ಸರ್ಜಿ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಅಭಿಪ್ರಾಯ
ಶಿವಮೊಗ್ಗ : ಇ- ತ್ಯಾಜ್ಯದ ಸಮರ್ಪಕ ವಿಲೇವಾರಿ ಮಾಡದಿದ್ದರೆ ಭೂಮಿಯ ಜೊತೆಗೆ ನಮ್ಮ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಸರ್ಜಿ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಎಚ್ಚರಿಸಿದರು.
ನಗರದ ಹೊರ ವಲಯದ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಶುಕ್ರವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಇ-ತ್ಯಾಜ್ಯ ನಿರ್ವಹಣೆ ಕುರಿತು ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಪಂಚದಲ್ಲಿ ಉತ್ನನ್ನವಾಗುತ್ತಿರುವ ಇ- ವೇಸ್ಟ್ ನಲ್ಲಿ ಕೇವಲ ಶೇ. 18 ರಷ್ಟು ಮಾತ್ರ ಮರು ಬಳಕೆ ಆಗುತ್ತಿದೆ. ಉಳಿದೆಲ್ಲವೂ ಭೂಮಿಗೆ ಸೇರುತ್ತಿದೆ. ಟಿವಿ, ಮೊಬೈಲ್‌ಫೋನ್, ಚಾರ್ಜರ್,ಲ್ಯಾಪ್‌ಟಾಪ್, ಐರನ್ ಬಾಕ್ಸ್ ಸೇರಿದಂತೆ ಹಾಳಾದ ಎಲೆಕ್ಟ್ರಾನಿಕ್ ವಸ್ತುಗಳ ಮರು ಬಳಕೆ ಆಗಬೇಕು. ರೀ ಸೈಕ್ಲಿಂಗ್ ಮೂಲಕ ಮರು ಉತ್ಪನ್ನಗಳನ್ನು ತಯಾರಿಸಬೇಕು. ದಿನೇ ದಿನೇ – ತ್ಯಾಜ್ಯ ಹೆಚ್ಚುತ್ತಿದೆ. ಇದರ ಅಸಮರ್ಪಕ ನಿರ್ವಹಣೆಯಿಂದ ಭೂಮಿಯ ಫಲವತ್ತೆ ಕ್ಷೀಣಿಸುತ್ತಿದೆ. ರಾಸಾಯನಿಕಗಳು ಹಾಗೂ ಇ-ತ್ಯಾಜ್ಯ ಭೂಮಿ ಸೇರುವುದರಿಂದ ಆಹಾರೋತ್ಪನ್ನಗಳ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹೀಗೆ ನಾವು ಸೇವಿಸುವ ಆಹಾರ, ನೀರು ಹಾಗೂ ಗಾಳಿ ಕೂಡ ಮಲಿನವಾಗುತ್ತಿದೆ. ಇದು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇ-ತ್ಯಾಜ್ಯ ನಿರ್ವಹಣೆ ಕುರಿತು ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಸರ್ಜಿ ಫೌಂಡೇಶನ್ ಹಮ್ಮಿಕೊಂಡು ಬರುತ್ತಿದೆ. ಪೋಷಕರು ಹಾಗೂ ಮಕ್ಕಳು ಈ ಅಭಿಯಾನಕ್ಕೆ ಸಹಕರಿಸುವಂತೆ ಮನವಿ ಮಾಡಿದರು.
ನೆನಪಿ ಶಕ್ತಿ ಹೆಚ್ಚಿಸಲು ಮಕ್ಕಳಿಗೆ ಟಿಪ್ಸ್
ಇದೇ ಸಂದರ್ಭ ಡಾ.ಧನಂಜಯ ಸರ್ಜಿ ಅವರು ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸಿ ಕೊಳ್ಳಲು ಒಂದಷ್ಟು ಟಿಪ್ಸ್ ನೀಡಿದರು.
