ಶಿವಮೊಗ್ಗ ಜುಲೈ 29 : ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳು, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪ ಕೇಂದ್ರಗಳಲ್ಲಿ ಆ.01 ರಿಂದ 15 ರವರೆಗೆ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಆಚರಿಸಲಾಗುತ್ತಿದ್ದು, ಎಲ್ಲರೂ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 2014-15 ನೇ ಸಾಲಿನಿಂದ ‘ತೀವ್ರತರ ಅತಿಸಾರ ಭೇದಿಯಿಂದ ಶೂನ್ಯ ಮಕ್ಕಳ ಮರಣ’ ಎಂಬ ಧ್ಯೇಯವಾಕ್ಯದೊಂದಿಗೆ ಈ ಪಾಕ್ಷಿಕ ಆಚರಿಸಲಾಗುತ್ತಿದೆ. ಜನಸಾಮಾನ್ಯರಲ್ಲಿ ಮುಖ್ಯವಾಗಿ ಪೋಷಕರು ಮತ್ತು ಮಕ್ಕಳಲ್ಲಿ ಪರಿಸರ ನೈರ್ಮಲ್ಯ, ಕೈತೊಳೆಯುವ ವಿಧಾನ, ವೈಯಕ್ತಿಕ ಶುಚಿತ್ವದ ಬಗ್ಗೆ ಹಾಗೂ ಅತಿಸಾರ ಬೇಧಿಗೆ ಒಳಗಾದ ಮಕ್ಕಳಿಗೆ ಆರೈಕೆ ಮತ್ತು ಚಿಕಿತ್ಸೆಯನ್ನು ನೀಡುವ ವಿಧಾನದ ಅರಿವು ಮೂಡಿಸಿ, 0 ಯಿಂದ 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡುವುದು ಈ ಪಾಕ್ಷಿಕ ಆಚರಣೆ ಮುಖ್ಯ ಉದ್ದೇಶವಾಗಿದೆ.
ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಅತಿಸಾರ ಭೇದಿ ನಿಯಂತ್ರಣ ಕುರಿತು ಸಮುದಾಯದಲ್ಲಿ ವಿಶೇಷವಾಗಿ ಐದು ವರ್ಷದೊಳಗಿನ ಮಕ್ಕಳನ್ನು ಹೊಂದಿರುವ ತಾಯಂದಿರು/ಪೋಷಕರಿಗೆ ಅರಿವು ಕಾರರ್ಯಕ್ರಮಗಳನ್ನು ಮಾಡಬೇಕು. ಅತಿಸಾರ ಭೇದಿಯಿಂದ ಮಗು ತುಂಬಾ ಬಳಲಿದ ನಂತರ ಆಸ್ಪತ್ರೆಗೆ ಕರೆತರುವ ಬದಲು ಮೊದಲೇ ಕರೆತರುವಂತೆ, ನಿರ್ಜಲೀಕರಣದಿಂದಾಗುವ ಸಮಸ್ಯೆಗಳ ಕುರಿತು ಅಂಗನವಾಡಿ ಕಾರ್ಯಕರ್ತೆಯರು ಅರಿವು ಮೂಡಿಸಬೇಕು ಹಾಗೂ ಪ್ರತಿ ಮನೆಗಳಿಗೆ ಓಆರ್‍ಎಸ್ ಪೊಟ್ಟಣ ನೀಡಿ ಇದರ ಬಳಕೆ ಬಗ್ಗೆ ಮಾಹಿತಿ ನೀಡಬೇಕು. ಹಾಗೂ ಶಾಲೆಗಳಲ್ಲಿ ಕೈತೊಳೆಯುವ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದರೊಂದಿಗೆ ಅತಿಸಾರ ಬೇಧಿಗೆ ಕಾರಣವಾಗುವ ಅಂಶಗಳ ಬಗ್ಗೆ ತಿಳಿ ಹೇಳಬೇಕೆಂದರು.
ಆರ್‍ಸಿಹೆಚ್‍ಓ ಡಾ.ನಾಗರಾಜನಾಯ್ಕ ಮಾತನಾಡಿ, ಅತಿಸಾರ ಭೇದಿ ಬಾರದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಾಲೆಗಳಲ್ಲಿ, ಅಂಗನವಾಡಿಗಳ ಮೂಲಕ ತಿಳಿಸಲಾಗುವುದು. ಆಗಸ್ಟ್ 1 ರಂದು ಎಲ್ಲ ಶಾಲೆಗಳಲ್ಲಿ ಅತಿಸಾರ ಬೇಧಿ ನಿಯಂತ್ರಣ ಕುರಿತು ಜಾಥಾ ಹಾಗೂ ಆಗಸ್ಟ್ 06 ರಂದು ಎಲ್ಲ ಶಾಲೆಗಳಲ್ಲಿ ಕೈತೊಳೆಯುವ ಪ್ರಾತ್ಯಕ್ಷಿಕೆ ನಡೆಸಲಾಗುವುದು. ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಅಂಗನವಾಡಿಗಳಲ್ಲಿ ಓಆರ್‍ಎಸ್ ಮತ್ತು ಜಿಂಕ್ ಮಾತ್ರೆಗಳ ಕಾರ್ನರ್ ತೆರೆಯಲು ಕ್ರಮ ವಹಿಸಬೇಕು ಎಂದ ಅವರು ಈಗಾಗಲೇ ಆಶಾ, ಅಂಗನವಾಡಿ, ಎಎನ್‍ಎಂ ಕಾರ್ಯಕರ್ತೆಯರಿಗೆ ಓಆರ್‍ಎಸ್ ಬಳಕೆ ಬಗ್ಗೆ ತರಬೇತಿ ನೀಡಿದ್ದು, ಇವರು ಪ್ರತಿ ಮನೆಗೆ ತೆರಳಿ ಒಂದು ಓಆರ್‍ಎಸ್ ಪೊಟ್ಟಣ ನೀಡುತ್ತಾರೆ. ಅತಿಸಾರ ಭೇದಿ ಇದ್ದವರ ಮನೆಗೆ 2 ಓಆರ್‍ಎಸ್ ಮತ್ತು 16 ಜಿಂಕ್ ಮಾತ್ರೆಗಳನ್ನು ನೀಡಲಾಗುವುದು.
ಈ ಹಿಂದೆ ಅತಿಸಾರ ಭೇದಿ ಹೆಚ್ಚು ಪತ್ತೆಯಾದ ಸ್ಥಳಗಳು, ಶುಚಿತ್ವ ಮತ್ತು ನೀರಿನ ವ್ಯವಸ್ಥೆ ಇಲ್ಲದಿರುವ ಪ್ರದೇಶಗಳು ಸೇರಿದಂತೆ ಆದ್ಯತೆ ಪ್ರದೇಶಗಳನ್ನು ಹುಡುಕಿ ಅರಿವು ಮೂಡಿಸಿ, ಓಆರ್‍ಎಸ್ ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಜಿ.ಪಂ ಸಿಇಓ ಎಂ.ಎಲ್.ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟಿಲ್, ಎಲ್ಲ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಂದ್ರಪ್ಪ, ಇತರೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.