ಡಾ: ಪಿ. ಮೋಹನ, ಡಾ: ಯುವರಾಜ ಹೆಗಡೆ, ಡಾ:ಎನ್.ಬಿ. ಶ್ರೀಧರ

ಕೃಷಿ ಪ್ರಧಾನವಾದ ಭಾರತದಲ್ಲಿ ಪಶುಪಾಲನೆಯು ರೈತರ ಬಹುಮುಖ್ಯ ಉಪ ಕಸುಬಾಗಿದೆ. ಅವುಗಳಲ್ಲಿ ಹೈನುಗಾರಿಕೆಯು ರೈತನ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಲೇಖನದಲ್ಲಿ ಕರುಗಳನ್ನು ಉತ್ತಮ ರೀತಿಯಲ್ಲಿ ಪಾಲನೆ ಮಾಡುವ ಬಗೆ ಹಾಗೂ ಅವುಗಳಿಂದ ರೈತರಿಗೆ ಆಗುವ ಆರ್ಥಿಕ ಲಾಭದ ಕುರಿತಾಗಿ ಮಾಹಿತಿ ನೀಡಲಾಗಿದೆ.

ಕರುಗಳ ಪಾಲನೆಯಲ್ಲಿ ಗಮನಿಸಬೇಕಾದ ಅಂಶಗಳು:-
• ಕರುಗಳು ಹುಟ್ಟಿದ ಕೂಡಲೇ ಅವುಗಳ ಮೈಮೇಲಿರುವ ಲೋಳೆಯಾದ ವಸ್ತುವನ್ನು ಹಿಂಡಿ ತೆಗೆದು, ಮೂಗಿನ ಹೊಳ್ಳೆಗಳನ್ನು ಒರೆಸಿ, ಸರಾಗವಾಗಿ ಉಸಿರಾಡಲು ಅವಕಾಶ ಮಾಡಿಕೊಡಬೇಕು. ನಂತರ ಕರುವನ್ನು ತಾಯಿಯ ಸಮೀಪ ಬಿಟ್ಟು ನೆಕ್ಕಲು ಅನುವು ಮಾಡಿಕೊಡಬೇಕು.
• ಹಸಿಯಾದ ಹೊಕ್ಕಳ ಬಳ್ಳಿಯಿಂದ ರೋಗಾಣುಗಳು ಕರುಗಳ ದೇಹವನ್ನು ಸೇರುವ ಸಾಧ್ಯತೆಯಿದ್ದು, ಮುಂಜಾಗ್ರತೆಯಗಿ ಹೊಕ್ಕಳನ್ನು ದೇಹದಿಂದ 2 ಇಂಚು ಉದ್ದ ಬಿಟ್ಟು, ಸ್ವಚ್ಛವಾದ ದಾರದಿಂದ ಕಟ್ಟಬೇಕು. ನಂತರ ಹೊಸದಾದ ಬ್ಲೇಡಿನಿಂದ ಕೆಳಭಾಗವನ್ನು ಹೊಕ್ಕಳ ಬಳ್ಳಿಯನ್ನು ಕಟ್ಟಿದ ಗಿಂಚಿನಿಂದ ಕೆಳಭಾಗವನ್ನು ಕತ್ತರಿಸಿ, ಅದಕ್ಕೆ ಟಿಂಕ್ಚರ್ ಐಯೋಡಿನ್ ದ್ರಾವಣವನ್ನು ಲೇಪಿಸಬೇಕು. 12 ಗಂಟೆಗಳ ನಂತರ ಮತ್ತೊಮ್ಮೆ ಟಿಂಕ್ಚರ್ ದ್ರಾವಣವನ್ನು ಲೇಪನ ಮಾಡುವುದು ಉತ್ತಮ.
• ಗಿಣ್ಣಿನ ಹಾಲು ಮುಂದಿನ ದಿನಗಳ ಕರುಗಳ ಆರೋಗ್ಯವನ್ನು ನಿರ್ಧರಿಸುತ್ತದೆ. ಅದು ಕರುಗಳಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕರುಗಳು ಹುಟ್ಟಿದ 15-30 ನಿಮಿಷದೊಳದಾಗಿ ಸಾಕಷ್ಟು ಗಿಣ್ಣದ ಹಾಲನ್ನು ಕುಡಿಸಬೇಕು. ನಂತರ ಅದರಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಮೈಗೂಡಿಸಿಕೊಳ್ಳುವ ಸಾಮಥ್ರ್ಯ ಕಡಿಮೆಯಾಗುತ್ತಾ ಹೋಗುತ್ತದೆ. ಕರು ಹುಟ್ಟಿ 2 ಗಂಟೆಯವರೆಗೆ ಸಾಕಷ್ಟು ಗಿಣ್ಣದ ಹಾಲನ್ನು ಕುಡಿಸುವುದು ಸೂಕ್ತ. ಮುಂದುವರೆಸಿ, ಕರುಗಳಿಗೆ 3 ತಿಂಗಳವರೆಗೆ ಅಳತೆಯ ಪ್ರಮಾಣದಲ್ಲಿ ಹಾಲನ್ನು ನೀಡಬೇಕು.
