ಶಿವಮೊಗ್ಗ, ಜನವರಿ 19 “ನಗರದ ಹೊರವಲಯಗಳಿಗೆ ನಿರಂತರ ಒತ್ತಡಯುಕ್ತ ಕುಡಿಯುವ ನೀರು ಯೋಜನೆ ಮತ್ತು ನಗರದ 24*7 ಕುಡಿಯುವ ನೀರು ಯೋಜನೆಗಳಿಂದಾಗಿ ಮುಂದಿನ ವರ್ಷದೊಳಗೆ ಈ ಪ್ರದೇಶಗಳಲ್ಲಿ ಪ್ರತಿ ಮನೆ ಮನೆಗೆ ನಿರಂತರವಾಗಿ ಕುಡಿಯುವ ನೀರು ಸಿಗಲಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪ ತಿಳಿಸಿದರು.


      ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ಮತ್ತು ಮಹಾನಗರಪಾಲಿಕೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ನಗರದ ಪಾಲಿಕೆ ವ್ಯಾಪ್ತಿಯ ಹೊರವಲಯದಲ್ಲಿ ಬರುವ ಪ್ರದೇಶಗಳಿಗೆ ನಿರಂತರ ಒತ್ತಡಯುಕ್ತ ಕುಡಿಯುವ ನೀರು ಸರಬರಾಜು ವಿತರಣಾ ವ್ಯವಸ್ಥೆಯನ್ನು ಕಲ್ಪಿಸುವ
ರೂ. 96.50 ಕೋಟಿ ಅಂದಾಜು ವೆಚ್ಚದ ಯೋಜನೆ ಕಾಮಗಾರಿಗೆ ಗುಡ್ಡೇಕಲ್ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಮೇಲ್ಮಟ್ಟದ ಜಲಸಂಗ್ರಹಗಾರದ ಹತ್ತಿರ ಶಂಕುಸ್ಥಾಪನೆಯನ್ನು ನೆರವೇರಿಸಿ ಅವರು ಮಾತನಾಡಿದರು.
    ಪ್ರಸ್ತುತ ನಗರದ ಹೊರವಲಯದ ಪ್ರದೇಶಗಳಿಗೆ ಕುಡಿಯುವ ನೀರು ಕಲ್ಪಿಸಲು ರೂ.96.50  ದೊಡ್ಡ ಮೊತ್ತದ ಕಾಮಗಾರಿಯನ್ನು ಶಿವಮೊಗ್ಗಕ್ಕೆ ನೀಡಿರುವ ಕ.ನ.ನೀ.ಸ ಮತ್ತು ಒ.ಚ.ಮಂಡಳಿ ಅಧ್ಯಕ್ಷರಾದ ರಾಜುಗೌಡರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ.
        ಇನ್ನು ಬರುವ ಮಾರ್ಚ್ ಒಳಗೆ ನಗರದಲ್ಲಿ ಪ್ರಗತಿಯಲ್ಲಿರುವ 24*7 ಕುಡಿಯುವ ನೀರು ಸರಬರಾಜು ಯೋಜನೆ ಕೂಡ ಪೂರ್ಣಗೊಳ್ಳಲಿದೆ. ಇನ್ನು ಒಂದು ವರ್ಷದಲ್ಲಿ ಈ ಕಾಮಗಾರಿಯನ್ನೂ ಸಹ ಮುಗಿಸಬೇಕು. ಇದಕ್ಕಾಗಿ ಕಂಟ್ರಾಕ್ಟರ್‍ಗಳಿಗೆ ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಇನ್ನೊಂದು ವರ್ಷದಲ್ಲಿ ಎರಡೂ ಕಾಮಗಾರಿಗಳು ಪೂರ್ಣಗೊಂಡು ನಗರದ ಎಲ್ಲ ಮನೆಗಳಿಗೆ ಕುಡಿಯುವ ನೀರು ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ನಗರದ ಹೊರವಲಯದಲ್ಲಿರುವ ವಿರುಪಿನಕೊಪ್ಪ ಮಂಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧ್ಯಕ್ಷರ ಗಮನಕ್ಕೆ ತರಲಾಗಿ, ನೀರು ಸರಬರಾಜು ಕಾಮಗಾರಿಗೆ ಅವರು ರೂ.4 ಕೋಟಿಯನ್ನು ಘೋಷಿಸಿದ್ದಾರೆ. ಆದ್ದರಿಂದ ಮಂಡಿ ಕಾರ್ಮಿಕರ ಪರವಾಗಿ ನಾನು ಅಭಿನಂದನೆ ತಿಳಿಸುತ್ತೇನೆ ಎಂದರು.
