೂಚಿಸಿದರು.
ಶಿವಮೊಗ್ಗ ತಾಲೂಕಿನ ಹರಮಘಟ್ಟ ಗ್ರಾಮದ ಸುಮಾರು 70ಜನರಿಗೆ ತಲಾ 2ಎಕರೆಯಂತೆ ಮಂಜೂರಾಗಿರುವ ಜಮೀನಿನ ಹದ್ದುಬಸ್ತು ಹಾಗೂ ಅಳತೆ ಮಾಡಿಸುವ ಕಾರ್ಯ ನೆನೆಗುದಿಗೆ ಬಿದ್ದಿದ್ದು, ಆಗಸ್ಟ್ 08ರಂದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪೊಲೀಸ್ ರಕ್ಷಣೆಯೊಂದಿಗೆ ಕಾರ್ಯಾಚರಣೆ ನಡೆಸಿ, ಜಮೀನನ್ನು ಅರ್ಹರಿಗೆ ಒದಗಿಸಿಕೊಡುವಂತೆ ಅವರು ಸೂಚಿಸಿದರು.
ತೀರ್ಥಹಳ್ಳಿ ತಾಲೂಕು ವೀರಾಪುರ ಗ್ರಾಮದ ಹರಡವಳ್ಳಿಯಲ್ಲಿ ಖಾಲಿ ನಿವೇಶನದ ಮಧ್ಯೆ ಬಳಸಿಕೊಂಡಿರುವ ದಾರಿಯನ್ನು ಮುಚ್ಚಿ, ಸದರಿ ಸ್ಥಳದಲ್ಲಿ ತೆಂಗಿನಗಿಡ ಮತ್ತು ನೀಲಗಿರಿ ಗಿಡಗಳನ್ನು ನೆಟ್ಟಿರುವುದರಿಂದ ಸಾರ್ವಜನಿಕರ ರಸ್ತೆ ಸಂಪರ್ಕಕ್ಕೆ ಅಡಚಣೆ ಉಂಟಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳಿವೆ. ತೀರ್ಥಹಳ್ಳಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳಪರಿಶೀಲನೆ ನಡೆಸಿ, ಸಚಿತ್ರ ವರದಿ ನೀಡುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕ ರಸ್ತೆ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವುದು ರುಜುವಾತಾದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅವರು ಸೂಚಿಸಿದರು.
ಕಳೆದೆರೆಡು ವರ್ಷದ ಹಿಂದೆ ಬಂದ ಅಪಾರ ಪ್ರಮಾಣದ ಮಳೆಯಿಂದ ಹಾಗೂ ನಗರದ ಹಳೆ ಮಂಡ್ಲಿಯಲ್ಲಿರುವ ಪರಿಶಿಷ್ಟರ ಕಾಲೋನಿಗೆ ತುಂಗಾಮೇಲ್ದಂಡೆ ಚಾನಲ್ ಒಡೆದು ಜಲಾವೃತಗೊಂಡು ಅಪಾರ ಪ್ರಮಾಣದ ಹಾನಿಯಾಗಿತ್ತು. ಸದರಿ ಪ್ರದೇಶದ ವ್ಯಾಪ್ತಿಯಲ್ಲಿನ ನಿವಾಸಿಗಳಿಗೆ ಪುನರ್ ವಸತಿ ಕಲ್ಪಿಸುವ ಸಂಬಂಧ ತುಂಗಾ ಮೇಲ್ದಂಡೆ ಯೋಜನೆಯ ಅಭಿಯಂತರರ ಉಪಸ್ಥಿತಿಯಲ್ಲಿ ಶೀಘ್ರದಲ್ಲಿ ಸಭೆ ಕರೆದು ಕೈಗೊಂಡ ಕ್ರಮದ ಬಗ್ಗೆ ಚರ್ಚಿಸಲಾಗುವುದು ಎಂದವರು ನುಡಿದರು.
ಕಳೆದೆರೆಡು ದಿನಗಳ ಹಿಂದೆ ವಿದ್ಯಾನಗರದ ಹಾಸ್ಟೆಲ್‍ನಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಸಿಸಿ ಟಿವಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ದುಷ್ಕøತ್ಯಗಳನ್ನು ಎಸಗಿದ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಈ ಘಟನೆಗೆ ಕಾರಣರಾದ ವಿದ್ಯಾರ್ಥಿಗಳನ್ನು ಹಾಸ್ಟೆಲ್‍ನಿಂದ ಉಚ್ಚಾಟಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಭದ್ರಾವತಿ ತಾಲೂಕಿನ ದುಷ್ಕರ್ಮಿಗಳ ಸಂಚಿಗೆ ಬಲಿಯಾದ ಕುಮಾರ್ ಕುಟುಂಬಕ್ಕೆ ಈವರೆಗೂ ಪರಿಹಾರ ಧನ ವಿತರಣೆಗೆ ಕ್ರಮ ವಹಿಸಿಲ್ಲ. ಅಲ್ಲದೇ ನಿರ್ಮಾಣ ಹಂತದಲ್ಲಿದ್ದ ಮ್ಯಾನ್‍ಹೋಲ್‍ನಲ್ಲಿ ಬಿದ್ದು ಮರಣ ಹೊಂದಿದ ಕುಟುಂಬಗಳಿಗೆ ಪರಿಹಾರ ಧನ ವಿತರಣೆ ಆಗುವಂತೆ ಕ್ರಮ ವಹಿಸಲು ಸಮಿತಿ ಸದಸ್ಯರು ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಶಿವರಾಮೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ||ಅಶ್ವಿನಿ, ಉಪವಿಭಾಗಾಧಿಕಾರಿಗಳು, ಜಿಲ್ಲೆಯ ಎಲ್ಲಾ ತಹಶೀಲ್ದಾರರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.