ಶಿವಮೊಗ್ಗ, ಜುಲೈ 02 : ರಾಜೀವ್ ಗಾಂಧಿ ವಸತಿ ನಿಗಮದಿಂದ ನಗರ ಆಶ್ರಯ ಮನೆಗಳ ನಿರ್ಮಾಣಕ್ಕೆ ಎಲ್ಲಾ ಸಹಕಾರ ನೀಡಲಾಗುತ್ತಿದ್ದು, ಸ್ಥಳೀಯ ಸಂಸ್ಥೆಗಳು ಫಲಾನುಭವಿಗಳ ಆಯ್ಕೆ ಮತ್ತಿತರ ಪ್ರಕ್ರಿಯೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರು ಹೇಳಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯಲ್ಲಿ ನಿಗಮದ ವತಿಯಿಂದ ಕೈಗೊಳ್ಳಲಾಗಿರುವ ವಸತಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಆಶ್ರಯ ಸಮಿತಿಯ ಮೂಲಕ ಫಲಾನುಭವಿಗಳ ಆಯ್ಕೆ ಮಾಡಿ, ಗುಣಮಟ್ಟದ ಮನೆಗಳನ್ನು ನಿರ್ಮಿಸಬೇಕು. ಫಲಾನುಭವಿಗಳಿಂದ ಆರಂಭದಲ್ಲಿಯೇ ವಂತಿಗೆ ಹಣವನ್ನು ಪಡೆದು ಕೊಳ್ಳದೇ, ಮನೆ ನಿರ್ಮಾಣ ಕಾರ್ಯ ಒಂದು ಹಂತಕ್ಕೆ ಬಂದ ಬಳಿಕ ವಂತಿಗೆ ಹಣವನ್ನು ಪಡೆಯಬೇಕು. ಆ ಬಳಿಕ ಬ್ಯಾಂಕ್ನಿಂದ ಸಾಲ ಪಡೆಯಲು ಸಹ ಫಲಾನುಭವಿಗಳಿಗೆ ಸುಲಭವಾಗಲಿದೆ.
ಬ್ಯಾಂಕುಗಳು ಜಿಲ್ಲಾ ವಾರ್ಷಿಕ ಸಾಲ ಯೋಜನೆಯಲ್ಲಿ ವಸತಿ ನಿರ್ಮಾಣಕ್ಕಾಗಿ ಒಟ್ಟು ಸಾಲ ಯೋಜನೆಯ ಶೇ.20ರಷ್ಟನ್ನು ಮೀಸಲಾಗಿರಿಸಿದರೂ, ಅದರಲ್ಲಿ ಶೇ.6ರಿಂದ 7ರಷ್ಟು ಮಾತ್ರ ಪ್ರಗತಿ ಪ್ರತಿ ವರ್ಷ ಸಾಧ್ಯವಾಗುತ್ತಿದೆ. ವಸತಿ ಯೋಜನೆಯಡಿ ಸಾಲ ನೀಡಲು ಬ್ಯಾಂಕುಗಳು ಅನಗತ್ಯ ಷರತ್ತುಗಳನ್ನು ವಿಧಿಸದೇ ಆದ್ಯತೆ ಮೇರೆಗೆ ಒದಗಿಸಬೇಕು ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ವಸತಿ ಯೋಜನೆಯಡಿ 7.50ಲಕ್ಷ ರೂ. ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲು 1.5ಲಕ್ಷ ರೂ. ಸಬ್ಸಿಡಿ ಹಣವನ್ನು ನೀಡಲಾಗುತ್ತಿದೆ. ಉಳಿದ 6ಲಕ್ಷ ರೂ.ಗಳನ್ನು ಫಲಾನುಭವಿಗಳು ಸ್ವತಃ ಹಾಗೂ ಬ್ಯಾಂಕು ಸಾಲದ ಮೂಲಕ ಭರಿಸಬೇಕು. ಜಿ ಪ್ಲಸ್ 3 ಮಾದರಿಯಲ್ಲಿ ಪ್ರಥಮ ಹಂತದಲ್ಲಿ ಸುಮಾರು 2ಸಾವಿರ ಮನೆಗಳ ನಿರ್ಮಾಣಕ್ಕಾಗಿ ಫಲಾನುಭವಿಗಳಿಂದ ಅರ್ಜಿಗಳನ್ನು ಕರೆದು, ಡಿಪಿಆರ್ ಸಿದ್ಧಪಡಿಸಿ ಅನುಮೋದನೆಗಾಗಿ ಸಲ್ಲಿಸುವಂತೆ ಅವರು ಸೂಚಿಸಿದರು.