      ಪ್ರಸ್ತುತ ಗೋವಿಂದಪುರದಲ್ಲಿ ಆಶ್ರಯ ಮನೆ ಕಾಮಗಾರಿ ಪ್ರಗತಿಯಲ್ಲಿದ್ದು ಆಗಸ್ಟ್ ವೇಳೆಗೆ 1600 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು. ಇದು ಗ್ರಾಮೀಣ ಭಾಗಕ್ಕೆ ಸೇರಿದ್ದು ಗ್ರಾಭೀಣಾಭಿವೃದ್ದಿ ಇಲಾಖೆಯಿಂದ ನೀರಿನ ವ್ಯವಸ್ಥೆ ಕಲ್ಪಿಸಲು ರೂ. 16 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಗೋಪಿಶೆಟ್ಟಿಕೊಪ್ಪ ನಗರ ವ್ಯಾಪ್ತಿಗೆ ಸೇರಿದ್ದು ಇಲ್ಲಿ ಸಹ ಫಲಾನುಭವಿಗಳಿಗೆ ಆಶ್ರಯ ಮನೆ ಮಂಜೂರಾತಿ ಪತ್ರ ನೀಡಿದ್ದೇವೆ. ಮನೆ ಕಟ್ಟಲು ಆರಂಭಿಸಿದರೆ ನೀರು ಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಸುಮಾರು ರೂ.10 ಕೋಟಿಯನ್ನು ಅಧ್ಯಕ್ಷರು ಮಂಜೂರು ಮಾಡಬೇಕೆಂದು ಮನವಿ ಮಾಡಿದರು.
     ನಗರದಲ್ಲಿ ಯುಜಿಡಿ ಸಮಸ್ಯೆ ಸಹ ಇದ್ದು, ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಅಧ್ಯಕ್ಷರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದ ಅವರು ಇನ್ನು ಒಂದು ವರ್ಷದ ಒಳಗೆ 24*7 ಕುಡಿಯುವ ನೀರು ಮತ್ತು ನಗರ ಹೊರವಲಯಕ್ಕೆ ನೀರು ಕಲ್ಪಿಸುವ ಈ ಯೋಜನೆ ಪೂರ್ಣಗೊಳ್ಳಲೇ ಬೇಕು. ಈ ನಿಟ್ಟಿನಲ್ಲಿ ಕೆಲಸಗಳು ಚುರುಕಾಗಬೇಕೆಂದು ಸೂಚನೆ ನೀಡಿದರು.
     ಶಾಸಕರು ಹಾಗೂ ಕ.ನ.ನೀ.ಸ ಮತ್ತು ಒ.ಚ.ಮಂಡಳಿ ಅಧ್ಯಕ್ಷರಾದ ನರಸಿಂಹ ನಾಯಕ(ರಾಜುಗೌಡ) ಮಾತನಾಡಿ, ಕಳೆದ ಬಾರಿ ಶಿವಮೊಗ್ಗ ಭೇಟಿ ನೀಡಿದ್ದಾಗ ಉಸ್ತುವಾರಿ ಸಚಿವರು ಹೊರವಲಯದ ಪ್ರದೇಶಗಳಿಗೆ ಕುಡಿಯುವ ನೀರಿನ ಯೋಜನೆ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು, ಅದರಂತೆ ಈ ಯೋಜನೆಗೆ ಮಂಜೂರಾತಿ ನೀಡಿ ಟೆಂಡರ್ ಕರೆದು, ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿದೆ. ಇನ್ನೊಂದು ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳುವ ವಿಶ್ವಾಸ ಇದೆ.
