ಶಿವಮೊಗ್ಗ, ಮಾರ್ಚ್ 20 : ಖಾಸಗಿ ಶಾಲೆಗಳಿಗೆ ಆರ್ಟಿಇ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರ ಪಾವತಿಸುತ್ತಿದ್ದು, ಶಾಲೆಗಳು ಹೆಚ್ಚುವರಿ ಹಣವನ್ನು ಪಡೆಯುವಂತಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದ್ದಾರೆ.
ಕರ್ನಾಟಕ ಶಿಕ್ಷಣ ಹಕ್ಕು ಕಾಯ್ದೆ ಹಾಗೂ ಉಚಿತ ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ ಪ್ರಕಾರ ಖಾಸಗಿ ಪೂರ್ವ ಪ್ರಾಥಮಿಕ ಶಾಲೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪಡೆಯುವ ಸಂದರ್ಭದಲ್ಲಿ ಕ್ಯಾಪಿಟೇಶನ್ ಶುಲ್ಕ ತೆಗೆದುಕೊಳ್ಳುವಂತಿಲ್ಲ. ನಿಗದಿತ ಶುಲ್ಕ ಪಡೆದಿರುವ ಬಗ್ಗೆ ಕಡ್ಡಾಯವಾಗಿ ರಶೀದಿ ನೀಡಬೇಕೆಂದು ಶಾಲೆಗಳಿಗೆ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಎಲ್ಲಾ ಖಾಸಗಿ ಶಾಲೆಗಳು ಶಾಲೆ ಪ್ರಾರಂಭಿಸುವ ಮುನ್ನ ಇಲಾಖೆಯಿಂದ ನೋಂದಣಿ ಪಡೆಯಬೇಕು ಮತ್ತು ಪ್ರತಿ ಶೈಕ್ಷಣಿಕ ಸಾಲಿಗೆ ಮಾನ್ಯತೆಯನ್ನು ಇಲಾಖೆಯಿಂದ ನವೀಕರಿಸಿಕೊಂಡಿರಬೇಕು. ನೋಂದಣಿ ಮತ್ತು ಮಾನ್ಯತೆ ಪಡೆಯದೇ ನಡೆಯುತ್ತಿರುವ ಶಾಲೆಗಳನ್ನು ಅನಧಿಕೃತ ಶಾಲೆ ಎಂದು ಘೋಷಿಸಲು ಅವಕಾಶವಿದೆ. ಪಾಲಕರು ಮಕ್ಕಳನ್ನು ದಾಖಲು ಮಾಡುವ ಮೊದಲು ಶಾಲೆ ನೊಂದಣಿಯಾಗಿರುವ ಬಗ್ಗೆ ಮತ್ತು ಮಾನ್ಯತೆ ನವೀಕರಿಸಿರುವ ಬಗ್ಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುವುದು. ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ 1ನೇ ತರಗತಿಗೆ ನೇರವಾಗಿ ದಾಖಲಾಗುವ ಮಗುವು ಕನಿಷ್ಠ ವಯೋಮಿತಿಯನ್ನು ಜೂನ್ 1 ರಿಂದ 5 ವರ್ಷ 5 ತಿಂಗಳು ಹಾಗೂ ಗರಿಷ್ಠ 7 ವರ್ಷಗಳಿಗೆ ಮತ್ತು ಎಲ್.ಕೆ.ಜಿ.ಗೆ 3 ವರ್ಷ 5 ತಿಂಗಳು ಹಾಗೂ 5 ವರ್ಷಗಳ ಗರಿಷ್ಠ ವಯೋಮಿತಿಯನ್ನು ನಿಗಧಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರವೇಶಾತಿಯನ್ನು ಏಪ್ರಿಲ್ ಮತ್ತು ಮೇ ತಿಂಗಳಲ್ಲೇ ನಡೆಸಬೇಕು. 2020-21ನೇ ಸಾಲಿನಿಂದ ಎಲ್ಲಾ ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಪಡೆಯುತ್ತಿರುವ ಶುಲ್ಕದ ವಿವರಗಳನ್ನು ಎಸ್.ಎ.ಟಿ.ಎಸ್.ನಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು. ಹಾಗೂ ಸಾರ್ವಜನಿಕರಿಗೆ ಕಾಣಿಸುವಂತೆ ಶಾಲಾ ಸೂಚನಾ ಫಲಕದಲ್ಲೂ ಸಹ ಪ್ರಕಟಿಸಬೇಕು. ಉಚಿತ ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆಯ ಪ್ರಕಾರ ಮಕ್ಕಳ ದಾಖಲಾತಿಯನ್ನು ಶಿಕ್ಷಣ ಸಂಸ್ಥೆಯವರು ಯಾವುದೇ ಕಾರಣಕ್ಕಾಗಿ ನಿರಾಕರಿಸುವಂತಿಲ್ಲ. ಪೋಷಕರನ್ನಾಗಲೀ ಮಕ್ಕಳನ್ನಾಗಲೀ ಲಿಖಿತ ಅಥವಾ ಮೌಖಿಕ ಸಂದರ್ಶನ ನಡೆಸುವಂತಿಲ್ಲ. ಪೋಷಕರು ಪದವೀಧರರಾಗಿರಬೇಕು, ಪ್ರವೇಶ ಬಯಸುವ ಮಕ್ಕಳು ಇಂತಿಷ್ಟೇ ಅಂಕಗಳನ್ನು ಪಡೆದಿರಬೇಕು ಎಂದು ಶಿಕ್ಷಣ ಸಂಸ್ಥೆಗಳು ನಿಬಂಧನೆಗಳನ್ನು ವಿಧಿಸುವಂತಿಲ್ಲ. ಸಿ.ಬಿ.ಎಸ್.ಇ ಪಠ್ಯಕ್ರಮ ಅಳವಡಿಸುವ ಬಗ್ಗೆ ರಾಜ್ಯ ಸರ್ಕಾರವು ನಿರಾಪೇಕ್ಷಣಾ ಪತ್ರ ನೀಡಿರಬೇಕು. ಸಿಬಿಎಸ್ಇ ಅಫಿಲಿಯೇಶನ್ ನೋಂದಣಿ ಸಂಖ್ಯೆಯನ್ನು ದೊಡ್ಡದಾಗಿ ಸೂಚನಾ ಫಲಕದಲ್ಲಿ ಪ್ರಕಟಿಸಿರಬೇಕೆಂದು ತಿಳಿಸಿದ್ದಾರೆ.
ಖಾಸಗಿ ಶಾಲೆಗಳಲ್ಲಿ ನಿಗಧಿತ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು. ಅಗತ್ಯ ವಿದ್ಯಾರ್ಹತೆಯನ್ನು ಹೊಂದದೇ ಇರುವ ಸಿಬ್ಬಂದಿಗಳನ್ನು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ಮಾಡಿಕೊಳ್ಳುವಂತಿಲ್ಲ. ನೇಮಕಾತಿ ಮಾಡಿಕೊಂಡ ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸಬೇಕು. ನಿಗಧಿತ ವಿದ್ಯಾರ್ಹತೆ ಹೊಂದದೇ ಇರುವ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡರೆ ಅಂತಹಾ ಶಾಲೆಯ ವಿರುದ್ಧ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರವು ವಿಚಾರಣೆ ನಡೆಸಿ ರೂ. 5.00 ಲಕ್ಷಗಳ ವರೆಗೆ ದಂಡ ವಿಧಿಸಲು ಅವಕಾಶವಿದೆ.
ಶಾಲಾ ಆವರಣದಲ್ಲಿ ನಿಯಮಬಾಹಿರವಾಗಿ ಶಾಲಾ ಪಠ್ಯಪುಸ್ತಕ, ನೋಟ್ಬುಕ್, ಲೇಖನ ಸಾಮಗ್ರಿ, ಸಮವಸ್ತ್ರಗಳನ್ನು ಮಾರಾಟಮಾಡುವಂತಿಲ್ಲ. ಖಾಸಗಿ ಶಾಲೆಗಳು ಮಾನ್ಯತೆ ಪಡೆಯುವ ಪೂರ್ವದಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿರಬೇಕು ಹಾಗೂ ಶಾಲಾ ಆವರಣದ ಸುತ್ತಮುತ್ತ ಜಂಕ್ಫುಡ್ ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಖಾಸಗಿ ಶಾಲೆಗಳು ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ತಿಳಿಸಿದ್ದಾರೆ.