ಶಿವಮೊಗ್ಗ, ಏ. 03ಃ ಗ್ರಾಮೀಣ ಭಾಗದಲ್ಲಿ ಸಮಗ್ರ ಆರೋಗ್ಯ ಕುರಿತಾದ ಅರಿವು ಕಾರ್ಯಕ್ರಮಗಳು ನಡೆಯಬೇಕು. ಈ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಪ್ರತಿಪಾದಿಸಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ವಿನ್ ಲೈಫ್ ಮೆಟ್ರೋ ಯುನೈಟೆಡ್ ಹೆಲ್ತ್ ಕೇರ್ ಹಾಗೂ ಬೆಂಗಳೂರಿನ ಮಣಿಪಾಲ ಆಸ್ಪತ್ರೆ ಸಹಯೋಗದಲ್ಲಿ ಆಯೋಜನೆಗೊಂಡ ಆರೋಗ್ಯ ಉತ್ಸವ-02 ಕಾರ್ಯಾಗಾರ, ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಇಂದು ಆರೋಗ್ಯದ ಅರಿವು ಹೆಚ್ಚಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಆದರೆ, ಇದು ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಬಾರದು. ಗ್ರಾಮಾಂತರ ಪ್ರದೇಶಕ್ಕೂ ಕೂಡಾ ವಿಸ್ತಾರವಾಗಬೇಕು ಎಂದು ಆಶಿಸಿದರು.
ಇಂದಿನ ಒತ್ತಡ ಹಾಗೂ ವೇಗದ ಯುಗದಲ್ಲಿ ಆರೋಗ್ಯವನ್ನು ನಿರ್ಲಕ್ಷಿಸುವುದು ಸರಿಯಲ್ಲ. ಇಂದು ಕಾಯಿಲೆಯ ಸ್ವರೂಪಗಳೂ ಸಹ ಬದಲಾಗುತ್ತಿವೆ. ಇದಕ್ಕೆ ಇತ್ತೀಚಿನ ಕರೋನಾ ಪ್ರಕರಣವೇ ಸಾಕ್ಷಿ ಎಂದ ಅವರು, ಸಂದರ್ಭಾನುಸಾರವಾಗಿ ಈ ರೀತಿಯ ಆರೋಗ್ಯ ಕಾರ್ಯಾಗಾರಗಳನ್ನು ನಡೆಸುವುದರ ಮೂಲಕ ಸಮಾಜದಲ್ಲಿ ಅರಿವನ್ನು ಹೆಚ್ಚಿಸಬೇಕಿದೆ ಎಂದರು.
ಕರೋನಾ ಸಂದರ್ಭದಲ್ಲಿ ವೈದ್ಯರು, ದಾದಿಯರು ಹಾಗೂ ಆರೋಗ್ಯ ಕಾರ್ಯಕರ್ತರ ಸೇವೆ ಅನುಕರಣೀಯವಾಗಿತ್ತು. ಪ್ರತಿಯೊಬ್ಬರೂ ಕೂಡಾ ಅತ್ಯಂತ ಕಾಳಜಿಯಿಂದ ಕೆಲಸ ಮಾಡಿದ್ದಾರೆ ಎಂದು ಸ್ಮರಿಸಿದ ಅವರು, ಈ ಕಾರಣಕ್ಕಾಗಿಯೇ ನಾವು ಕರೋನಾವನ್ನು ಸಮರ್ಥವಾಗಿ ಎದುರಿಸಿ, ವಿಶ್ವಕ್ಕೇ ಮಾದರಿಯಾಗುವಂತಾಯಿತು ಎಂದರು.
ದಿನದಿಂದ ದಿನಕ್ಕೆ ಆರೋಗ್ಯ ದುಬಾರಿಯಾಗುತ್ತಿದೆ. ಚಿಕಿತ್ಸೆ ಜನ ಸಾಮಾನ್ಯರ ಕೈಗೆ ಎಟುಕುತ್ತಿಲ್ಲ. ಹೀಗಾಗಿ ಮುಂದಾಲೋಚನೆಯಿಂದ ವಿಮೆಯಂತಹ ಕ್ರಮಗಳನ್ನು ಅಳವಡಿಸಿಕೊಂಡು, ದುಬಾರಿ ವೆಚ್ಚವನ್ನು ನಿಭಾಯಿಸಬೇಕಿದೆ ಎಂದ ಅವರು, ಇಂದು ಸಣ್ಣಪುಟ್ಟ ಕಾಯಿಲೆಯನ್ನು ನಿರ್ಲಕ್ಷಿಸಿ, ಮುಂದೆ ಪಶ್ಚಾತ್ತಾಪ ಪಡುವಂತಾಗಬಾರದು ಎಂದು ಎಚ್ಚರಿಸಿದರು.