     ಶಿವಮೊಗ್ಗ ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಸಂಸದರು, ಶಾಸಕರ ನೇತೃತ್ವದಲ್ಲಿ ನಗರದಲ್ಲಿ ಅನೇಕ ಅಭಿವೃದ್ದಿ ಕೆಲಸಗಳಾಗುತ್ತಿವೆ. ಪ್ರಸ್ತುತ ಈ ಯೋಜನೆಯಿಂದ ನಗರ ಹೊರವಲಯದ ಪ್ರದೇಶಗಳಿಗೆ 2035 ನೇ ಸಾಲಿನವರೆಗೆ ನಿರಂತರವಾಗಿ ಕುಡಿಯುವ ನೀರು ದೊರಕಲಿದೆ. ವಿರುಪಿನಕೊಪ್ಪದ ಕುಡಿಯುವ ನೀರಿನ ಯೋಜನೆಗೆ ಕೂಡ ಈ ಯೋಜನೆಯಡಿಯೇ ವ್ಯವಸ್ಥೆ ಮಾಡಲಾಗುವುದು. ಗುಣಮಟ್ಟದ ಕೆಲಸ ಆಗಬೇಕು. ಹಾಗೂ ಪ್ರತಿ ಮನೆಗೆ ಒಂದು ವರ್ಷದಲ್ಲಿ ನೀರು ಸರಬರಾಜಾಗಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
      ಉಸ್ತುವಾರಿ ಸಚಿವರು ನಮ್ಮ ಜಿಲ್ಲೆಗೆ ಜಲಜೀವನ್ ಮಿಷನ್ ಯೋಜನೆಯಡಿ ರೂ.1200 ಕೋಟಿ ಮಂಜೂರು ಮಾಡಿದ್ದು ಅವರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
        ಮಹಾನಗರಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ ಮಾತನಾಡಿ, ಶಿವಮೊಗ್ಗ ನಗರ ಬೆಳೆಯುತ್ತಿದೆ. ಆದರೆ ಅದಕ್ಕೆ ತಕ್ಕಂತೆ ನೀರಿನ ಸರಬರಾಜು ಇಲ್ಲದೆ ನೀರಿನ ಅಭಾವ ಉಂಟಾಗಿತ್ತು. ನಗರದ ಸುತ್ತಮುತ್ತಲಿನ ಪ್ರದೇಶಗಳಾದ ಜೆ.ಹೆಚ್.ಪಟೇಲ್ ಬಡಾವಣೆ, ಸೋಮಿನಕೊಪ್ಪ, ಪುರಲೆ, ವಾದಿ-ಏ-ಹುದ, ಬೊಮ್ಮನಕಟ್ಟೆ ಇತರೆಡೆ ನೀರಿನ ಕೊರತೆ ಇದ್ದು, ಜನರು ಪಾಲಿಕೆ ಸದಸ್ಯರನ್ನು ಕೇಳುತ್ತಿದ್ದರು. ಈ ಯೋಜನೆಯಿಂದ ನಗರದ ಎಲ್ಲ ಹೊರವಲಯಗಳಿಗೆ ಕುಡಿಯುವ ನೀರಿನ ಸಬರಾಜಾಗಿ ಅನುಕೂಲವಾಗಲಿದೆ. ಇದಕ್ಕಾಗಿ ನಾನು ಸಂಸದರು, ಶಾಸಕರು ಹಾಗೂ ಕ.ನ.ನೀ.ಸ ಮತ್ತು ಒ.ಚ.ಮಂಡಳಿ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
