ಶಿವಮೊಗ್ಗ, ಜನವರಿ 21: ಆರೋಗ್ಯ ಇಲಾಖೆಯಲ್ಲಿ ಹಲವು ದಶಕಗಳಿಂದ ಅರೆಕಾಲಿಕ ಸಿಬ್ಬಂಧಿಗಳಾಗಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಖಾಯಂಗೊಳಿಸಲು ಶೀಘ್ರದಲ್ಲಿ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ, ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ರಾಜ್ಯ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಹೇಳಿದರ
ಅವರು ಇಂದು ನಗರದ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ, ಸ್ವಚ್ಚತಾ ಕರ್ಮಚಾರಿಗಳು ಹಾಗೂ ಕಾರ್ಮಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ನಂತರ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಅಂತೆಯೇ ರಾಜ್ಯದ ಸ್ಥಳೀಯ ಸೇವಾ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂಧಿಗಳಿಗೆ ಇರಬಹುದಾದ ಉದ್ಯೋಗಾವಕಾಶಗಳ ಕುರಿತು ಚರ್ಚಿಸಲಾಗುವುದು. ಸಿಮ್ಸ್‍ನ ಅಧಿಕಾರಿಗಳು ಇಲ್ಲಿನ ಸ್ವಚ್ಚತಾ ಕಾರ್ಮಿಕರಿಂದ ಯಾವುದೇ ದೂರುಗಳು ಬಾರದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಸೂಚಿಸಿದ ಅವರು, ಮುಂದಿನ ತಿಂಗಳ ಜಿಲ್ಲಾ ಭೇಟಿ ಸಂದರ್ಭದಲ್ಲಿ ಈ ಸಂಬಂಧ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ನಾಲ್ಕಾರು ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡ ವಲಯ ಮಟ್ಟದ ಆಸ್ಪತ್ರೆ ಇದಾಗಿದ್ದು, ವಿಶಾಲವಾದ ಕಟ್ಟಡವನ್ನು ಹೊಂದಿದೆ. ಇದರ ವ್ಯವಸ್ಥಿತ ನಿರ್ವಹಣೆಗೆ ಹೆಚ್ಚಿನ ಸಿಬ್ಬಂಧಿಗಳ ಅಗತ್ಯವಿರುವುದನ್ನು ಗಮನಿಸಲಾಗಿದೆ. ಪ್ರಸ್ತುತ 163ಮಂದಿ ಸ್ವಚ್ಚತಾ ಸಿಬ್ಬಂದಿಗಳು ಅದರಲ್ಲೂ ಹೆಚ್ಚಿನ ಸಂಖ್ಯೆಯ ಮಹಿಳಾ ಸಿಬ್ಬಂಧಿಗಳು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಅಧಿಕಾರಿಗಳು ಸಿಬ್ಬಂಧಿಗಳ ನೇಮಕ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಸಿಬ್ಬಂಧಿಗಳ ನೇಮಕಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು.
ಕೊರೋನ ಸೋಂಕಿನಂತಹ ಸಂದಿಗ್ಧ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಸ್ವಚ್ಚತಾ ಸಿಬ್ಬಂಧಿಗಳಿಗೆ ವೇತನ ಹೊರತುಪಡಿಸಿ, ಹೆಚ್ಚುವರಿಯಾಗಿ ಪಾವತಿಸಬೇಕಾಗಿದ್ದ ಗೌರವಧನ ಪಾವತಿಯಾಗದೆ ಉಳಿದಿದೆ. ಪ್ರಸ್ತುತ ಸರ್ಕಾರದಿಂದ 3.50ಕೋ. ರೂ.ಗಳ ಅನುದಾನ ಮಂಜೂರಾಗಿದ್ದು, ಅದನ್ನು ಕೂಡಲೇ ಪಾವತಿಸುವಂತೆ ಸೂಚಿಸಿರುವುದಾಗಿ ತಿಳಿಸಿದ ಅವರು, ಹಗಲಿರುಳು ಕಾರ್ಯನಿರ್ವಹಿಸುವ ಸಿಬ್ಬಂಧಿಗಳಿಗೆ ಸುರಕ್ಷತಾ ಕ್ರಮವಾಗಿ ಲಸಿಕೆ ನೀಡುವುದು. ಮುಖಗವಸು, ಕೈಗವಸು, ಸ್ಯಾನಿಟೈಜರ್ ಮುಂತಾದ ಸುರಕ್ಷತಾ ಪರಿಕರಗಳನ್ನು ಒದಗಿಸುವಂತೆ ಮೆಗ್ಗಾನ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.
ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂಧಿಗಳಿಗೆ ಸಕಾಲಿಕ ವೇತನ ಪಾವತಿಯಾಗದಿರುವ ಬಗ್ಗೆ ಸ್ವಚ್ಚತಾ ಕಾರ್ಮಿಕರಿಂದ ಅಹವಾಲುಗಳಿದ್ದು, ಕೂಡಲೇ ಸಕಾಲದಲ್ಲಿ ವೇತನ ಪಾವತಿಗೆ ಕ್ರಮ ವಹಿಸುವಂತೆ ಮಾನವ ಸಂಪನ್ಮೂಲ ಸರಬರಾಜು ಸಂಸ್ಥೆಯ ಮುಖ್ಯಸ್ಥರಿಗೆ ಸೂಚಿಸಿದ ಅವರು ಸದರಿ ನೌಕರರಿಗೆ ಸಕಾಲದಲ್ಲಿ ಪಿ.ಎಫ್., ಜಿ.ಪಿ.ಎಫ್, ಸೇರಿದಂತೆ ವೇತನ – ಭತ್ಯೆಗಳು ಪಾವತಿಯಾಗಿರುವ ಬಗ್ಗೆ ವೇತನ ಪ್ರಮಾಣಪತ್ರ ನೀಡುವಂತೆ ಸೂಚಿಸಿದರು.
ಪ್ರಸ್ತುತ ರಾಜ್ಯದಲ್ಲಿ 5080ಜನ ಮ್ಯಾನ್ಯುಯಲ್ ಸ್ಕಾವೆಂಜರ್‍ಗಳನ್ನು ಗುರುತಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮ್ಯಾನ್ಯುಯಲ್ ಸ್ಕಾವೆಂಜರ್‍ಗಳಿದ್ದಲ್ಲಿ ಅವರ ಹೆಸರನ್ನು ಪಟ್ಟಿಗೆ ಸೇರಿಸಿ, ಸೌಲಭ್ಯಗಳನ್ನು ನೀಡುವಲ್ಲಿ ಆಯೋಗ ಸಕ್ರಿಯವಾಗಿದೆ. ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಈಗಾಗಳೆ ವಿಡಿಯೋ ಸಂವಾದ ನಡೆಸಲಾಗಿದೆ. ದೇಶದಲ್ಲಿ ಈ ವ್ಯವಸ್ಥೆ ಸಂಪೂರ್ಣ ಕೊನೆಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮವಹಿಸಿವೆ ಎಂದರು.
ಈ ಸಂದರ್ಭದಲ್ಲಿ ಸಿಮ್ಸ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ್, ಜಿಲ್ಲಾ ಸರ್ಜನ್, ಸಿದ್ದನಗೌಡ ಪಾಟೀಲ್, ಮೆಗ್ಗಾನ್ ವೈದ್ಯಕೀಯ ಅಧೀಕ್ಷಕ ಡಾ|| ಶ್ರೀಧರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ನಾಗರಾಜ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.