ಮನುಷ್ಯನಿಗೆ ಮರೆವು ಕಾಯಿಲೆ ಎನ್ನುವುದಕ್ಕಿಂತ ದೇವರು ಕೊಟ್ಟ ವರ. ಜೀವನದಲ್ಲಿ ನಡೆಯುವ ಘಟನೆಗಳು,ಆತಂಕದ ಪ್ರಸಂಗಗಳು ನೆನಪಿನಲ್ಲಿದ್ದು ಬಿಟ್ಟರೆ ನಾವು ಖಂಡಿತಾ ಡಿಪ್ರೆಶನ್‌ಗೆ ಹೋಗಬೇಕಾಗುತ್ತದೆ. ಹಾಗಾಗಿ ಒಳ್ಳೆಯ ವಿಷಯ ಜ್ಞಾಪಕದಲ್ಲಿರಲಿ, ಕೆಟ್ಟ ವಿಷಯವನ್ನಂತೂ ಮರೆಯುವುದೇ ಲೇಸು.ಮನುಷ್ಯನಲ್ಲಿ ಒಟ್ಟು ಮೂರು ತರಹದ ಜ್ಞಾಪಕ ಶಕ್ತಿಗಳಿವೆ. ಮೊದಲನೆಯದು ವಿಶುಯಲ್ ಮೆಮೋರಿ ( ನೋಡಿ ಕಲಿ) ಎರಡನೆಯದು ಆಡಿಟರಿ ಮೆಮೋರಿ (ಕೇಳಿ ಕಲಿ), ಮೂರನೆಯದು ಕೈನೆಸ್ಥೆಟಿಕ್ ಮೆಮೋರಿ (ಬರೆದು ಕಲಿ). ಮೊದಲನೇಯದು ವಿಶುಯಲ್ ಮೆಮೋರಿ. ಈ ನೆನಪಿನ ಶಕ್ತಿ ಉತ್ತಮವಾಗಿದ್ದವರಿಗೆ ಯಾವುದೇ ಸುಂದರ ವಸ್ತುಗಳಿರಲಿ, ನಯನ ಮನೋಹರ ತಾಣಗಳಿರಲಿ, ಪ್ರಕೃತಿ ಸೊಬಗಿರಲಿ, ಕಣ್ಣಿಗೆ ಮತ್ತು ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ.ಎರಡನೇಯದು ಆಡಿಟರಿ ಮೆಮೊರಿ. ಈ ಜ್ಞಾಪಕ ಶಕ್ತಿ ಚೆನ್ನಾಗಿದ್ದವರಲ್ಲಿ ಶಾಲೆಗಳಲ್ಲಿರಬಹುದು, ಹೊರಾಂಗಣದಲ್ಲಿರಬಹುದು, ಕೇಳಿ ಕಲಿಯುವಂತಹ ಮನಸ್ಥಿತಿ ಮತ್ತು ಸ್ವಭಾವವೇ ಹೆಚ್ಚು. ಇನ್ನು ಮೂರನೆಯದು, ಕೈನೆಸ್ಥೆಟಿಕ್ ಮೆಮೊರಿ. ಇವರು ಬರೆದು ಕಲಿಯುವಂತವರು. ಹಾಗೆಯೇ ಮೆಮೋರಿ ಹೆಚ್ಚಿಸಲು ಶಾರ್ಟ್ ಟರ್ಮ್ ಮತ್ತು ಲಾಂಗ್ ಟರ್ಮ್ ಮೆಮೋರಿ ಟೆಕ್ನಿಕ್‌ಗಳನ್ನು ಪ್ರಯೋಗಿಸಬೇಕಷ್ಟೇ. ಶಾರ್ಟ್‌ಟರ್ಮ್ ಮೆಮೋರಿಯೆಂದರೆ ಒಂದು ವಾರದಿಂದ ತಿಂಗಳ ತನಕ ನೆನೆಪಿಟ್ಟುಕೊಳ್ಳುವಂತಹ ಕಲೆ. ಒಮ್ಮೆ ಓದಿದ್ದನ್ನು ಮತ್ತೆ 20 ನಿಮಿಷ ಬಿಟ್ಟು ಮನನ ಮಾಡಿಕೊಳ್ಳಬೇಕು. ನಂತರ 8 ರಿಂದ 12 ಗಂಟೆ ಒಳಗೆ ಮತ್ತೊಂದು ಬಾರಿ ಓದಬೇಕು, ಹಾಗೆಯೇ 24 ತಾಸುಗಳ ನಂತರ ಮತ್ತೊಮ್ಮೆ ಓದಿ ಪುನರ್ ಮನನ ಮಾಡಿಕೊಳ್ಳಬೇಕು. ಇನ್ನು ಲಾಂಗ್ ಟರ್ಮ್ ಮೆಮೋರಿ. ಇವಾಗ ಓದಿದ್ದು ನೆನಪಲ್ಲುಳಿಯಬೇಕೆಂದರೆ ಓದಿದ ನಂತರ 20 ನಿಮಿಷ ಮತ್ತು 24 ತಾಸು ಬಿಟ್ಟು ಮತ್ತೆ ಮನನ ಮಾಡಿಕೊಳ್ಳಬೇಕು. ಮೂರು ವಾರಗಳ ನಂತರ ಮತ್ತೆ ಓದಿದರೆ ಜ್ಞಾನಪಕ ಶಕ್ತಿ ಹೆಚ್ಚಾಗುತ್ತದೆ. ಈ ಕ್ರಮದಲ್ಲಿ ಮೆಲುಕು ಹಾಕಿದಾಗ ಮೂರು ತಿಂಗಳಿಂದ ಆರು ತಿಂಗಳ ತನಕ ಜ್ಞಾಪಕದಲ್ಲುಳಿಯುತ್ತದೆ ಎಂದು ಸಲಹೆ ನೀಡಿದರು.
ಅದೇ ರೀತಿ ಮೂರನೆಯದು ಕೈನೆಸ್ಥೆಟಿಕ್ ಮೆಮೊರಿ. ಓದುವಾಗ ಪ್ರಮುಖವಾದ ಪಾಯಿಂಟ್‌ಗಳನ್ನು ಬರೆದಿಟ್ಟುಕೊಳ್ಳಬೇಕು, ಹೀಗೆ ಬರೆದು ಅಭ್ಯಾಸ ಮಾಡುವುದರಿಂದ ಮಕ್ಕಳಿಗೆ ಸದಾ ನನೆಪಲ್ಲಿರುತ್ತದೆ. ಈ ರೀತಿ ಅಭ್ಯಾಸ ಮಾಡಿದರೆ ಸಾಮಾನ್ಯವಾಗಿ ತೆಗೆಯುವ ಅಂಕಕ್ಕಿಂತ ಶೇ. 10 ರಿಂದ 20 ರಷ್ಟು ಹೆಚ್ಚು ತೆಗೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಸುಕೇಶ್ ಶೇರಿಗಾರ, ಉಪ ಪ್ರಾಂಶುಪಾಲರಾದ ನೇತ್ರಾವತಿ ಹಾಗೂ ಸಿಬ್ಬಂದಿ ವರ್ಗದವರು , ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.