       ಮಹಾನಗರಪಾಲಿಕೆ ಆಯುಕ್ತ ಚಿದಾನಂದ ವಟಾರೆ ಪ್ರಾಸ್ತಾವಿಕವಾಗಿ ಮಾತನಾಡಿ, ಪಾಲಿಕೆ ವ್ಯಾಪ್ತಿಯ ಹೊರವಲಯದಲ್ಲಿ ಬರುವ ವಾರ್ಡ್ ಪ್ರದೇಶಗಳು ಅಭಿವೃದ್ದಿ ಹೊಂದುತ್ತಿದ್ದು ಈ ಭಾಗದ ವಸತಿ ಪ್ರದೇಶಗಳಿಗೆ ನೀರು ಪೂರೈಕೆ ಸಮಸ್ಯೆಯಾದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ದಿ ಸಚಿವರು ನಗರಾಭಿವೃದ್ದಿ ಸಚಿವರಿಗೆ ಈ ಭಾಗದಲ್ಲಿ 24*7 ಒತ್ತಡಯುಕ್ತ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಲು ಕೋರಿದ್ದರು. ನಗರಾಭಿವೃದ್ದಿ ಸಚಿವರ ಸೂಚನೆಯಂತೆ ಈ ಪ್ರದೇಶದಲ್ಲಿ ಬರುವ 11 ಟ್ಯಾಂಕ್ ಜೋನ್‍ನಲ್ಲಿ ಅವಶ್ಯವಿರುವ 325 ಕಿ.ಮೀ ವಿತರಣಾ ಕೊಳವೆಮಾರ್ಗ ಮತ್ತು 11 ಸಾವಿರ ಮೀಟರ್ ಸಹಿತ ಗೃಹಸಂಪರ್ಕಕ್ಕಾಗಿ ರೂ.96.50 ಕೋಟಿ ಯೋಜನೆ ಅನುಮೋದನೆಗೊಂಡಿರುತ್ತದೆ.
     ಯೋಜನೆಯ ಕಾಮಗಾರಿಯನ್ನು ಪ್ಯಾಕೇಜ್ ಟೆಂಡರ್‍ನಲ್ಲಿ ಮೆ|| ಗಿಡ್ಡೇಗೌಡ ಕಂಟ್ರಾಕ್ಟರ್ಸ್ ಮತ್ತು ಮೆ|| ಶ್ರೀ ಶುಭಾ ಸೇಲ್ಸ್ ಇಂಜಿನಿಯರ್ಸ್ ಬೆಂಗಲೂರು ಇವರಿಗೆ ಜಂಟಿ ಸಹಭಾಗಿತ್ವದಲ್ಲಿ ನೀಡಲಾಗಿದ್ದು ಕಾಮಗಾರಿ ಪೂರ್ಣಗೊಳಿಸಲು ಹದಿನೆಂಟು ತಿಂಗಳ ಅವಧಿಯನ್ನು ನಿಗದಿಪಡಿಸಲಾಗಿದೆ. ಇನ್ನು ನಗರದ 24*7 ಕುಡಿಯುವ ನೀರು ಯೋಜನೆ ಕಾಮಗಾರಿಯುವ ಮಾರ್ಚ್ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
        ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್, ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್, ಪಾಲಿಕೆ ಸ್ಥಾನಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ, ಪಾಲಿಕೆ ಸದಸ್ಯರಾದ ಸುವರ್ಣ ಶಂಕರ್, ಯಮುನಾ ರಂಗೇಗೌಡ, ಹೆಚ್.ಸಿ.ಯೋಗೀಶ್, ಇತರೆ ಪಾಲಿಕೆ ಸದಸ್ಯರು, ಕ.ನ.ನೀ.ಸ ಮತ್ತು ಒ.ಚ.ಮಂಡಳಿ ಮುಖ್ಯ ಮತ್ತು ಕಾರ್ಯಪಾಲಕ ಅಭಿಯಂತರರು ಇದ್ದರು.

error: Content is protected !!