• ಡಾ|| ರಘುನಂದನ್
    ಶಿವಮೊಗ್ಗ, ಫೆಬ್ರವರಿ 07 : : ಜಿಲ್ಲೆಯ ಜನರ ಆರೋಗ್ಯವನ್ನು ಕಾಪಾಡುವಲ್ಲಿ ಸರ್ಕಾರವು ಜಾರಿಗೆ ತಂದಿರುವ ಜನಪರ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನರಿಗೆ ತಲುಪಿಸುವಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ವಹಿಸುತ್ತಿರುವ ಪಾತ್ರ ಅನನ್ಯವಾದುದಾಗಿದೆ ಎಂದು ಜಿಲ್ಲಾ ಸರ್ಜನ್ ಡಾ|| ರಘುನಂದನ್ ಅವರು ಹೇಳಿದರು.
    ಅವರು ಇಂದು ಪ್ರೆಸ್‍ಟ್ರಸ್ಟ್‍ನ ಸಭಾಂಗಣದಲ್ಲಿ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳಿಗಾಗಿ ಏರ್ಪಡಿಲಾಗಿದ್ದ ಆರೋಗ್ಯ ಇಲಾಖಾ ಯೋಜನೆಗಳ ಪರಿಚಯಾತ್ಮಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಾಗಿ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಜನಸಾಮಾನ್ಯರಿಗೆ ಆರೋಗ್ಯ ಇಲಾಖೆಯ ಯೋಜನೆಗಳ ಅರಿವು ದೊರೆಯುವಂತಾಗಿದೆ ಎಂದವರು ನುಡಿದರು.
    ಜಿಲ್ಲೆಯ ಆಯ್ದ ತಾಲೂಕುಗಳಲ್ಲಿ ಕಂಡುಬಂದ ಮಂಗನ ಕಾಯಿಲೆಯ ನಿಯಂತ್ರಣ ಮಾಡುವಲ್ಲಿ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಆದರೂ, ಇಲಾಖೆಯೊಂದಿಗೆ ಜನಜಾಗೃತಿ ಮೂಡಿಸುವಲ್ಲಿ ಪತ್ರಿಕೆಗಳ ಪಾತ್ರವನ್ನು ಕಡೆಗಣಿಸುವಂತಿಲ್ಲ ಎಂದವರು ನುಡಿದರು.
    ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯು ಒಂದು ವಿಶೇಷ ಯೋಜನೆಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಜಾರಿಗೆ ಬಂದಿದ್ದು ಜನಸಾಮಾನ್ಯರ ಆರೋಗ್ಯ ರಕ್ಷಣೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂಬ ಆಶಯ ನಮ್ಮದಾಗಿದೆ ಎಂದ ಅವರು, ಈ ಯೋಜನೆಯಡಿಯಲ್ಲಿ 291 ಸಾಮಾನ್ಯ ದ್ವಿತೀಯ ಹಂತದ ಚಿಕಿತ್ಸೆಗಳು, 254 ಕ್ಲಿಷ್ಟಕರ ದ್ವಿತೀಯ ಹಂತದ ಚಿಕಿತ್ಸೆಗಳು, 900 ತೃತೀಯ ಹಂತದ ಚಿಕಿತ್ಸೆಗಳು ಹಾಗೂ 169ತುರ್ತು ಚಿಕಿತ್ಸೆಗಳು ಸೇರಿದಂತೆ ಒಟ್ಟು 1614ಪ್ರಕಾರದ ಚಿಕಿತ್ಸೆಗಳನ್ನು ಒದಗಿಸಲಾಗುತ್ತಿದೆ ಎಂದವರು ನುಡಿದರು.
    ಬಿ.ಪಿ.ಎಲ್. ಕಾರ್ಡ್ ಅಥವಾ ಆರ್.ಎಸ್.ಬಿ.ವೈ.ಯೋಜನೆಯಡಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಲ್ಲಿ ರೂ.5.00ಲಕ್ಷಗಳ ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ನೋಂದಾಯಿಸಿಕೊಳ್ಳದಿದ್ದಲ್ಲಿ ಆಧಾರ್ ಕಾರ್ಡ್ ಸಲ್ಲಿಸಿ, ಯೋಜನೆಯ ಪ್ಯಾಕೇಜ್‍ನ ದರದ ಶೇ.30ರಷ್ಟು ಚಿಕಿತ್ಸೆ ಪಡೆಯಬಹುದಾಗಿದೆ. ಕುಟುಂಬದ ಪ್ರತಿಯೊಬ್ಬರು ಸದಸ್ಯತ್ವಕ್ಕಾಗಿ ಸಮೀಪದ ಆರೋಗ್ಯ ಇಲಾಖೆಗಳಲ್ಲಿ ಅಥವಾ ನಂ.1 ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದವರು ನುಡಿದರು.
    ಅಲ್ಲದೇ ಮಲೇರಿಯಾ, ಡೇಂಗ್ಯೂ, ಚಿಕೂನ್‍ಗುನ್ಯಾ, ಸಾಂಕ್ರಾಮಿಕ ರೋಗಗಳು, ಮಂಗನಕಾಯಿಲೆ ಮುಂತಾದ ಕಾಯಿಲೆಗಳು ಹಾಗೂ ಇಲಾಖಾ ಕಾರ್ಯಕ್ರಮಗಳ ಕುರಿತು ತಜ್ಞ ವೈದ್ಯರು ಆಗಮಿಸಿ ಮಾಹಿತಿ ನೀಡಿದರು.
    ಕಾರ್ಯಕ್ರಮದಲ್ಲಿ ಪ್ರೆಸ್‍ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಿ.ಹನುಮಂತಪ್ಪ, ಕುಮಾರಸ್ವಾಮಿ, ಸಂಗಮೇಶ್, ಗಣೇಶ್, ವೆಂಕಟಕೃಷ್ಣಯ್ಯ ಸೇರಿದಂತೆ ಆರೋಗ್ಯ ಇಲಾಖೆಯ ವೈದ್ಯರು ಉಪಸ್ಥಿತರಿದ್ದರು.
error: Content is protected !!