ಶಿವಮೊಗ್ಗ, ಸೆಪ್ಟಂಬರ್. 17 : ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯು ದೇಶದ ಎಲ್ಲಾ ನಿವಾಸಿಗಳಿಗೆ ಆರೋಗ್ಯ ಸೇವೆ ಒದಗಿಸುವ ಮಹತ್ವದ ಯೋಜನೆಯಾಗಿದ್ದು ಕೋಟ್ಯಾಂತರ ಜನ ಈ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಸಾಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯು ಅನುಷ್ಠಾನಗೊಂಡು ಒಂದು ವರ್ಷ ಪೂರೈಸಿದ ಅಂಗವಾಗಿ ಏರ್ಪಡಿಸಲಾಗಿದ್ದ ಅರಿವು ಜಾಥಾ ಹಾಗೂ ಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಈ ಯೋಜನೆಯಡಿಯಲ್ಲಿ ಬಿ.ಪಿ.ಎಲ್.ಕುಟುಂಬಗಳಿಗೆ ಒಂದು ವರ್ಷಕ್ಕೆ 5ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ ದೊರೆಯಲಿದೆ ಎಂದವರು ನುಡಿದರು.
ಒಂದು ದೇಶದ ಉನ್ನತಿ ಆ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರೂ ಆರೋಗ್ಯವಾಗಿದ್ದಾಗ ಸಾಧ್ಯವಾಗುತ್ತದೆ. ದೇಶ ಎಲ್ಲಾ ಕ್ಷೇತ್ರಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂದುವರೆದಿದ್ದರೂ ಆರೋಗ್ಯ ಕ್ಷೇತ್ರದ ಸಾಧನೆ ಅಷ್ಟೊಂದು ಆಶಾದಾಯಕವಾಗಿಲ್ಲದಿರುವುದು ಬೇಸರದ ಸಂಗತಿ. ದೇಶದ ಕಡುಬಡುವರು ಆರೋಗ್ಯ ಸೇವೆಯನ್ನು ಪಡೆದುಕೊಳ್ಳುವಲ್ಲಿ ಸಮರ್ಥರಾಗಿಲ್ಲದಿರುವುದನ್ನು ಗಮನಿಸಿ, ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದವರು ನುಡಿದರು.
ಈ ಯೋಜನೆಯಡಿ ಬಿ.ಪಿ.ಎಲ್.ಕುಟುಂಬದವರು ರೂ.5ಲಕ್ಷ ರೂ.ಗಳವರೆಗೆ ಹಾಗೂ ಎ.ಪಿ.ಎಲ್. ಕುಟುಂಬದ ಸದಸ್ಯರು ವಾರ್ಷಿಕವಾಗಿ 1.50ಲಕ್ಷ ರೂ.ಗಳವರೆಗೆ ಉಚಿತ ಆರೋಗ್ಯ ಸೌಲಭ್ಯ ದೊರೆಯಲಿದೆ. ಈ ಯೋeನೆಯಡಿ 1650 ಚಿಕಿತ್ಸಾ ವಿಧಾನಗಳಿಗೆ ಚಿಕಿತ್ಸೆ ಲಭ್ಯವಿದೆ. ಸಾಮಾನ್ಯ ದ್ವಿತೀಯ ಹಂತದ 291ಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುತ್ತಿದೆ ಎಂದರು.
ದೇಶದಲ್ಲಿ ಒಂದು ವರ್ಷದ ಅವಧಿಯಲ್ಲಿ 20ಕೋಟಿ ಜನ ಹಾಗೂ ಜಿಲ್ಲೆಯಲ್ಲಿ 7,000ಸಾವಿರ ಜನರು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯ ಜನರು ಈ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ಸುರಗೀಹಳ್ಳಿ, ಡಾ|| ನಾಗರಾಜ್ನಾಯ್ಕ್, ಡಾ|| ಶಿವಯೋಗಿ, ಡಾ||ನಟರಾಜ್, ಡಾ||ಹನುಮಂತಪ್ಪ, ಡಾ||ಶಮಾ, ಸರ್ಜಿ ಆಸ್ಪತ್ರೆಯ ಆಡಳಿತಾಧಿಕಾರಿ ಮುರಳಿ, ಸಂಗಮೇಶ್, ಎಂ.ಎ.ಅತ್ತಾರ್, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ಶ್ರೇಣಿಯ ಅಧಿಕಾರಿಗಳು, ಸಿಬ್ಬಂಧಿಗಳು, ನರ್ಸಿಂಗ್ ಕಾಲೇಜಿನ ಪ್ರಶಿಕ್ಷಣಾರ್ಥಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.