• ಕರು ಹಾಕಿದ ರಾಸುಗಳಲ್ಲಿ ಗೀಬಿನ ಹಾಲನ್ನು ಯತೇಚ್ಛವಾಗಿದ್ದಲ್ಲಿ ಅದನ್ನು ಹಾಳಾಗದಂತೆ ಶೀತಲೀಕರಿಸಿ ಸಂಗ್ರಹ ಮಾಡಿಟ್ಟು ಕರುವಿಗೆ ಅಥವಾ ಬೇರೆಯ ಕರುಗಳಿಗೆ ಹಂತಹಂತವಾಗಿ ನೀಡುವುದರಿಂದ ಕರುಗಳು ಆರೋಗ್ಯದಲ್ಲಿ ಉತ್ತಮವಾಗಿರುತ್ತದೆ.
• ಕರುಗಳಿಗೆ ಸಾಮಾನ್ಯವಾಗಿ ಕಾಡುವ ಕಾಲ್ಗಂಟು ಊತ, ಬೇಧಿ ಹಾಗೂ ಹೊಕ್ಕಳ ಬಾವಿನ ಸಮಸ್ಯೆಗಳಿಗೆ ಸೂಕ್ತ ಸಮಯದಲ್ಲಿ ಪಶು ವೈದ್ಯರಿಂದ ಚಿಕಿತ್ಸೆ ನೀಡಬೇಕು.
• ಕರುಗಳು ತಾಯಿಯ ಗರ್ಭದಲ್ಲಿರುವಾಗಲೇ ಜಂತು ಹುಳುಗಳ ಮರಿಗಳು ರಕ್ತದ ಮುಖಾಂತರ ಬಂದು ಕರುವಿನ ಹೊಟ್ಟೆಯನ್ನು ಸೇರುತ್ತವೆ. ನಂತರ ಹಾಲಿನ ಮುಖಾಂತರ, ಕಲುಷಿತ ನೀರು, ಆಹಾರದ ಮುಖಾಂತರ ಕರುಗಳಿಗೆ ಜಂತು ಬಾಧೆ ಕಾಣಿಸಿಕೊಳ್ಳುತ್ತದೆ. ನಿಯಮಿತವಾಗಿ ಜಂತು ನಿವಾರಕ ಔಷಧವನ್ನು ಕರುಗಳಿಗೆ ನೀಡುವುದರಿಂದ ಜಂತು ಹುಳುಗಳ ಸಮಸ್ಯೆಯನ್ನು ನಿವಾರಿಸಬಹುದು.
• ಕರು ಹುಟ್ಟಿ 10 ದಿನಕ್ಕೆ ಜಂತು ಹುಳುಗಳ ಔಷಧಿ ನೀಡಿದರೆ, ನಂತರ ಪ್ರತಿ ತಿಂಗಳಿಗೊಮಮೆ 6 ತಿಂಗಳು ಆಗುವವರೆಗೂ ನಂತರ ಪ್ರತಿ 3 ತಿಂಗಳಿಗೊಮ್ಮೆ ಜಂತುಹುಳುಗಳ ಔಷಧಿ ನೀಡುವುದು ಉತ್ತಮ.
• ಕರು ಹುಟ್ಟಿ 6 ತಿಂಗಳ ನಂತರ ರೋಗನಿರೋಧಕ ಲಸಿಕೆಗಳನ್ನು ಆಯಾ ಪ್ರದೇಶದಲ್ಲಿ ಇರುವ ರೋಗಗಳಿಗೆ ಅನ್ವಯಿಸುವಂತೆ ನೀಡಬೇಕು.
• ಕರುಗಳಿಗೆ ಪ್ರಾರಂಭಿಕ ಸಮತೋಲನ ಆಹಾರವನ್ನು 2 ವಾರಗಳಿಂದಲೇ ತಿನ್ನಲು ಪಳಗಿಸಬೇಕು. ಪ್ರತಿದಿನ 20 ಗ್ರಾಂನಂತೆ ಹೆಚ್ಚಿಸುತ್ತಾ ಹೋಗುವುದು ಉತ್ತಮ. ಐದನೇ ವಾರಕ್ಕೆ 500 ಗ್ರಾಂ ಸಮತೋಲನ ಪ್ರಾರಂಭಿಕ ಆಹಾರ ನೀಡುವುದರಿಂದ ಕರುಗಳ ಬೆಳವಣಿಗೆಯನ್ನು ಹೆಚ್ಚಿಸಬಹುದು.
• ಹಸಿರು ಮತ್ತು ಒಣ ಮೇವನ್ನು 6ನೇ ವಾರದಿಂದ ಕೊಡಬೇಕು.
• ದೇಹದ ಬೆಳವಣಿಗೆಗೆ ಅತ್ಯವಶ್ಯಕವಾದ ಖನಿಜಾಂಶದ ಪುಡಿಯನ್ನು ದಿನಕ್ಕೆ 5 ಗ್ರಾಂನಂತೆ ದಾಣಿ ಮಿಶ್ರಣದಲ್ಲಿ ನೀಡಿದಲ್ಲಿ ಸದೃಢ ದೇಹ ಮತ್ತು ರೋಗನಿರೋಧಕ ಶಕ್ತಿಯು ವೃದ್ಧಿಸುವುದು.
• ಹಸಿರು ಮೇವಿನಲ್ಲಿ ಯತೇಚ್ಛವಾಗಿ ವಿಟಮಿನ್ ‘ಎ’ ಇರುವುದರಿಂದ ಕಣ್ಣುಗಳ ಆರೋಗ್ಯ ಮತ್ತು ದೇಹಕ್ಕೆ ಬೇಕಾದ ಅನ್ನಾಂಗಗಳು ಸಹ ದೊರೆಯುತ್ತವೆ.

