ಶಿವಮೊಗ್ಗ : ಜನವರಿ 21 : ಅನಾರೋಗ್ಯಕ್ಕೆ ಒಳಗಾಗಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆ ಹಾಗೂ ಸಲಹೆಗಾಗಿ ಆಗಮಿಸುವ ಅರ್ಹರಿಗೆ ಆರೋಗ್ಯ ಇಲಾಖೆಯ ಹಲವು ಯೋಜನೆಗಳಡಿಯಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಎಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರುಗಳಿದ್ದರೂ ಸಹ ರೋಗಿಗಳು ಚಿಕಿತ್ಸೆಗಾಗಿ ಅನಗತ್ಯವಾಗಿ ಊರಿಂದೂರಿಗೆ ಅಲೆದಾಡುವಂತಾಗಿದೆ. ಅರ್ಹರಿಗೆ ಸ್ಥಳೀಯವಾಗಿ ಚಿಕಿತ್ಸೆ ದೊರೆಯುವಂತೆ ಗಮನಹರಿಸಲು ಸೂಚಿಸಿದರು.
ಸರ್ಕಾರಿ ಆಸ್ಪತ್ರೆಗಳಿಗಿಂತ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲು ಆಗುತ್ತಿರುವ ಪ್ರಮಾಣ ಹೆಚ್ಚಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು ಹಾಗೂ ಅಗತ್ಯ ಸೌಲಭ್ಯಗಳಿದ್ದರೂ ಜನರು ಖಾಸಗಿ ಆಸ್ಪತ್ರೆಗಳ ಕಡೆಗೆ ಮುಖ ಮಾಡಿರುವುದು ಆಶ್ಚರ್ಯಕರವಾಗಿದೆ. ಈ ಬೆಳವಣಿಗೆ ಸರ್ಕಾರಿ ವೈದ್ಯರ ಕರ್ತವ್ಯನಿಷ್ಟೆಯನ್ನು ಪ್ರಶ್ನಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗಳ ಸಂಖ್ಯೆ ಹೆಚ್ಚಬೇಕು. ಅಂತೆಯೆ ಶಿಶುಗಳ ಮರಣ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಬೇಕೆಂದ ಅವರು, ಕಾಲಕಾಲಕ್ಕೆ ಹಾಕುವ ಲಸಿಕೆಯಿಂದ ಯಾವುದೇ ಮಗು ಹೊರಗುಳಿಯದಂತೆ ಗಮನಿಸಬೇಕೆಂದವರು ನುಡಿದರು.
ಅಭಿಜಾತ ಶಿಶುಗಳು ಸೇರಿದಂತೆ 5 ವರ್ಷದೊಳಗಿನ ಮರಣ ಹೊಂದುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಶಿಶುಗಳ ಮರಣ ಪ್ರಮಾಣ ನಿಯಂತ್ರಿಸುವಲ್ಲಿ ಎಲ್ಲಾ ತಾಲೂಕುಗಳ ವೈದ್ಯಾಧಿಕಾರಿಗಳು ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸುವಂತೆ ಸೂಚಿಸಿದ ಅವರು ಯೋಜನೆಗಳ ಅನುಷ್ಟಾನದಲ್ಲಿ ಆಗಿರುವ ಪ್ರಗತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ಸಭೆಯ ಹೊತ್ತಿಗೆ ನಿರೀಕ್ಷಿತ ಪ್ರಗತಿ ಸಾಧಿಸುವಂತೆ ಸೂಚಿಸಿದರು. ಅಲ್ಲದೆ ಮೆಗ್ಗಾನ್ ಸೇರಿದಂತೆ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಸಂಖ್ಯೆಯ ತಜ್ಞ ವೈದ್ಯಾಧಿಕಾರಿಗಳು ಇದ್ದರೂ ಕೆಲವು ವೈದ್ಯರ ಸೇವೆ ಕನಿಷ್ಟವಾಗಿದೆ. ಇದು ಹೀಗೆಯೆ ಮುಂದುವರೆದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ವೈದ್ಯರ ವಿರುದ್ಧ ಕ್ರಮ ಅನಿವಾರ್ಯವಾಗಲಿದೆ. ವೈದ್ಯರ ಚಟುವಟುಕೆಗಳು ಹಾಗೂ ಇಲಾಖಾ ಯೋಜನೆಗಳ ಅನುಷ್ಟಾನದ ಕುರಿತು ಸಕಾಲದಲ್ಲಿ ಪರಿಶೀಲಿಸಿ ಮಾಹಿತಿ ನೀಡುವಂತೆ ಡಾ.ನಾಗರಾಜನಾಯ್ಕ್ ಅವರಿಗೆ ಸೂಚಿಸಿದರು.
