ಹಣಮಂತಪ್ಪ ಬೆಳಗುಂಪಿಯವರು ಕಲಬುರಗಿಯಲ್ಲಿ ವಾಸ, ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಯಲ್ಲಿ ಸತತ ಹದಿನಾರು ತರಬೇತಿಗಳಲ್ಲಿ ಪಾಲ್ಗೊಂಡು ತನ್ನ ಹೊಲದಲ್ಲಿರುವ ಚಿಕ್ಕು, ಮಾವು, ಪೇರಲ, ಲಿಂಬೆ ಹಾಗೂ ದ್ವಿದಳ ಧಾನ್ಯ ಬೆಳೆಗಳಾದ ಕಡಲೆ, ತೊಗರಿ, ಹೆಸರು ಬೆಳೆಯಲ್ಲಿ ಸಮಗ್ರ ಕೀಟ ಮತ್ತು ರೋಗ ಹತೋಟಿ ಕ್ರಮಗಳನ್ನು ಅಳವಡಿಸಿಕೊಂಡು ಗ್ರಾಮಕ್ಕೆ ಮಾದರಿ ರೈತರಾಗಿದ್ದಾರೆ. ಸಾವಯವ ಮೂಲದ ಹೊಂಗೆ, ಬೇವು ಆಧಾರಿತ ಕೀಟನಾಶಕಗಳನ್ನು, ಹಿಂಡಿಗಳನ್ನು ಕಾಲಕಾಲಕ್ಕೆ ಹವಾಮಾನ ಬದಲಾಗುವ ಸಮಯದಲ್ಲಿ ಉದ್ಭವವಾಗುವ ಕೀಟ ಮತ್ತು ರೊಗಗಳನ್ನು ಸಮಗ್ರವಾಗಿ ನಿರ್ವಹಿಸಿರುತ್ತಾರೆ.
ಹನುಮಂತಪ್ಪ ಬೆಳಗುಂಪಿಯವರು ವಿವಿಧ ಕೃಷಿ ಪ್ರವಾಸಗಳಲ್ಲಿ, ಗ್ರಾಮೀಣಾಭಿವೃದ್ಧಿ ಚಟುವಟಿಕೆ ಹೊಂದಿರುವ ಸರ್ಕಾರೇತರ ಸಂಸ್ಥೆಗಳಲ್ಲಿ ಪಾಲ್ಗೊಂಡು ತಮ್ಮ ಕೃಷಿ ಅನುಭವಗಳನ್ನು ಇತರೇ, ರೈತರಿಗೆ ಹಂಚಿಕೊಳ್ಳುತ್ತಾರೆ. ಮಲೆನಾಡು ಭಾಗಗಳಲ್ಲಿ ಬೆಳೆಯುವ ಸಾಗೂವನಿ, ಔಷಧೀಯ ಸಸ್ಯಗಳನ್ನು ತನ್ನ ಕ್ಷೇತ್ರದಲ್ಲಿ ಬೆಳೆದು, ಜಿಲ್ಲೆಯ ಶಾಲಾ ವಿದ್ಯಾರ್ಥಿಗಳು ತನ್ನ ಕ್ಷೇತ್ರಕ್ಕೆ ಪ್ರವಾಸ ಕೈಗೊಳ್ಳುವಂತೆ ಪ್ರೇರೇಪಿಸುತ್ತಾರೆ. ತನ್ನ ಸ್ವಂತ ವಾಹನದಲ್ಲಿ ನಗರದ ಜನತೆಗೆ ಸಾವಯವದಲ್ಲಿ ಬೆಳೆದ ಹಣ್ಣುಗಳನ್ನು ಕೋವಿಡ್ ಲಾಕ್ಡೌನ್ ಅವಧಿಯಲ್ಲಿ ನೀಡಿರುತ್ತಾರೆ. ಟ್ರೈಕೋಡರ್ಮಾ ಜೈವಿಕ ಶಿಲೀಂದ್ರನಾಶಕವನ್ನು ಬೀಜೋಪಚರಿಸಿ ಬಿತ್ತನೆ, ತೋಟಗಾರಿಕಾ ಬೆಳೆಗಳಿಗೆ ಎರೆಹುಳು ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಗಿಡದಿಂದ ಒಂದು ಅಡಿ ಸುತ್ತ ಮಣ್ನಿಗೆ ಸೇರಿಸುತ್ತಾರೆ. ಸಾಗೂವನಿ ಎಲೆಗಳಿಂದ ಒಣಗಿ ಬಿದ್ದ ತ್ಯಾಜ್ಯವನ್ನು ಕಾಂಪೋಸ್ಟ್ ತಯಾರಿಕೆಗೆ ಉಪಯೋಗಿಸಿ, ಮೌಲ್ಯವರ್ಧಿತ ಗೊಬ್ಬರವನ್ನು ತನ್ನ ಕ್ಷೇತ್ರದ ಜಮೀನುಗಳಿಗೆ ಮಾಗಿ ಉಳುಮೆಯ ನಂತರ ಸೇರಿಸುತ್ತಾರೆ.