ಬಹುತೇಕ ರೈತರು ತಾಯಿಯ ಅಹಾರವನ್ನೇ ಕರುವಿಗೆ ನೀಡುತ್ತಾರೆ. ಇದರಲ್ಲಿ ಬೆಳೆಯುವ ಕರುವಿಗೆ ಅವಶ್ಯವಿರುವ ಸಾಕಷ್ಟು ಪೌಷ್ಟಿಕಾಂಶ ಇರದೇ ಇರುವುದರಿಂದ, ಕರುವಿಗೆ “ಜೋಲು ಹೊಟ್ಟೆ” ಬರುತ್ತದೆ. ಈ ರೀತಿಯ ಕರುಗಳು ನಂತರ ಉದ್ದ ಕೂದಲು, ಪೇಲವ ಮುಖ, ಜೋತಾಡುತ್ತಿರುವ ಹೊಟ್ಟೆ ಹೊಂದಿ ಅವುಗಳ ಬೆಳವಣಿಗೆ ಕುಂಠಿತವಾಗುತ್ತದೆ.
ಅದುದರಿಂದ ಇಂದಿನ ಕರುವೇ ನಾಳಿನ ಹಸು ಎಂದು ತಿಳಿದು ಅದರ ಅರೈಕೆ ಮಾಡಿದರೆ ಬಾಲೂ ಸರಳ ಹಾಗೂ ಸುಂದರವಾಗುತ್ತದೆ.

:ಲೇಖಕರು:

ಡಾ: ಪಿ. ಮೋಹನ
ಸಹಾಯಕ ಪ್ರಾಧ್ಯಾಪಕರು
ಪ್ರಾಣಿ ಸಂತಾನೋತ್ಪತ್ತಿ ಮತ್ತು ಪ್ರಸೂತಿಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ-577204

ಡಾ: ಯುವರಾಜ ಹೆಗಡೆ
ಪಶುವೈದ್ಯಾಧಿಕಾರಿಗಳು
ಪಶು ಚಿಕಿತ್ಸಾಲಯ, ಸಾಲೂರು, ತೀರ್ಥಹಳ್ಳಿ
ಶಿವಮೊಗ್ಗ ಜಿಲ್ಲೆ

ಡಾ:ಎನ್.ಬಿ. ಶ್ರೀಧರ
ಸಹಾಯಕ ಪ್ರಾಧ್ಯಾಪಕರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ,
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ-577204

error: Content is protected !!