ಶಿವಮೊಗ್ಗ,ಡಿಸೆಂಬರ್-2: ಮಾರಣಾಂತಿಕ ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು 2ರಿಂದ 6ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಇಂದ್ರ ಧನುಷ್ ಕಾರ್ಯಕ್ರಮದಡಿಯಲ್ಲಿ ಕಡ್ಡಾಯವಾಗಿ ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು ತಿಳಿಸಿದರು.
ಅವರು ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ತುಂಗಾನಗರದÀ ಪ್ರಸೂತಿ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ತೀವ್ರತರ ಇಂದ್ರಧನುಷ್ ಲಸಿಕೀಕರಣ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚೆಗೆ ಮಾರಣಾತಿಂಕ ಖಾಯಿಲೆಗಳಿಗೆ ತುತ್ತಾಗುತ್ತಿರುವರರ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳಕಾರಿ. ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಸಕಾಲದಲ್ಲಿ ಕೆಲವೊಂದು ಚುಚ್ಚುಮದ್ದುಗಳನ್ನು ನೀಡುವ ಅವಶ್ಯಕತೆ ಇದೆ. ಕೆಲವು ಸಂದರ್ಭಗಳಲ್ಲಿ ನಿರ್ಲಕ್ಷ್ಯ ಹಾಗೂ ಉದಾಸೀನದಿಂದ ಚುಚ್ಚುಮದ್ದು ತೆಗೆದುಕೊಳ್ಳದೇ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಪ್ರತಿಯೊಬ್ಬರೂ ನಿಯಮಿತವಾಗಿ ಲಸಿಕೆ ಪಡೆದುಕೊಳ್ಳುವುದನ್ನು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಖಾತ್ರಿಪಡಿಸಬೇಕು. ಪ್ರತಿಯೊಬ್ಬರೂ ಲಸಿಕೆ ಹಾಕಿಕೊಳ್ಳುವಂತೆ ಮನ ಒಲಿಸಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಇಂದ್ರ ಧನುಷ್ ಪ್ರಥಮ ಹಂತ ಡಿಸೆಂಬರ್ 2ರಿಂದ ಆರಂಭವಾಗಲಿದ್ದು, ಎರಡನೇ ಹಂತ ಜನವರಿ 3ರಿಂದ ಮೂರನೇ ಹಂತ ಫೆಬ್ರವರಿ 3ರಿಂದ ಮತ್ತು ನಾಲ್ಕನೇ ಹಾಗೂ ಕೊನೆ ಹಂತ ಮಾರ್ಚ್ 2ರಿಂದ ಆರಂಭವಾಗಲಿದೆ. ಈ ಅಭಿಯಾನದ ಸಂದರ್ಭದಲ್ಲಿ 2ರಿಂದ 6ವರ್ಷದೊಳಗಿನ ಮಕ್ಕಳನ್ನು ಹಾಗೂ ಗರ್ಭಿಣಿಯರನ್ನು ಗುರುತಿಸಿ ಅವರಿಗೆ ಲಸಿಕೆ ಹಾಕಲಾಗುವುದು. ಲಸಿಕೆಯಿಂದ ವಂಚಿತರಾಗಿರುವ ಮಕ್ಕಳು ಹಾಗೂ ಗರ್ಭಿಣಿಯರನ್ನು ಮನೆ ಮನೆ ಭೇಟಿ ಮೂಲಕ ಗುರುತಿಸಲಾಗುತ್ತಿದೆ ಎಂದರು.
ಕ್ಷಯ, ದಡಾರ, ಹೈಪಟಯಟಸ್-ಬಿ ಮುಂತಾದ ಮಾರಣಾಂತಿಕ ಖಾಯಿಲೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಲಸಿಕೆ ತೆಗೆದುಕೊಳ್ಳುವುದು ಅಗತ್ಯವಾಗಿದೆ. ಜಿಲ್ಲೆಯಲ್ಲಿ 17 ಗರ್ಭಿಣಿಯರು ಸೇರಿ 227 ಮಕ್ಕಳು ಲಸಿಕೆಯಿಂದ ವಂಚಿತರಾಗಿದ್ದು, ಅಭಿಯಾನದ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಡಾ.ಸತೀಶ್‍ಚಂದ್ರ ಅವರು ಮಾತನಾಡಿ, 2-6 ವರ್ಷದೊಳಗಿನ ಮಕ್ಕಳಿಗೆ ರೋಗನಿರೋಧಕ ಲಸಿಕೆ ನೀಡುವ ಅಭಿಯಾನವನ್ನು 4 ಹಂತಗಳಲ್ಲಿ ಹಮ್ಮಿಕೊಂಡಿದ್ದು, ಈ ಲಸಿಕೆಯು 10 ಮಾರಕ ರೋಗಗಳಿಂದ ಮಕ್ಕಳನ್ನು ದೂರವಿರಿಸಲು ಅವಶ್ಯಕವಾಗಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯೆ ಎಸ್.ಲಕ್ಷ್ಮಿ ಶಂಕರನಾಯ್ಕ್ ಮಾತನಾಡಿ ಕೆಲವು ಜನರಲ್ಲಿ ಲಸಿಕೆ ಕುರಿತು ನಿರ್ಲಕ್ಷ್ಯ ಮನೋಭಾವನೆ ಹಾಗೂ ತಪ್ಪು ಅಭಿಪ್ರಾಯಗಳಿದ್ದು, ಇದರಿಂದ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸದೆ ವಂಚಿತರನ್ನಾಗಿಸುತ್ತಿದ್ದಾರೆ. ಈ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನೋಡಲ್ ಉಪ ನಿರ್ದೇಶಕ ಡಾ.ಜಗದೀಶ್, ಆರ್‍ಸಿಎಚ್ ಅಧಿಕಾರಿ ಡಾ.ನಾಗರಾಜ, ತಾಲ್ಲೂಕ ಆರೋಗ್ಯಧಿಕಾರಿ ಡಾ. ದಿನೇಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಷಪ್ಪ , ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಂದ್ರಪ್ಪ, ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು, ಮತ್ತು ಆಶಾಕಾರ್ಯಕರ್ತೆಯರು ಉಪಸ್ಥಿತರಿದರು,