ಇವರೊಟ್ಟಿಗೆ ಮಳೆಯಾಶ್ರಿತ ಪ್ರದೇಶದಲ್ಲಿ ತೊಗರಿ ಬೆಳೆಯುತ್ತಾರೆ. ಅದರಲ್ಲಿ ಅಂತರ ಬೆಳೆಯಾಗಿ ನವಣಿ, ಶಾಂವಿ, ಬರಗ, ಊದಲು ಸಿರಿ (ತೃಣ) ಧ್ಯಾನಗಳು ಬೆಳೆಯುತ್ತಾರೆ. ಇದೆಲ್ಲವೂ ದೂರದ ಊರುಗಳಲ್ಲಿ ಎನ್.ಜಿ.ಓ.ನಲ್ಲಿ ಸಮಾಜ ಸೇವಾ ಕೆಲಸದಲ್ಲಿ ಇದ್ದುಕೊಂಡೇ. ಆಳುಗಳ ಮೇಲೆ ನಿರ್ವಹಿಸಿಕೊಂಡು ಬಂದಿದ್ದಾರೆ. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಖಾಸಗಿ ಕೆಲಸ ಬಿಟ್ಟು ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ಕಲಬುರಗಿ ನಗರದಲ್ಲಿ ವಾಸವಾಗಿದ್ದಾರೆ. ಕೃಷಿಯುತ್ಪನ್ನವೆಲ್ಲಾ ಕಲಬುರಗಿಯಲ್ಲಿನ ತನ್ನ ಅಂಗಡಿಯಲ್ಲೇ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ಬೆಳೆದ ಉತ್ಪನ್ನವಾಗಿರುವದರಿಂದ ಬೇಡಿಕೆಯೂ ಹೆಚ್ಚಾಗಿದೆ.
ತಪ್ಪಿಯೂ ರಾಸಾಯನಿಕ ಗೊಬ್ಬರ ಇಲ್ಲವೇ, ರಾಸಾಯನಿಕ ಸಿಂಪರಣೆ ಮಾಡುವುದೇ ಇಲ್ಲ. ತಿಪ್ಪೆಗೊಬ್ಬರ, ತಮ್ಮದೇ ಕೃಷಿಯಂಗಳದಲ್ಲಿ ಸಿದ್ಧಪಡಿಸಿ ಜೀವಾಮೃತ, ಪಂಚಗವ್ಯ, ಬೇವಿನ ಎಣ್ಣಿ, ವಿವಿಧ ಕಂಪನಿಗಳ ಜೈವಿಕ ಸಾರಗಳು ಕೊಡುತ್ತಾರೆ. ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆಯುವ ತೊಗರಿಗೂ ಡಿಎಪಿ ಕೊಡುವುದಿಲ್ಲ. ಬಿಸಿಲು ನಾಡಿನಲ್ಲಿ ಮರ ಆದಾರಿತ ಕೃಷಿಗೆ ಹೆಚ್ಚು ಒತ್ತು ಕೊಟ್ಟು ತಿಂಗಳಿಗೆ ತನ್ನ ನಾಲ್ಕು ಎಕರೆ ಕ್ಷೇತ್ರದಿಂದ ರೂ. ಇಪ್ಪತೈದರಿಂದ ನಲ್ವತ್ತು ಸಾವಿರ ಆದಾಯ ಪಡೆಯುತ್ತಿದ್ದಾರೆ.
* ಡಾ. ಜಹೀರ ಅಹಮ್ಮದ್ಸಸ್ಯರೋಗ ತಜ್ಞ, ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