ಸಮಾನ ಮನಸ್ಕ ಸಂಘ ಸಂಸ್ಥೆಗಳು ಮುಂದೆ ಬಂದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದ ಅವರು, ಗ್ರಾಮಾಂತರ ಭಾಗದಲ್ಲಿ ಈ ರೀತಿಯ ಕಾರ್ಯಾಗಾರಗಳನ್ನು ಸಂಘಟನಾತ್ಮಕವಾಗಿ ಆಯೋಜಿಸೋಣ ಎಂದು ಆಶಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ. ಪೃಥ್ವಿ, ಡಾ. ಶಂಕರ್, ಮುಜೀಬ್, ರೆಹಮತ್, ಮೆಟ್ರೋ ಆಸ್ಪತ್ರೆಯ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇಡೀ ದಿನ ನಡೆದ ಈ ಕಾರ್ಯಾಗಾರ, ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸದಲ್ಲಿ ಮೊದಲಿಗೆ ಪ್ರಾಯೋಗಿಕ ತರಬೇತಿ ಮತ್ತು ರಸಪ್ರಶ್ನೆ ನಡೆಯಿತು. ನಂತರ ಒತ್ತಡ ಮೌಲ್ಯ ಮಾಪನ, ಹೆಸರಾಂತ ಮನೋವೈದ್ಯೆ ಡಾ|| ಪ್ರೀತಿ ವಿ. ಶಾನ್‍ಭಾಗ್‍ರವರಿಂದ ದೈನಂದಿನ ಬದುಕಿನಲ್ಲಿ ಒತ್ತಡ ನಿರ್ವಹಣೆ ಕುರಿತು ಉಪನ್ಯಾಸ ನಡೆಯಿತು. ಖ್ಯಾತ ಯೋಗ ತಜ್ಞ ಡಾ|| ಶಶಿಕಾಂತ ಕುಂಬಾರ್‍ರವರಿಂದ ಯೋಗ ಉಪನ್ಯಾಸ ಹಾಗೂ ತರಬೇತಿ ಹಾಗೂ ವಿನ್‍ಲೈ-ïನ ಆಡಳಿತ ನಿರ್ದೇಶಕ, ಮೆಟ್ರೋ ಯುನೈಟೆಡ್ ಹೆಲ್ತ್ ಕೇರ್‍ನ ವೈದ್ಯಕೀಯ ನಿರ್ದೇಶಕ ಡಾ|| ಪೃಥ್ವಿ ಬಿ.ಸಿ. ರವರಿಂದ
ಡಯಾಬಿಟಿಸ್ ಅಟ್ 360 ಡಿಗ್ರಿ ಕುರಿತು ಉಪನ್ಯಾಸ, ಪ್ರಶ್ನೋತ್ತರ ನಡೆಯಿತು.
ಡಾ. ಎನ್. ಎಸ್. ದೇವಾನಂದ್‍ರವರಿಂದ ಡಯಾಬಿಟಿಸ್ ವೆಲ್‍ನೆಸ್ ಸೆಂಟರ್ ಪರಿಚಯ, ಸಿಪಿಆರ್ ಪ್ರಾತ್ಯಕ್ಷಿಕೆ, ಆರೊಗ್ಯ ಅರಿವು ಕುರಿತಾದ ಕಿರು ನಾಟಕ ಪ್ರದರ್ಶನ ಹಾಗೂ ರಸಪ್ರಶ್ನೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ತ್ರಿವೇಣಿರವರಿಂದ ಸ್ವಾಗತ, ಅಮೃತರವರಿಂದ ನಿರೂಪಣೆ ಹಾಗೂ ಡಾ. ಶಂಕರ್‍ರವರಿಂದ ವಂದನಾರ್ಪಣೆ ನಡೆಯಿತು.