News Next

ಬಡವರಿಗೆ ಉಚಿತ ಪಡಿತರ ನೀಡುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ನವೆಂಬರ್ ಅಂತ್ಯದವರೆಗೆ ವಿಸ್ತರಿಸಿ ಆದೇಶಿಸಿರುವ ಹೆಮ್ಮೆಯ ಪ್ರಧಾನಿ ನರೇಂದ್ರಮೋದಿಯವರಿಗೆ ರಾಜ್ಯದ ಜನತೆಯ ಪರವಾಗಿ ಸಂಸದ ಬಿ.ವೈ.ರಾಘವೇಂದ್ರ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಅವರು, ಈ ಯೋಜನೆಯಡಿ ಜುಲೈ, ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್ ಮತ್ತು ನವೆಂಬರ್ ಮಾಹೆಯವರೆಗೆ ಬಡವರಿಗೆ 5ಕೆ.ಜಿ.ಅಕ್ಕಿ ಅಥವಾ ಗೋದಿ ಮತ್ತು ಒಂದು ಕೆ.ಜಿ. ಬೇಳೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ದೇಶದ 80ಕೋಟಿ ಜನ ಈ ಯೋಜನೆಯ ಲಾಭ ಪಡೆದುಕೊಳ್ಳಲಿದ್ದಾರೆ. ಅದಕ್ಕಾಗಿ ಕೇಂದ್ರ ಸರ್ಕಾರವು ರೂ. 1.5ಲಕ್ಷ ಕೋಟಿ ವೆಚ್ಚ ಮಾಡಲಿದೆ ಎಂದವರು ತಿಳಿಸಿದ್ದಾರೆ.
ನೆರೆಯ ರಾಷ್ಟ್ರ ಚೀನಾದೊಂದಿಗಿನ ಘಡಿ ಸಂಘರ್ಷ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳ ಸಂದರ್ಭದಲ್ಲೂ ಪ್ರಧಾನಿಯವರು ದೇಶದ ಬಡಜನರ ಬಗ್ಗೆ ಇಟ್ಟುಕೊಂಡ ಕಾಳಜಿ ಸಾಮಾನ್ಯ ವಿಷಯವೇನಲ್ಲ. ಯಾರೊಬ್ಬರೂ ಹಸಿವಿನಿಂದ ನರಳಬಾರದು ಎಂಬುದು ಅವರಿಗಿರುವ ಸಂವೇದನೆ ಮತ್ತು ಬಡವರ ಹಿತರಕ್ಷಣೆಗೆ ಇರುವ ಬದ್ದತೆಯನ್ನು ಎತ್ತಿತೋರಿಸುತ್ತದೆ. ಎಂದವರು ತಿಳಿಸಿದ್ದಾರೆ.
ಮುಂಗಾರು ಇದೀಗ ಆರಂಭಗೊಳ್ಳುತ್ತಿದೆ. ಕೃಷಿ ಹೊರತುಪಡಿಸಿ ಇತರೆ ಕ್ಷೇತ್ರಗಳಲ್ಲಿ ಸ್ವಲ್ಪ ಬಿಡುವು ದೊರೆಯಲಿದೆ. ಅಂತೆಯೇ ಸಾಲುಸಾಲು ಹಬ್ಬಗಳೂ ಬರುತ್ತಿವೆ. ಖರ್ಚುಗಳ ಪ್ರಮಾಣವೂ ಹೆಚ್ಚಲಿದೆ. ಈ ಸಂದರ್ಭದಲ್ಲಿ ಅಗತ್ಯಗಳು ಮತ್ತು ಖರ್ಚುಗಳು ಸಹಜವಾಗಿ ಹೆಚ್ಚಾಗಲಿವೆ. ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮೋದೀಜಿಯವರು ಇಂತಹ ಮಹತ್ವದ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಜನರು ಸಮಸ್ಯೆ ಎದುರಿಸುವ ಶಕ್ತಿ ಹೆಚ್ಚಿದಂತಾಗಿದೆ ಎಂದವರು ನುಡಿದರು.
ದೇಶದಾದ್ಯಂತ ಒಂದು ದೇಶ, ಒಂದು ರೇಶನ್ ಕಾರ್ಡ್ ವ್ಯವಸ್ಥೆ ಜಾರಿಗೊಳ್ಳುತ್ತಿದೆ. ಇದರಿಂದ ಬಡವರಿಗೆ ದೊಡ್ಡ ಪ್ರಮಾಣದ ಲಾಭವಾಗಲಿದೆ. ಉದ್ಯೋಗವನ್ನರಸಿ ದೇಶದ ಬೇರೆಬೇರೆ ರಾಜ್ಯಗಳಿಗೆ ವಲಸೆ ಹೋಗುವ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದವರು ತಿಳಿಸಿದ್ದಾರೆ.
ಕೊರೋನ ಸೋಂಕಿನಿಂದಾಗಿ ದೇಶದ ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದರಿಂದ ಈ ಯೋಜನೆ ವಿಸ್ತರಿಸಿರುವುದು ಬಡವರಿಗೆ ವರದಾನವಾಗಿದೆ. ದೇಶದೆಲ್ಲೆಡೆ ಲಾಕ್‍ಡೌನ್ ಘೋಷಣೆಯಾದ ನಂತರ ಜನರ ಬದುಕು ನಿರೀಕ್ಷಿಸಿದಂತೆ ಆಶಾದಾಯಕವಾಗಿಲ್ಲ ಎಂದು ತಿಳಿಸಿರುವ ಅವರು, ಲಾಕ್‍ಡೌನ್ ನಿಯಮಗಳನ್ನು ಎಲ್ಲರೂ ತಪ್ಪದೇ ಪಾಲಿಸಬೇಕು. ನಿಯಮ ಪಾಲಿಸುವಲ್ಲಿ ನಿರ್ಲಕ್ಷ್ಯ ವಹಿಸಿದಲ್ಲಿ ಸಂಭವಿಸುವ ಅನಾಹುತಗಳಿಗೆ ನಾವೇ ಹೊಣೆಗಾರರಾಗಬೇಕಾಗುತ್ತದೆ ಎಂದವರು ಎಚ್ಚರಿಸಿದ್ದಾರೆ.

error: Content is protected !!