ಗರ್ಭಿಣಿ ಮಹಿಳೆಯರಿಗೆ ಆರಂಭದಿಂದಲೇ ತಮ್ಮ ಹಾಗೂ ಮಗುವಿನ ಸುರಕ್ಷತೆ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮತ್ತಿತರ ವಿಷಯಗಳ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ಈ ಸಂಬಂಧ ವೈದ್ಯಾಧಿಕಾರಿಗಳು ಕಾರ್ಯಯೋಜನೆ ರೂಪಿಸಿ ಅನುಷ್ಟಾನಕ್ಕೆ ತರಬೇಕೆಂದ ಅವರು ವೈದ್ಯರು ಮಾನವೀಯ ನೆಲೆಯಲ್ಲಿ ಸೇವೆ ಸಲ್ಲಿಸುವಂತೆ ಮನವಿ ಮಾಡಿದರು.
ರಾಷ್ಟ್ರೀಯ ಬಾಲಸ್ವಾಸ್ಥ್ಯ ಯೋಜನೆಯಡಿ ಸೇವೆ ಸಲ್ಲಿಸುವ ವೈದ್ಯರ ವೈಯಕ್ತಿಕ ಪ್ರಗತಿ ಆಶಾದಾಯಕವಾಗಿಲ್ಲ. ಅನೇಕ ವೈದ್ಯರು ತಟಸ್ಥರಾಗಿರುವಂತೆ ತೋರುತ್ತಿದೆ. ಆಯಾ ಘಟಕಗಳ ಮುಖ್ಯಸ್ಥರು ಈ ಬಗ್ಗೆ ಗಮನಹರಿಸುವಂತೆ ಸೂಚಿಸಿದರು.
ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ನಿಯಂತ್ರಣ ಅಗತ್ಯವಿದೆ. ಆಗಾಗ್ಗೆ ಅನಿರೀಕ್ಷಿತ ದಾಳಿ ನಡೆಸಿ, ತಪ್ಪಿತಸ್ಥರ ವಿರುದ್ದ ದಂಡ ಹಾಕುವಂತೆ ಸೂಚಿಸಿದರು.
ಸಾಂಕ್ರಾಮಿಕ ರೋಗಗಳ ಹರಡುವಿಕೆ, ಡೇಂಗ್ಯೂ, ಮಲೇರಿಯಾ ಮುಂತಾದ ರೋಗಗಳ ನಿಯಂತ್ರಣ ಕುರಿತು ಕ್ರಮ ಕೈಗೊಳ್ಳಬೇಕು ಅಲ್ಲದೆ ಲಾರ್ವಾ ಸಮೀಕ್ಷೆ ನಡೆಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಏಯ್ಡ್ಸ್ ಪ್ರಕರಣಗಳ ನಿಯಂತ್ರಣಕ್ಕೆ ಗಮನಹರಿಸಿ. ಮನೋಚೈತನ್ಯ ಕಾರ್ಯಕ್ರಮದ ಅನುಷ್ಟಾನ ಹಾಗೂ ಪ್ರಚಾರದಲ್ಲಿ ಮಾದಕ ವಸ್ತುಗಳಿಂದಾಗುವ ಅನಾಹುತದ ಬಗ್ಗೆ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಪ್ರೊಬೇಷನರ್ ಜಿಲ್ಲಾಧಿಕಾರಿ ದಲ್‍ಜಿತ್ ಕುಮಾರ್, ಡಾ. ನಾಗರಾಜನಾಯ್ಕ್, ಡಾ.ಸಿದ್ದನಗೌಡ, ಡಾ.ಗುಡದಪ್ಪ ಕುಸಬಿ ಸೇರಿದಂತೆ ಎಲ್ಲಾ ತಾಲೂಕುಗಳ ವೈದ್ಯಾಧಿಕಾರಿಗಳು, ಸಂಬಂಧಿತ ಇಲಾಖೆಗಳ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.

error: Content is protected !!