ಶಾಸಕ ಈಶ್ವರಪ್ಪ ಅವರು ಮಾತನಾಡಿ, ಪ್ರಥಮ ಹಂತದಲ್ಲಿ ವಿವಿಧ ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಈ ಯೋಜನೆಯಡಿ ಸಿದ್ಲೀಪುರದಲ್ಲಿ ಮನೆಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಕಾರ್ಮಿಕರ ಸಭೆಯನ್ನು ನಡೆಸಿ ಮುಂದಿನ 10ದಿನಗಳ ಒಳಗಾಗಿ ಸ್ಪಷ್ಟ ರೂಪುರೇಶೆಯನ್ನು ಸಿದ್ಧಪಡಿಸಬೇಕು. ಮನೆಗಳೊಂದಿಗೆ ಲೇಔಟ್ ಮತ್ತಿತರ ಮೂಲಸೌಲಭ್ಯ ಅಭಿವೃದ್ಧಿಗೆ ಸ್ಥಳೀಯ ಸಂಸ್ಥೆಯಿಂದ ಹಣಕಾಸು ನೆರವು ಒದಗಿಸಬೇಕು ಎಂದು ಹೇಳಿದರು.
ಆಶ್ರಯ ಯೋಜನೆಯಡಿ ಸುಮಾರು 4ಸಾವಿರ ಮನೆಗಳನ್ನು ನಿರ್ಮಿಸಲು ಗೋವಿಂದಪುರದಲ್ಲಿ 45ಎಕ್ರೆ ಹಾಗೂ ಗೋಪಶೆಟ್ಟಿಕೊಪ್ಪದಲ್ಲಿ 16ಎಕ್ರೆ ಜಮೀನು ಗುರುತಿಸಲಾಗಿದೆ. ಇದರ ಡಿಪಿಆರ್ ಆದಷ್ಟು ಬೇಗನೆ ಸಿದ್ಧಪಡಿಸಬೇಕು. ಉಳಿದ ಸ್ಥಳೀಯ ಸಂಸ್ಥೆಗಳಲ್ಲಿಯೂ ನಿಗಮದ ವತಿಯಿಂದ ಮನೆಗಳ ನಿರ್ಮಾಣಕ್ಕಾಗಿ ಫಲಾನುಭವಿಗಳ ಆಯ್ಕೆ ಮಾಡಿ ಯೋಜನೆ ಸಲ್ಲಿಸುವಂತೆ ಅನ್ಬುಕುಮಾರ್ ಹೇಳಿದರು.
ಕೊಡಗಿನಲ್ಲಿ ನಿಗಮದ ವತಿಯಿಂದ ಶೇರಾ ಎಂಬ ತಂತ್ರಜ್ಞಾನವನ್ನು ಬಳಸಿಕೊಂಡು ಅತ್ಯಂತ ಶೀಘ್ರವಾಗಿ ಉತ್ತಮ ಗುಣಮಟ್ಟದ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇದೇ ತಂತ್ರಜ್ಞಾನವನ್ನು ಸ್ಥಳೀಯವಾಗಿ ಬಳಸಿಕೊಂಡು ಮಾದರಿ ಮನೆಗಳನ್ನು ನಿರ್ಮಿಸಬಹುದಾಗಿದೆ ಎಂದು ಅನ್ಬುಕುಮಾರ್ ಹೇಳಿದರು.
ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಉಪ ಮೇಯರ್ ಚನ್ನಬಸಪ್ಪ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.